ADVERTISEMENT

ನೀರಿಗಾಗಿ ಪ್ರತಿಭಟನೆ- ವಹಿವಾಟು ಬಂದ್

ಪರಮಶಿವಯ್ಯ ಯೋಜನೆ ಅನುಷ್ಠಾನಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2012, 20:28 IST
Last Updated 29 ನವೆಂಬರ್ 2012, 20:28 IST
ನೆಲಮಂಗಲ ಪಟ್ಟಣಕ್ಕೆ ಶಾಶ್ವತ ಕುಡಿಯುವ ನೀರುಪೂರೈಕೆಗೆ ಜಿ.ಎಸ್.ಪರಮಶಿವಯ್ಯ ಅವರ ವರದಿಯನ್ನು ಯಥಾವತ್ತಾಗಿ ಜಾರಿಗೆ ತರಬೇಕೆಂದು ಒತ್ತಾಯಿಸಿ ಗುರುವಾರ ನಡೆಸಿದ ಪ್ರತಿಭಟನೆಯಲ್ಲಿ   ಸಾರ್ವಜನಿಕರು ಪಾಲ್ಗೊಂಡಿದ್ದರು
ನೆಲಮಂಗಲ ಪಟ್ಟಣಕ್ಕೆ ಶಾಶ್ವತ ಕುಡಿಯುವ ನೀರುಪೂರೈಕೆಗೆ ಜಿ.ಎಸ್.ಪರಮಶಿವಯ್ಯ ಅವರ ವರದಿಯನ್ನು ಯಥಾವತ್ತಾಗಿ ಜಾರಿಗೆ ತರಬೇಕೆಂದು ಒತ್ತಾಯಿಸಿ ಗುರುವಾರ ನಡೆಸಿದ ಪ್ರತಿಭಟನೆಯಲ್ಲಿ ಸಾರ್ವಜನಿಕರು ಪಾಲ್ಗೊಂಡಿದ್ದರು   

ನೆಲಮಂಗಲ: ಪಟ್ಟಣಕ್ಕೆ ಶಾಶ್ವತ ಕುಡಿಯುವ ನೀರು ಪೂರೈಕೆಗೆ ಜಿ.ಎಸ್.ಪರಮಶಿವಯ್ಯ ಅವರ ವರದಿಯನ್ನು ಯಥಾವತ್ತಾಗಿ ಜಾರಿಗೆ ತರಲು ಎಲ್ಲಾ ರಾಜಕೀಯ ಪಕ್ಷಗಳು ಮತ್ತು ತಾಲ್ಲೂಕಿನ ವಿವಿಧ ಸಂಘಟನೆಗಳು ಗುರುವಾರ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದವು.
  ನೆಲಮಂಗಲ ಪಟ್ಟಣದ ಅಂಗಡಿ ಮುಂಗಟ್ಟುಗಳು ವ್ಯಾಪಾರ ವಹಿವಾಟುಗಳು ಸಂಪೂರ್ಣ ಸ್ತಬ್ಧಗೊಂಡಿದ್ದು, ಶಾಲಾ ಕಾಲೇಜುಗಳು ರಜೆ ಘೋಷಿಸಿ ಬಂದ್ ಕರೆಗೆ ಸಹಕಾರ ನೀಡಿದ್ದವು. ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಪೋಲಿಸ್ ಬಂದೋಬಸ್ತ್ ಮಾಡಿದ್ದರಿಂದ ಬಂದ್ ಅತ್ಯಂತ ಶಾಂತಯುತವಾಗಿ ನಡೆಯಿತು.
  
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಸಚಿವ ಆಂಜನಮೂರ್ತಿ,' ಕಳೆದ 22 ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಪರಮಶಿವಯ್ಯ ವರದಿಯನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು. ಶಾಸಕ ಎಂ.ವಿ.ನಾಗರಾಜು, `ನೀರಾವರಿ ಯೋಜನೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರೂ.200ಕೋಟಿ ನೀಡಿದ್ದರೆ, ಸದಾನಂದಗೌಡ ಅವರು 400ಕೋಟಿಯನ್ನು ಮೀಸಲಿಟ್ಟಿದ್ದಾರೆ.  ಯೋಜನೆಯ ಸಮೀಕ್ಷೆ ಕಾರ್ಯ ನಡೆಯುತ್ತಿದ್ದು, ಶೀಘ್ರವಾಗಿ ಕಾಮಗಾರಿ ಕೈಗೊಳ್ಳಬೇಕು' ಎಂದು ಆಗ್ರಹಿಸಿದರು.
   
ರೈತ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ವರದನಾಯಕನಹಳ್ಳಿ ನಾಗರಾಜು, ಕಾಂಗ್ರೆಸ್ ಅಧ್ಯಕ್ಷ ಸಿದ್ದರಾಮಯ್ಯ, ಮುಖಂಡ ಖಲೀಮುಲ್ಲಾ, ಬಿಜೆಪಿ ಅಧ್ಯಕ್ಷ ಸುಬ್ಬಣ್ಣ ಇತರರು ಉಪಸ್ಥಿತರಿದ್ದರು.

ಹೊಸಕೋಟೆ ವರದಿ: ನೀರಿನ ಸಮಸ್ಯೆ ಎದುರಿಸುತ್ತಿರುವ ಬೆಂಗಳೂರು ಗ್ರಾಮಾಂತರ, ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಪಶ್ಚಿಮಘಟ್ಟದಿಂದ ನೀರು ಪೂರೈಸಲು ಯೋಜಿಸಿರುವ ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ವರದಿಯನ್ನು ಜಾರಿಗೊಳಿಸುವಂತೆ ಆಗ್ರಹಿಸಿ ಶಾಶ್ವತ ನೀರಾವರಿ ಹೋರಾಟ ಸಮಿತಿಯ ಆಶ್ರಯದಲ್ಲಿ ಗುರುವಾರ ನಡೆದ ಬಂದ್‌ಗೆ ಹೊಸಕೋಟೆಯಲ್ಲಿ ಉತ್ತಮ ಪ್ರತಿಕ್ರಿಯೆ ದೊರೆಯಿತು.

ಪಟ್ಟಣದಲ್ಲಿ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಪ್ರತಿಭಟನಾಕಾರರು ಸರ್ಕಾರಿ ಕಚೇರಿ, ಬ್ಯಾಂಕ್‌ಗಳು ಹಾಗೂ ತೆರೆದಿದ್ದ ಶಾಲೆಗಳನ್ನು ಮುಚ್ಚಿಸಿದರು. ಕೋಲಾರದ ಕಡೆ ಯಾವುದೇ ಬಸ್ ಸಂಚಾರವಿರಲಿಲ್ಲ. ಬೆಂಗಳೂರು ಕಡೆಯೂ ಕೆಲವು ಗಂಟೆಗಳ ಕಾಲ ಬಿಎಂಟಿಸಿ ಬಸ್ ಸಂಚಾರ ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರು ಪರದಾಡಿದರು.

ಪ್ರತಿಭಟನಾಕಾರರು ಪಟ್ಟಣದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ನಡೆಸಿದ ನಂತರ ಹೆದ್ದಾರಿಯ ಪ್ರವಾಸಿ ಮಂದಿರದ ವೃತ್ತದ ಬಳಿ ರಸ್ತೆ ತಡೆ ನಡೆಸಿದರು. ಪ್ರತಿಭಟನಾಕಾರರನ್ನು ಉದ್ದೇಶಿಸಿ ಹೋರಾಟ ಸಮಿತಿ ಪ್ರಧಾನ ಸಂಚಾಲಕ ಎಂ. ಕೆಂಚೇಗೌಡ, ಜೆಡಿಎಸ್ ಮುಖಂಡ ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲ್ಲಪ್ಪ, ಬಿಜೆಪಿ ಮುಖಂಡ ಪ್ರಫುಲ್‌ಚಂದ್ರ, ಸಿಐಟಿಯು ಮುಖಂಡ ಹರೀಂದ್ರ, ಪ್ರಾಂತ ರೈತ ಸಂಘದ ಆರ್.ಆರ್.ಮನೋಹರ್, ಪ್ರಭುದೇವಯ್ಯ, ಪುರಸಭೆ ಅಧ್ಯಕ್ಷ ಎಚ್.ಎ.ಜಯರಾಮ್ ಮಾತನಾಡಿ, `ಅವೈಜ್ಞಾನಿಕವಾಗಿರುವ ಎತ್ತಿನಹೊಳೆ ಯೋಜನೆ ಕೈಬಿಟ್ಟು ಶಾಶ್ವತ ನೀರಾವರಿ ಯೋಜನೆಯಾದ ಪರಮಶಿವಯ್ಯ ವರದಿ ಜಾರಿಗೊಳಿಸಬೇಕು' ಎಂದು ಆಗ್ರಹಿಸಿದರು.

ದೇವನಹಳ್ಳಿ/ದೊಡ್ಡಬಳ್ಳಾಪುರ/ವಿಜಯಪುರ ವರದಿ: ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸುವ ದಿಸೆಯಲ್ಲಿ ಡಾ.ಪರಮಶಿವಯ್ಯ ವರದಿಯನ್ನು ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ, ದೇವನಹಳ್ಳಿ ಮತ್ತು ವಿಜಯಪುರಗಳಲ್ಲಿ ನಡೆಸಿದ ಬಂದ್ ಸಂಪೂರ್ಣ ಯಶಸ್ವಿಯಾಯಿತು.

ಎಲ್ಲೆಡೆ ಶಾಲಾ ಕಾಲೇಜು, ವ್ಯಾಪಾರ-ವಹಿವಾಟು ಸ್ಥಗಿತಗೊಂಡಿತ್ತು. ಸಾರಿಗೆ ಸಂಚಾರಕ್ಕೆ ತೀವ್ರ ವ್ಯತ್ಯಯ ಉಂಟಾಯಿತು.
ಬೆಳಿಗ್ಗೆ 11 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಯಾವುದೇ ವಾಹನಗಳು ರಸ್ತೆಗಿಳಿಯಲಿಲ್ಲ. ಇದರಿಂದ ರಾಷ್ಟ್ರೀಯ ಹೆದ್ದಾರೆ 7ರಲ್ಲಿ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗಿತ್ತು.

ವಿವಿಧ ರಾಜಕೀಯ ಪಕ್ಷಗಳು, ಸಂಘ ಸಂಸ್ಥೆಗಳು, ಕನ್ನಡ ಪರ ಹಾಗೂ ರೈತ ಸಂಘಟನೆಗಳು ಬಂದ್ ಯಶಸ್ವಿಗೆ ಸಹಕರಿಸಿದವು. ಬಹುತೇಕ ಕಡೆ ಜನರು ಸ್ವಯಂಸ್ಫೂರ್ತಿಯಿಂದ ಬಂದ್ ಕರೆಗೆ ಓಗೊಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT