ADVERTISEMENT

ನಾಯಿ ಸಾವು: ಎಫ್‌ಐಆರ್ ದಾಖಲು

​ಪ್ರಜಾವಾಣಿ ವಾರ್ತೆ
Published 14 ಜೂನ್ 2017, 19:47 IST
Last Updated 14 ಜೂನ್ 2017, 19:47 IST
ನಾಯಿ ಸಾವು: ಎಫ್‌ಐಆರ್ ದಾಖಲು
ನಾಯಿ ಸಾವು: ಎಫ್‌ಐಆರ್ ದಾಖಲು   

ಬೆಂಗಳೂರು: ಸಂತಾನಹರಣ ಶಸ್ತ್ರಚಿಕಿತ್ಸೆ ಬಳಿಕ ಸೂಕ್ತ ಆರೈಕೆ ಸಿಗದೆ ಬೀದಿ ನಾಯಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ಸರ್ವೋದಯ ಟ್ರಸ್ಟ್ ನಿರ್ದೇಶಕರು, ವೈದ್ಯರ ವಿರುದ್ಧ ಬಾಣಸವಾಡಿ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಈ ಸಂಬಂಧ ಬಿಬಿಎಂಪಿ ಪ್ರಾಣಿ ದಯಾ ಘಟಕದ ಇನ್‌ಸ್ಪೆಕ್ಟರ್ ನವೀನಾ ಕಾಮತ್ ಜೂನ್ 12ರಂದು ದೂರು ಕೊಟ್ಟಿದ್ದಾರೆ.

‘ಬೀದಿ ನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸಾ ಕಾರ್ಯವನ್ನು ಸರ್ವೋದಯ ಟ್ರಸ್ಟಿಗೆ ವಹಿಸಲಾಗಿದೆ. ಈಚೆಗೆ ಹೆಣ್ಣು ನಾಯಿಯೊಂದಕ್ಕೆ ಚಿಕಿತ್ಸೆ ನೀಡಿದ್ದ ಟ್ರಸ್ಟ್‌ನ ವೈದ್ಯರು, ಗಾಯ ವಾಸಿಯಾಗುವ ಮುನ್ನವೇ ಅದನ್ನು ಹೊರಗೆ ಬಿಟ್ಟಿದ್ದರು.  ತೀವ್ರ ರಕ್ತಸ್ರಾವ ಉಂಟಾಗಿ ಆ ನಾಯಿ,  ಕೋಗಿಲು ಕ್ರಾಸ್ ಬಳಿ ಪ್ರಜ್ಞಾಹೀನವಾಗಿ ಬಿದ್ದಿತ್ತು’ ಎಂದು ದೂರಿನಲ್ಲಿ ವಿವರಿಸಿದ್ದಾರೆ.

‘ಸ್ಥಳೀಯರೊಬ್ಬರು ನಾಯಿಯನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಅದು ಮೃತಪಟ್ಟಿತ್ತು. ಈ ಸಾವಿಗೆ ಟ್ರಸ್ಟ್‌ ನಿರ್ದೇಶಕರು ಹಾಗೂ ವೈದ್ಯರ ನಿರ್ಲಕ್ಷ್ಯವೇ ಕಾರಣ. ಹೀಗಾಗಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು’ ಎಂದು ನವೀನಾ ಕೋರಿದ್ದಾರೆ.

ADVERTISEMENT

‘ಶಸ್ತ್ರಚಿಕಿತ್ಸೆಗೆ ಒಳಗಾದ ನಾಯಿಗೆ 1 ವಾರ ಆರೈಕೆ ಮಾಡಬೇಕು. ಗಾಯ ವಾಸಿಯಾದ ನಂತರವೇ ಹೊರಗೆ ಬಿಡಬೇಕು. ಇಲ್ಲವಾದರೆ, ಅದು ಕಸದ ರಾಶಿಯಲ್ಲಿ ಮಲಗುವುದರಿಂದ ಗಾಯ ಉಲ್ಬಣಿಸಿ ಪ್ರಾಣಕ್ಕೇ ಕುತ್ತು ಬರುತ್ತದೆ. ಸಾಕಷ್ಟು ನೋಟಿಸ್ ಕೊಟ್ಟರೂ ಟ್ರಸ್ಟ್‌ನವರು ಎಚ್ಚೆತ್ತುಕೊಳ್ಳಲಿಲ್ಲ. ಹೀಗಾಗಿ, ಠಾಣೆ ಮೆಟ್ಟಿಲೇರಿದ್ದೇನೆ’ ಎಂದು ನವೀನಾ ಹೇಳಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.