ADVERTISEMENT

ನೀರು ಕೇಳುವ ನೆಪದಲ್ಲಿ ಮನೆಗೆ ನುಗ್ಗಿ ಸುಲಿಗೆ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2018, 20:19 IST
Last Updated 19 ಮಾರ್ಚ್ 2018, 20:19 IST

ಬೆಂಗಳೂರು: ಚಂದ್ರಾ ಲೇಔಟ್ ಬಳಿಯ ವಿನಾಯಕ ಬಡಾವಣೆಯ ಮನೆಯೊಂದಕ್ಕೆ ನೀರು ಕೇಳುವ ನೆಪದಲ್ಲಿ ನುಗ್ಗಿದ್ದ ದುಷ್ಕರ್ಮಿಗಳು, ಮನೆಯಲ್ಲಿದ್ದ ₹10 ಸಾವಿರ ನಗದು ಹಾಗೂ ಬೆಲೆಬಾಳುವ ಮೊಬೈಲ್‌ ಸುಲಿಗೆ ಮಾಡಿದ್ದಾರೆ.

ಉದ್ಯೋಗ ಅರಸಿ ನಗರಕ್ಕೆ ಬಂದಿರುವ ಬಿಹಾರದ ಅಷ್ಪಕ್‌ ಸ್ನೇಹಿತರ ಜತೆಯಲ್ಲಿ ನೆಲೆಸಿದ್ದಾರೆ. ಭಾನುವಾರ ಸಂಜೆ ಅವರ ಮನೆಗೆ ಬಂದಿದ್ದ ವ್ಯಕ್ತಿಯೊಬ್ಬ, ಕುಡಿಯಲು ನೀರು ಕೇಳಿದ್ದ. ಆತನಿಗೆ ಬಾಯಾರಿಕೆ ಆಗಿರಬಹುದು ಎಂದು ಭಾವಿಸಿ ಅಷ್ಪಕ್‌, ನೀರು ತರಲೆಂದು ಅಡುಗೆ ಮನೆಗೆ ಹೋಗಿದ್ದರು. ಅವರ ಸ್ನೇಹಿತರೆಲ್ಲ ಕೊಠಡಿಯೊಳಗೆ ಕುಳಿತುಕೊಂಡಿದ್ದರು.

ಅದಾದ ಕೆಲವೇ ಕ್ಷಣಗಳಲ್ಲಿ ನೀರು ಕೇಳಿದ ವ್ಯಕ್ತಿಯ ಜತೆಗೆ ಮನೆಯೊಳಗೆ ನುಗ್ಗಿದ್ದ ಏಳು ಮಂದಿ ದುಷ್ಕರ್ಮಿಗಳು, ಅಷ್ಪಕ್‌ ಅವರಿಗೆ ಮಚ್ಚು ತೋರಿಸಿ ಬೆದರಿಸಿದ್ದರು. ಗದ್ದಲ ಕೇಳಿ ಅವರ ಸ್ನೇಹಿತರು ಕೊಠಡಿಯಿಂದ ಹೊರಬಂದರು. ಆಗ ಅವರಿಗೂ ಮಚ್ಚು ತೋರಿಸಿದ್ದರು. ಪ್ರಾಣಭಯದಲ್ಲಿ ಸ್ನೇಹಿತರು, ಸ್ಥಳದಲ್ಲೇ ಕುಳಿತುಕೊಂಡಿದ್ದರು.

ADVERTISEMENT

ನಂತರ ಮನೆಯಲ್ಲೆಲ್ಲ ಹುಡುಕಾಟ ನಡೆಸಿದ್ದ ದುಷ್ಕರ್ಮಿಗಳು, ಅಷ್ಪಕ್‌ ಮೇಲೂ ಹಲ್ಲೆ ನಡೆಸಿ ನಗದು ಹಾಗೂ ಮೊಬೈಲ್‌ ಸುಲಿಗೆ ಮಾಡಿಕೊಂಡು ಪರಾರಿಯಾಗಿದ್ದಾರೆ ಎಂದು ಚಂದ್ರಾ ಲೇಔಟ್‌ ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.