ADVERTISEMENT

ನೀರು ಪೂರೈಕೆಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2012, 4:40 IST
Last Updated 6 ಫೆಬ್ರುವರಿ 2012, 4:40 IST

ಕೃಷ್ಣರಾಜಪುರ:  ಇಲ್ಲಿಗೆ ಸಮೀಪದ ಕಲ್ಕೆರೆ ಹೊರವಲಯ ಮಂಜುನಾಥ ಬಡಾವಣೆ (ಆಂಧ್ರ ಕಾಲೋನಿ)ಯಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕೊಳವೆ ಬಾವಿ ಮೂಲಕ ನೀರು ಪೂರೈಸುವ ಯೋಜನೆಗೆ ಮತ್ತು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಕೈಗೆತ್ತಿಕೊಂಡಿರುವ 1.8 ಕಿ.ಮೀ. ಉದ್ದದ 2 ಮುಖ್ಯ ರಸ್ತೆ ಮತ್ತು 4 ಸಂಪರ್ಕ ರಸ್ತೆಗಳ ಡಾಂಬರೀಕರಣ ಕಾಮಗಾರಿಗೆ ಶಾಸಕ ಎನ್.ಎಸ್. ನಂದೀಶರೆಡ್ಡಿ, ಬಿಬಿಎಂಪಿ ಸದಸ್ಯ ಎಂ.ರೇವಣ್ಣ ಜಂಟಿಯಾಗಿ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಶಾಸಕರು, ಕಲ್ಕೆರೆ ಮಾರ್ಗದಲ್ಲಿ ನಡೆಯುವ ಭಾನುವಾರದ ಸಂತೆಯನ್ನು ಸದ್ಯದಲ್ಲಿಯೇ ಸ್ಥಳಾಂತರಿಸಲಾಗುವುದು. ಇದರಿಂದ ಸಾರ್ವಜನಿಕರ ಸಮಸ್ಯೆ ಬಗೆಹರಿಯಲಿದೆ. ವ್ಯಾಪಾರಿಗಳಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಮಂಜುನಾಥ ಬಡಾವಣೆ ಹೊರ ವಲಯದಲ್ಲಿರುವುದರಿಂದ ಇದುವರೆಗೆ ಯಾವುದೇ ರೀತಿಯ ಹೆಚ್ಚಿನ ಮೂಲ ಸೌಕರ್ಯ ಒದಗಿಸಲು ಸಾಧ್ಯವಾಗಲಿಲ್ಲ. ಇನ್ನು ಮುಂದೆ ಬಿಡಿಎ, ಬಿಬಿಎಂಪಿ ಮತ್ತು ಜಲಮಂಡಳಿ ವತಿಯಿಂದ ವಿವಿಧ ಸೌಲಭ್ಯಗಳನ್ನು ಹಂತ-ಹಂತವಾಗಿ ಒದಗಿಸಲು ಪ್ರಯತ್ನಿಸಲಾಗುವುದು ಎಂದು ಆಶ್ವಾಸನೆ ನೀಡಿದರು.

ಬಿಡಿಎ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಬೈರೇಗೌಡ, ಶಿವಣ್ಣ, ಬಿಬಿಎಂಪಿ ಸಹಾಯಕ ಎಂಜಿನಿಯರ್ ಶ್ರೀನಿವಾಸ್, ಪಕ್ಷದ ಮುಖಂಡರಾದ ಚಿದಾನಂದ, ಶಾಂತರಾಜ ಅರಸು, ಬಾಕ್ಸರ್ ನಾಗರಾಜ್, ಕಲ್ಕೆರೆ ಎನ್. ಶ್ರೀನಿವಾಸ್, ಬ್ರಹ್ಮಾನಂದರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.