ADVERTISEMENT

ನಿರಾಶ್ರಿತರ ಜನಗಣತಿ: ಅವಧಿ ವಿಸ್ತರಣೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2011, 20:10 IST
Last Updated 24 ಫೆಬ್ರುವರಿ 2011, 20:10 IST

ಬೆಂಗಳೂರು: ಈಗಾಗಲೇ ಆರಂಭಗೊಂಡಿರುವ ಜನಗಣತಿ ಪ್ರಕ್ರಿಯೆಯಲ್ಲಿ ನಗರ ನಿರಾಶ್ರಿತರ ಜನಗಣತಿ ಕಾರ್ಯಕ್ಕೆ ಒಂದು ದಿನ ಅವಕಾಶ ನೀಡಲಾಗಿದೆ. ಆದರೆ ಈ ಅವಧಿಯನ್ನು ವಿಸ್ತರಿಸಬೇಕು ಎಂದು ನಗರ ನಿರಾಶ್ರಿತರಿಗಾಗಿ ಸ್ವಯಂ ಸೇವಾ ಸಂಸ್ಥೆಗಳ ವೇದಿಕೆ ಸದಸ್ಯ ಲಕ್ಷ್ಮೀಪತಿ ಆಗ್ರಹ ಮಾಡಿದರು.

‘ಸರ್ಕಾರ ಈ ತಿಂಗಳ 28ರ ರಾತ್ರಿ ನಗರ ನಿರಾಶ್ರಿತರ ಜನಗಣತಿ ಕಾರ್ಯಕ್ಕೆ ಅವಕಾಶ ಕಲ್ಪಿಸಿದೆ. ಕೇವಲ ಬೆಂಗಳೂರಿನಲ್ಲೇ 16,000ಕ್ಕೂ ಹೆಚ್ಚು ನಿರಾಶ್ರಿತರಿದ್ದು, ಒಂದು ರಾತ್ರಿಯಲ್ಲೇ ಇಷ್ಟು ದೊಡ್ಡ ಸಂಖ್ಯೆಯ ನಿರಾಶ್ರಿತರನ್ನು ಗಣತಿ ಮಾಡುವುದು ಸಾಧ್ಯವಿಲ್ಲ’ ಎಂದು ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಜನಗಣತಿ ಅಡಿಯಲ್ಲಿ ಈ ನಿರಾಶ್ರಿತರು ದಾಖಲುಗೊಳ್ಳದೇ ಹೋದರೆ, ಸರ್ಕಾರದಿಂದ ಸಿಗುವ ಸವಲತ್ತುಗಳಿಂದ ವಂಚಿತರಾಗುತ್ತಾರೆ.

 ನಿರಾಶ್ರಿತರ ಸಂಖ್ಯೆಯು ದಾಖಲುಗೊಳಿಸದೇ ರಾಜ್ಯದಲ್ಲಿ ನಿರಾಶ್ರಿತರ ಸಂಖ್ಯೆ ಕಡಿಮೆಯಿದೆ ಎಂಬುದನ್ನು ಬಿಂಬಿಸಲು ಸರ್ಕಾರ ಹುನ್ನಾರ ನಡೆಸಿದೆ’ ಎಂದು ಅವರು ಆರೋಪಿಸಿದರು.

ಸಂಘದ ಸದಸ್ಯೆ ಎನ್.ಎಸ್.ರಜನಿ ಮಾತನಾಡಿ, ‘ಮೇಲು ಸೇತುವೆ, ಧಾರ್ಮಿಕ ಕೇಂದ್ರ, ಪಾದಚಾರಿ ಮಾರ್ಗ, ಸಾರ್ವಜನಿಕ ಸ್ಥಳಗಲ್ಲಿ ಜೀವನ ನಡೆಸುವ ಜನರನ್ನು ಜನಗಣತಿಯಲ್ಲಿ ದಾಖಲಿಸುವುದರಿಂದ ಅಭಿವೃದ್ದಿ ಯೋಜನೆಗಳನ್ನು ರೂಪಿಸಲು ಸಾಧ್ಯವಾಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.