ADVERTISEMENT

ನಿಮಿಷಕ್ಕೆ 68 ಮುಚ್ಚಳ ತೆಗೆದ ಭೂಪ!

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2011, 19:15 IST
Last Updated 17 ಸೆಪ್ಟೆಂಬರ್ 2011, 19:15 IST

ಬೆಂಗಳೂರು:  ಕೇವಲ 60 ಸೆಕೆಂಡುಗಳಲ್ಲಿ 68 ಬಿಯರ್ ಬಾಟಲಿಗಳ ಮುಚ್ಚಳಗಳನ್ನು ಹಲ್ಲಿನಿಂದ ಕಚ್ಚಿ ತೆಗೆಯುವ ಮೂಲಕ ಗಿನ್ನಿಸ್ ದಾಖಲೆಯನ್ನು ಸರಿಗಟ್ಟುವ ಪ್ರಯತ್ನ ನಗರದ ಕುಂಬಳಗೋಡಿ ನಲ್ಲಿರುವ ಕಂಟ್ರಿ ಕ್ಲಬ್‌ನಲ್ಲಿ ಶನಿವಾರ ನಡೆಯಿತು.

ಮೂಲತಃ ಚಿಕ್ಕಮಗಳೂರಿನ ಕೆ.ಸಿ.ಮುರಳಿ ಅವರು 1 ನಿಮಿಷಕ್ಕೆ 68 ಬಿಯರ್ ಬಾಟಲಿಗಳ ಮುಚ್ಚಳವನ್ನು ಬಾಯಲ್ಲಿ ಕಚ್ಚಿ ತೆಗೆಯುವ ಮೂಲಕ ನೂತನ ದಾಖಲೆ ಸೃಷ್ಟಿಸಿದರು. ಒಟ್ಟು 76 ಬಿಯರ್ ಬಾಟಲಿಗಳನ್ನು ಇಡಲಾಗಿತ್ತು. ಆದರೆ 1 ನಿಮಿಷಗಳಲ್ಲಿ 68 ಬಾಟಲಿಗಳ ಮುಚ್ಚಳಗಳನ್ನು ತೆಗೆಯಲು ಅವರು ಯಶಸ್ವಿಯಾದರು.

ಕಳೆದ ಬಾರಿ ಬೆಂಗಳೂರಿನ ಗಿರೀಶ್ ಕುಮಾರ್ ಅವರು 63 ಬಿಯರ್ ಬಾಟಲಿಗಳ ಮುಚ್ಚಳಗಳನ್ನು ಹಲ್ಲಿನಿಂದ ತೆಗೆದು ಗಿನ್ನಿಸ್ ದಾಖಲೆ ಸೃಷ್ಟಿಸಿದ್ದರು.  ಆಡುಗೋಡಿಯಲ್ಲಿರುವ ಬಾಷ್ ಕಂಪೆನಿಯಲ್ಲಿ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿರುವ ಕೆ.ಸಿ.ಮುರುಳಿ ಅವರು ಮೂರು ತಿಂಗಳ ಕಾಲ ಸತತ ಅಭ್ಯಾಸ ನಡೆಸಿ ಯಶಸ್ವಿಯಾಗಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮುರುಳಿ, `ಕೆಲವೇ ತಿಂಗಳ ಹಿಂದೆ ಗಿರೀಶ್ ಅವರ ದಾಖಲೆಯನ್ನು ನೋಡಿದ್ದೆ. ಮೊದಲು ಪೆಪ್ಸಿ ಬಾಟಲಿಗಳ ಮುಚ್ಚಳವನ್ನು ತೆಗೆಯುಲು ಪ್ರಯತ್ನಿಸಿ, ಯಶಸ್ವಿಯಾದೆ. ನಂತರ ಅದನ್ನೆ ಮುಂದುವರಿಸುವಂತೆ ಗೆಳೆಯರು ಪ್ರೋತ್ಸಾಹಿಸಿದರು~ ಎಂದು ಅನುಭವ ಹಂಚಿಕೊಂಡರು.
 
`ಈವರೆಗೆ ವಿವಿಧ ಹಂತದಲ್ಲಿ ನಡೆಸಿದ ಪ್ರಯೋಗದಲ್ಲಿ ಒಟ್ಟು ಸಾವಿರ ಬಾಟಲಿಗಳ ಮುಚ್ಚಳವನ್ನು ತೆಗೆದಿದ್ದೇನೆ. ಪ್ರತಿ ಹಂತದಲ್ಲೂ ನನ್ನ ಗೆಳೆಯರು ನನಗೆ ಸಹಕಾರ ನೀಡಿದ್ದರಿಂದ ಈ ದಾಖಲೆ ಮಾಡಲು ಸಾಧ್ಯವಾಯಿತು~ ಎಂದು ಹೇಳಿದರು.

ನಿರ್ಣಾಯಕರಾಗಿ ಐಎಎಸ್ ಅಧಿಕಾರಿ ಅರವಿಂದ ಜನ್ನು, ಬಾಷ್ ಲಿಮಿಟೆಡ್‌ನ ಬಿ.ಎಸ್.ವಿಶ್ವಾಸ್, ನೋಟರಿ ಸಿ.ಎನ್.ಚಂದ್ರಶೇಖರ್, ಕರ್ನಾಟಕ ಅಥ್ಲೆಟಿಕ್ ಅಸೋಸಿಯೇಷನ್ ಅಧ್ಯಕ್ಷ ಬಿ.ವಿ.ಹರೀಶ್‌ಕುಮಾರ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.