ಬೆಂಗಳೂರು: `ಗ್ಲಾಕೊಮಾ ಸೊಸೈಟಿ ಆಫ್ ಇಂಡಿಯಾ~ದ ಸಹಯೋಗದಲ್ಲಿ `ಬೆಂಗಳೂರು ಆಪ್ತಾಲ್ಮಿಕ್ ಸೊಸೈಟಿ~ (ಬಿಒಎಸ್)ಯು ಈ ತಿಂಗಳ 11ರಿಂದ 17ರವರೆಗೆ ವಿಶ್ವ ಗ್ಲಾಕೊಮಾ ಜಾಗೃತಿ ಸಪ್ತಾಹವನ್ನು ಹಮ್ಮಿಕೊಂಡಿದೆ.
`ಭಾನುವಾರ ನಗರದ ಸ್ವಾತಂತ್ರ್ಯ ಉದ್ಯಾನದಿಂದ ಮಹಾತ್ಮ ಗಾಂಧಿ ಪ್ರತಿಮೆವರೆಗೆ ಬೃಹತ್ ಕಾಲ್ನಡಿಗೆ ಜಾಥಾ ಹಮ್ಮಿಕೊಳ್ಳಲಾಗಿದೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಚಂದ್ರಶೇಖರ ಕಂಬಾರ, ನಟ ಶಿವರಾಜ್‌ಕುಮಾರ್ ಮೊದಲಾದ ಗಣ್ಯರು ಹಾಗೂ 200ಕ್ಕೂ ಹೆಚ್ಚು ನೇತ್ರ ತಜ್ಞರು ಪಾಲ್ಗೊಳ್ಳಲಿದ್ದಾರೆ~ ಎಂದು ಗ್ಲಾಕೊಮಾ ಚಿಕಿತ್ಸಾ ತಜ್ಞ ಡಾ. ಸಿರೀಶ್ ನೆಲಿವಿಗಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
`ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ 6.5 ಕೋಟಿ ಜನರು ಗ್ಲಾಕೊಮಾದಿಂದ ಅಂಧತ್ವಕ್ಕೆ ಒಳಗಾಗಿದ್ದಾರೆ. ಭಾರತದಲ್ಲಿ 1.19 ಕೋಟಿ ಜನ ಗ್ಲಾಕೊಮಾ ಬಾಧಿತರಾಗಿದ್ದಾರೆ. ಗ್ಲಾಕೊಮಾ ದೃಷ್ಟಿಯ ನರವನ್ನು ಹಾನಿಗೊಳಪಡಿಸುವ ನೇತ್ರ ಸಮಸ್ಯೆಯಾಗಿದೆ~ ಎಂದು ಅವರು ಹೇಳಿದರು.
ನೇತ್ರ ತಜ್ಞೆ ಡಾ.ಗೌರಿ ಜೆ.ಮೂರ್ತಿ ಮಾತನಾಡಿ, `ಗ್ಲಾಕೊಮಾ, ಯಾವುದೇ ಮುನ್ಸೂಚನೆ ನೀಡದೇ ಮೌನವಾಗಿಯೇ ದೃಷ್ಟಿ ನಾಶಮಾಡುವ ಕಾಯಿಲೆಯಾಗಿದೆ. ನೂರು ಜನರಲ್ಲಿ ನಾಲ್ವರಿಗೆ ಈ ಕಾಯಿಲೆ ಬರುವ ಸಾಧ್ಯತೆ ಇದೆ. ಆ ನಾಲ್ವರಲ್ಲಿ ಮೂವರಿಗೆ ಗ್ಲಾಕೊಮಾ ಬಂದಿರುವ ಬಗ್ಗೆ ಗೊತ್ತಾಗಿರುವುದಿಲ್ಲ~ ಎಂದರು.
`40 ವರ್ಷ ಮೇಲ್ಪಟ್ಟವರಿಗೆ ಈ ಕಾಯಿಲೆ ಬರುವ ಸಾಧ್ಯತೆ ಹೆಚ್ಚು, ಆನುವಂಶಿಕವಾಗಿ ಬರುವ ಸಂಭವವೂ ಇದೆ. ಮಧುಮೇಹಿಗಳು, ಬಹಳ ವರ್ಷಗಳಿಂದ ಸ್ಟಿರಾಯ್ಡಗಳನ್ನು ಬಳಸುತ್ತಿರುವವರು, ಕಣ್ಣಿನ ಗಾಯಗಳಾದವರು- ಇಂತಹವರಿಗೂ ಗ್ಲಾಕೊಮಾ ಬರಬಹುದು~ ಎಂದು ಅವರು ಹೇಳಿದರು.
`ಗ್ಲಾಕೊಮಾದಿಂದ ಅಂಧತ್ವ ಉಂಟಾದ ಮೇಲೆ ಅದಕ್ಕೆ ಯಾವುದೇ ಚಿಕಿತ್ಸೆ ಅಥವಾ ಪರಿಹಾರ ಇಲ್ಲ. ಆದರೆ ಅಂತಹ ಅಂಧತ್ವ ಉಂಟಾಗುವ ಮುನ್ನ ರೋಗದ ಇರುವಿಕೆ ಪತ್ತೆಯಾದರೆ ಜೀವನ ಪರ್ಯಂತ ಚಿಕಿತ್ಸೆಯಿಂದ ಸಮಸ್ಯೆ ಹೆಚ್ಚಾಗುವುದನ್ನು ನಿಯಂತ್ರಿಸಬಹುದು. 40 ವರ್ಷದ ನಂತರ ಪ್ರತಿಯೊಬ್ಬರೂ ನಿಯಮಿತವಾಗಿ ಕನಿಷ್ಠ ವರ್ಷಕ್ಕೊಮ್ಮೆ ಅರ್ಹ ನೇತ್ರ ತಜ್ಞರಿಂದ ಕಣ್ಣಿನ ಪರೀಕ್ಷೆ ಮಾಡಿಸಿಕೊಳ್ಳಬೇಕು~ ಎಂದು ಅವರು ಹೇಳಿದರು.
ಆರೋಗ್ಯ ಇಲಾಖೆಯ ನೇತ್ರ ಚಿಕಿತ್ಸಾ ವಿಭಾಗದ ಜಂಟಿ ನಿರ್ದೇಶಕ ಡಾ.ನಾಗರಾಜು, ಬಿಒಎಸ್ ಕಾರ್ಯದರ್ಶಿ ಡಾ.ಎಂ.ಎಸ್.ರವೀಂದ್ರ, ತಜ್ಞರಾದ ಡಾ. ಸತಿದೇವಿ ಮೊದಲಾದವರು ಗೋಷ್ಠಿಯಲ್ಲಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.