ADVERTISEMENT

ನೀರಿಗಾಗಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2011, 19:30 IST
Last Updated 26 ಮಾರ್ಚ್ 2011, 19:30 IST
ನೀರಿಗಾಗಿ ಪ್ರತಿಭಟನೆ
ನೀರಿಗಾಗಿ ಪ್ರತಿಭಟನೆ   

ಕೆಂಗೇರಿ: ಸಮರ್ಪಕ ನೀರು ಪೂರೈಕೆಗೆ ಆಗ್ರಹಿಸಿ ಜ್ಞಾನಭಾರತಿ ವಾರ್ಡ್ ವ್ಯಾಪ್ತಿಯ ವಿವಿಧ ಬಡಾವಣೆಗಳ ನಾಗರಿಕರು ಬೆಂಗಳೂರು ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿಯ ನಾಗರಬಾವಿ ಉಪವಲಯದ ಕಚೇರಿ ಮುಂದೆ ಸುಮಾರು ಎರಡು ಗಂಟೆಗಳ ಕಾಲ ರಸ್ತೆತಡೆ ಚಳವಳಿ ನಡೆಸಿದರು.

ಭೈರವೇಶ್ವರ ನಗರ, ರಾಜೀವ್ ಗಾಂಧಿ ನಗರ, ಕೆಬ್ಬಳ್ಳಿ, ಕೆಂಗುಟ್ಟೆ, ಪಾಪರೆಡ್ಡಿ ಪಾಳ್ಯ, ಮಲ್ಲತ್ತಹಳ್ಳಿ, ಜ್ಞಾನಜ್ಯೋತಿ ನಗರ, ಜ್ಞಾನಗಂಗಾ ನಗರ, ಉಲ್ಲಾಳ್ ರಸ್ತೆ ಮತ್ತಿತರ ಬಡಾವಣೆಗಳ ಸಾವಿರಾರು ನಾಗರಿಕರು ಜಲಮಂಡಳಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

‘ಕೊಳವೆ ಬಾವಿಗಳಲ್ಲೂ ನೀರಿಲ್ಲದ ಕಾರಣ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿತ್ತು.
 ಬೇಸಿಗೆ ಆರಂಭವಾಗುತ್ತಿದ್ದಂತೆ ಟ್ಯಾಂಕರ್‌ನ ಬಾಡಿಗೆಯನ್ನು ಯದ್ವತದ್ವಾ ಹೆಚ್ಚಿಸಲಾಗಿದೆಯಲ್ಲದೇ ಕರೆದರೂ ಬರುತ್ತಿಲ್ಲ’ ಎಂದು ಅವರು ದೂರಿದರು.

‘ನಮ್ಮ ಬಡಾವಣೆಗಳಲ್ಲಿ ಕಾವೇರಿ ನೀರು ಪೂರೈಕೆಗೆಂದು ಕೊಳವೆ ಮಾರ್ಗ ಅಳವಡಿಸಲಾಗಿದೆ. ಬೇಸಿಗೆ ಮುಗಿಯುವ ತನಕ ಸಾರ್ವಜನಿಕ ಕೊಳಾಯಿಗಳನ್ನು ಹಾಕಿ, ಇಲ್ಲವಾದರೆ ನಿರಂತರ ಪ್ರತಿಭಟನೆ ನಡೆಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.

‘ಆರು ತಿಂಗಳಿಂದಲೂ ನೀರಿನ ಸಮಸ್ಯೆ ಇದ್ದರೂ ಯಾವ ಅಧಿಕಾರಿಯೂ ಕ್ರಮ ಕೈಗೊಳ್ಳಲು ಮುಂದಾಗಿಲ್ಲ. ಆಡಳಿತ ಪಕ್ಷಕ್ಕೆ ಸೇರಿದ ಪಾಲಿಕೆ ಸದಸ್ಯರು ಇರುವ ಅಕ್ಕಪಕ್ಕದ ವಾರ್ಡ್‌ಗಳಿಗೆ ಹೆಚ್ಚಿನ ಆದ್ಯತೆ ನೀಡುವ ಅಧಿಕಾರಿಗಳು ಈ ವಾರ್ಡ್ ಬಗ್ಗೆ ತಾರತಮ್ಯ ಮಾಡುತ್ತಿದ್ದಾರೆ’ ಎಂದು ಅವರು ಆರೋಪಿಸಿದರು.

ಪಾಲಿಕೆ ಸದಸ್ಯ ಗೋವಿಂದರಾಜು, ನಗರಸಭೆ ಮಾಜಿ ಅಧ್ಯಕ್ಷ ಹನುಮಂತರಾಯಪ್ಪ, ಮುಖಂಡರಾದ ಕಮಲೇಶ್, ಹನುಮೇಗೌಡ, ರಂಗಸ್ವಾಮಿ, ರಾಮಣ್ಣ, ಬಾಲು, ವೆಂಕಟೇಶ್ ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.