ADVERTISEMENT

ನಿವೇಶನ ಹಂಚದ ಬಿಡಿಎ ಬೇಕೆ?

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2012, 19:30 IST
Last Updated 11 ಅಕ್ಟೋಬರ್ 2012, 19:30 IST

ಬೆಂಗಳೂರು: ಎಚ್‌ಆರ್‌ಬಿ ಮೂರನೆಯ ಹಂತದ ಬಡಾವಣೆ ನಿರ್ಮಾಣಕ್ಕಾಗಿ ಭೂ ಸ್ವಾಧೀನ ಪ್ರಕ್ರಿಯೆ ಆರಂಭವಾಗಿ 34 ವರ್ಷಗಳು ಕಳೆದರೂ ಇದುವರೆಗೆ ಯಾರಿಗೂ ನಿವೇಶನ ಹಂಚಿಕೆ ಮಾಡದಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಕ್ರಮಕ್ಕೆ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

`ಅರ್ಜಿ ಸಲ್ಲಿಸಿದ ಬೆಂಗಳೂರು ವಾಸಿಗಳಿಗೆ 34 ವರ್ಷವಾದರೂ ನಿವೇಶನ ಹಂಚಿಕೆ ಮಾಡುವುದು ಸಾಧ್ಯವಿಲ್ಲ ಎಂದಾದರೆ, ಪ್ರಾಧಿಕಾರದ ಅಗತ್ಯ ಇದೆಯೇ~ ಎಂದು ನ್ಯಾಯಮೂರ್ತಿ ಎನ್. ಕುಮಾರ್ ಮತ್ತು ಅರವಿಂದ ಕುಮಾರ್ ನೇತೃತ್ವದ ವಿಭಾಗೀಯ ಪೀಠ ಪ್ರಶ್ನಿಸಿದೆ.

ಎಚ್‌ಆರ್‌ಬಿ ಮೂರನೆಯ ಹಂತದ ಬಡಾವಣೆ ನಿರ್ಮಿಸಲು 982.6 ಎಕರೆ ಭೂಮಿ ಸ್ವಾಧೀನಕ್ಕೆ ಬಿಡಿಎ 1978ರಲ್ಲಿ ಮೊದಲ ಅಧಿಸೂಚನೆ ಹೊರಡಿಸಿತು. ನಂತರ ಭೂಮಿಯ ಮಾಲೀಕರು ಮತ್ತು ನಿವೇಶನ ಕೋರಿ ಅರ್ಜಿ ಸಲ್ಲಿಸಿರುವವರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಿತು. ಅದರ ಪರಿಶೀಲಿಸಲು 11 ವರ್ಷ ತೆಗೆದುಕೊಂಡು 1989ರಲ್ಲಿ 433.32 ಎಕರೆ ಭೂಮಿ ಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಹೊರಡಿಸಿತು.

ಇದರಲ್ಲಿ 107.38 ಎಕರೆ ಭೂಮಿಯ ಮಾಲೀಕರಿಗೆ ಮಾತ್ರ ಪರಿಹಾರ ನೀಡಲಾಗಿದೆ. ಅಂತಿಮ ಅಧಿಸೂಚನೆಯಲ್ಲಿದ್ದ 433.32 ಎಕರೆ ಪೈಕಿ 1989ರಲ್ಲಿ 97.7 ಎಕರೆ ಭೂಮಿಯನ್ನು ಮಾತ್ರ ಸ್ವಾಧೀನ ಮಾಡಿಕೊಳ್ಳಲಾಯಿತು. 10.31 ಎಕರೆ ಭೂಮಿಯ ಮಾಲೀಕರಿಗೆ ಪರಿಹಾರ ನೀಡಲಾಗಿದ್ದರೂ, ಭೂ ಸ್ವಾಧೀನ ಆಗಿಲ್ಲ. 325.34 ಎಕರೆ ಭೂಮಿಯ ಮಾಲೀಕರಿಗೆ ಯಾವುದೇ ಪರಿಹಾರ ನೀಡಿಲ್ಲ. ಬಿಡಿಎ ಇದುವರೆಗೆ ಬಡಾವಣೆ ನಿರ್ಮಿಸಿಲ್ಲ, ಯಾರಿಗೂ ನಿವೇಶನ ಹಂಚಿಕೆ ಮಾಡಿಲ್ಲ ಎಂದು ನ್ಯಾಯಪೀಠ ಆಕ್ಷೇಪಿಸಿದೆ.

ಇದು ಪ್ರಾಧಿಕಾರದಲ್ಲಿ ಕೆಲಸ ಮಾಡುವವರ ವೃತ್ತಿಪರ ಮೌಲ್ಯಗಳ ಮೇಲೆ ಬೆಳಕು ಚೆಲ್ಲುತ್ತದೆ ಎಂದು ಪೀಠ ಹೇಳಿದೆ. ಎಚ್‌ಆರ್‌ಬಿ ಮೂರನೆಯ ಹಂತದ ಬಡಾವಣೆ ನಿರ್ಮಾಣ ಸಂಬಂಧ ನೀಡಿರುವ ಆದೇಶದಲ್ಲಿ ನ್ಯಾಯಪೀಠ ಬಿಡಿಎ ಎದುರು ಕೆಲವು ಪ್ರಶ್ನೆಗಳನ್ನಿಟ್ಟಿದ್ದು, ಪ್ರಮಾಣಪತ್ರದ ಮೂಲಕ ಉತ್ತರ ನೀಡುವಂತೆ ನಿರ್ದೇಶಿಸಿದೆ. ಅದೆಂದರೆ-

* ಭೂಸ್ವಾಧೀನಕ್ಕೆ ಪ್ರಾಥಮಿಕ ಅಧಿಸೂಚನೆ ಹೊರಡಿಸಿದ 11 ವರ್ಷಗಳ ನಂತರ ಅಂತಿಮ ಅಧಿಸೂಚನೆ ಹೊರಡಿಸಲಾಯಿತು. ಈ ವಿಳಂಬಕ್ಕೆ ಕಾರಣವೇನು?

* ಬಡಾವಣೆ ನಿರ್ಮಾಣಕ್ಕೆ 982.06 ಎಕರೆಯ ಅಗತ್ಯವಿದೆ ಎಂದು ಪ್ರಾಥಮಿಕ ಅಧಿಸೂಚನೆ ಹೊರಡಿಸಿ, ಅಂತಿಮ ಅಧಿಸೂಚನೆಯನ್ನು ಕೇವಲ 433.32 ಎಕರೆಗೆ ಸೀಮಿತಗೊಳಿಸಲು ಕಾರಣ ಏನು? ಈ ಪೈಕಿ 325.34 ಎಕರೆಯ ಮಾಲೀಕರಿಗೆ ಇದುವರೆಗೆ ಪರಿಹಾರ ನೀಡದಿರಲು ಕಾರಣ ಏನು? ಸ್ವಾಧೀನಪಡಿಸಿಕೊಂಡಿರುವ 97.7 ಎಕರೆಯಲ್ಲಿ ಬಡಾವಣೆ ನಿರ್ಮಾಣ ಆಗಿದೆಯೇ?

* ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಕೆಲವು ಪ್ರಕರಣಗಳು ವಿವಿಧ ನ್ಯಾಯಾಲಯಗಳಲ್ಲಿ ವಿಚಾರಣೆಯ ಹಂತದಲ್ಲಿವೆ. ಬಡಾವಣೆ ನಿರ್ಮಾಣ ವಿಳಂಬಕ್ಕೆ ಇದೂ ಕಾರಣ ಎಂದು ಬಿಡಿಎ ಹೇಳಿದೆ. ಈ ಪ್ರಕರಣಗಳ ತ್ವರಿತ ವಿಲೇವಾರಿಗೆ ಬಿಡಿಎ ತೆಗೆದುಕೊಂಡಿರುವ ಕ್ರಮಗಳು ಏನು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.