ಬೆಂಗಳೂರು: ‘ಕಣಿಯರ ಸಮುದಾಯವು ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ರಾಜಕೀಯವಾಗಿ ಹಿಂದುಳಿದಿದೆ. ಹೀಗಾಗಿ ಸಮುದಾಯದ ಅಭಿವೃದ್ಧಿಗೆ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು’ ಎಂದು ಕಣಿಯರ ಸೇವಾ ಸಮಾಜದ ಅಧ್ಯಕ್ಷ ಆರ್.ಪ್ರಸನ್ನಕುಮಾರ್ ಒತ್ತಾಯಿಸಿದರು.
ಕಣಿಯರ ಸೇವಾ ಸಮಾಜವು ನಗರದಲ್ಲಿ ಭಾನುವಾರ ಏರ್ಪಡಿಸಿದ್ದ ಎರಡನೇ ‘ಕಣಿಯರ ಮಹಾಸಮ್ಮೇಳನ’ದಲ್ಲಿ ಅವರು ಮಾತನಾಡಿದರು. ‘ಈ ನಿಗಮಕ್ಕೆ ₹ 10 ಕೋಟಿ ಅನುದಾನ ಬಿಡುಗಡೆ ಮಾಡಬೇಕು. ಸಮುದಾಯದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರೋತ್ಸಾಹಿಸಲು ಶಾಲೆ, ಕಾಲೇಜು ಹಾಗೂ ವಿದ್ಯಾರ್ಥಿ ನಿಲಯಗಳನ್ನು ನಿರ್ಮಿಸಲು 10 ಎಕರೆ ಜಮೀನು ಮಂಜೂರು ಮಾಡಬೇಕು’ ಎಂದು ಮನವಿ ಮಾಡಿದರು.
ಸಮುದಾಯದವರು ರಾಜ್ಯದಲ್ಲಿ 2 ಲಕ್ಷ ಮಂದಿ ಇದ್ದಾರೆ. ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂದು ಹಲವು ಬಾರಿ ಮನವಿ ಸಲ್ಲಿಸಲಾಗಿತ್ತು. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಮತ್ತು ಸಮುದಾಯದ ಅರ್ಹರನ್ನು ಗುರುತಿಸಿ ರಾಜಕೀಯ ಪ್ರಾತಿನಿಧ್ಯ ನೀಡುವಂತೆ ಒತ್ತಾಯಿಸಿದರು.
ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ರಾಜಕೀಯವಾಗಿ ಮೇಲೆ ಬರಬೇಕಾದರೆ ಜಾತಿ ಬಲ ಇರಬೇಕು. ಇಲ್ಲವೇ, ಹಣ ಇರಬೇಕು. ಎರಡೂ ಇಲ್ಲದಿದ್ದರೆ ಮುಂದೆ ಬರಲು ಸಾಧ್ಯವಿಲ್ಲ’ ಎಂದು ಹೇಳಿದರು. ದೇಶದಲ್ಲಿ ಜಾತಿ ವ್ಯವಸ್ಥೆ ಇಂದಿಗೂ ಗಟ್ಟಿಯಾಗಿದೆ. ಹಣ ಮತ್ತು ಜಾತಿ ಬೆಂಬಲ ಇಲ್ಲದವರು ಕೇವಲ ಓಟು ಹಾಕಿಕೊಂಡು ಇರಬೇಕಾಗುತ್ತದೆ. ರಾಜ್ಯದಲ್ಲಿ ಕಡಿಮೆ ಸಂಖ್ಯೆಯಲ್ಲಿರುವ ಕಣಿಯರ ಸಮುದಾಯದವರು ಸೌಲಭ್ಯಗಳನ್ನು ಪಡೆಯಲು ಗಟ್ಟಿಯಾಗಿ ಧ್ವನಿ ಎತ್ತಬೇಕು ಎಂದರು.
ಸಮಾಜದಲ್ಲಿ ಎಲ್ಲ ಸಮುದಾಯಗಳಿಗೂ ಸಮಾನ ಅವಕಾಶಗಳು, ಸೌಲಭ್ಯಗಳು ಸಿಗಬೇಕು. ಆಗ ಮಾತ್ರ ಸಮಾಜದಲ್ಲಿ ಪರಿವರ್ತನೆ ತರಲು ಸಾಧ್ಯ. ಹೀಗಾಗಿ ನಮ್ಮ ಸರ್ಕಾರ ಸಾಮಾಜಿಕ ನ್ಯಾಯ ಒದಗಿಸುವ ಕೆಲಸ ಮಾಡುತ್ತಿದೆ ಎಂದರು. ಬಿಬಿಎಂಪಿ ಚುನಾವಣೆ ಘೋಷಣೆಯಾಗಿದೆ. ನೀತಿ ಸಂಹಿತೆ ಇರುವುದರಿಂದ ಭರವಸೆ ನೀಡಿದರೆ ತಪ್ಪಾಗುತ್ತದೆ. ಹೀಗಾಗಿ ಚುನಾವಣೆ ಮುಗಿದ ಬಳಿಕ ಸಮುದಾಯದ ಮುಖಂಡರ ಜತೆ ಚರ್ಚಿಸಿ ಬೇಡಿಕೆಗಳನ್ನು ಈಡೇರಿಸುತ್ತೇನೆ ಎಂದು ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.