ADVERTISEMENT

ನೀರು ಪೋಲು ತಪ್ಪಿಸಿ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2012, 19:30 IST
Last Updated 7 ಅಕ್ಟೋಬರ್ 2012, 19:30 IST

ಬೆಂಗಳೂರು: `ಕಾವೇರಿ ನದಿಯಿಂದ ಬೆಂಗಳೂರು ನಗರಕ್ಕೆ ಪ್ರತಿದಿನ ಪೂರೈಕೆಯಾಗುವ ನೀರಿನಲ್ಲಿ ಶೇ 45ರಷ್ಟು ಪೋಲಾಗುತ್ತಿದ್ದು, ಇದನ್ನು ತಪ್ಪಿಸಿದರೆ ಪ್ರತಿದಿನ 200 ದಶಲಕ್ಷ ಲೀಟರ್ ನೀರನ್ನು ಉಳಿಸಲು ಸಾಧ್ಯವಿದೆ~ ಎಂದು ನೀರಾವರಿ ತಜ್ಞ ಕ್ಯಾಪ್ಟನ್ ರಾಜಾರಾವ್ ಅಭಿಪ್ರಾಯಪಟ್ಟರು.

ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಕನ್ನಡ ಸಂಘಗಳ ಒಕ್ಕೂಟವು ನಗರದಲ್ಲಿ ಭಾನುವಾರ ಆಯೋಜಿಸಿದ್ದ `ಕಾವೇರಿ : ಬೆಂಗಳೂರು ನಗರ ನೀರಿನ ಸಮಸ್ಯೆ ಮತ್ತು ಪರಿಹಾರ~ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

`ಕಾವೇರಿ ನದಿಯಿಂದ ಪೋಲಾಗುವ ನೀರಿನ ಪ್ರಮಾಣವನ್ನು ಶೇ 16ಕ್ಕೆ ಇಳಿಸಲು ಸಾಧ್ಯವಿದೆ. ಈ ಬಗ್ಗೆ ಬೆಂಗಳೂರು ಜಲಮಂಡಳಿ ಅಧಿಕಾರಿಗಳು ಗಂಭೀರವಾಗಿ ಯೋಚಿಸಬೇಕು. ನೀರಿನ ಪೋಲನ್ನು ತಡೆಯದ ಜಲಮಂಡಳಿಯ ಹಿರಿಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಕಾನೂನನ್ನು ಸರ್ಕಾರ ರೂಪಿಸಬೇಕು~ ಎಂದು ಅವರು ಹೇಳಿದರು.

`ದಿನದಿಂದ ದಿನಕ್ಕೆ ಕಾವೇರಿ ನದಿ ನೀರಿನ ಬೇಡಿಕೆ ತಮಿಳುನಾಡಿನಿಂದ ಹೆಚ್ಚಾಗುತ್ತಿದೆ. 2050ರ ವೇಳೆಗೆ ಬೆಂಗಳೂರಿನ ಜನಸಂಖ್ಯೆ ಮೂರು ಕೋಟಿ ದಾಟಲಿದ್ದು, 85 ಟಿಎಂಸಿ ಕುಡಿಯುವ ನೀರು ನಗರಕ್ಕೆ ಬೇಕಾಗಲಿದೆ. ಹೀಗಾಗಿ ತಮಿಳುನಾಡಿನ ಬೇಡಿಕೆಯಂತೆ ನೀರು ಬಿಡುತ್ತಾ ಹೋದರೆ, ಮುಂದೆ ನಗರದ ಕುಡಿಯುವ ನೀರಿಗೂ ಅಭಾವ ಉಂಟಾಗಲಿದೆ~ ಎಂದು ಅವರು ತಿಳಿಸಿದರು.

`ನಗರದ ಚರಂಡಿ ನೀರನ್ನು ಸಮರ್ಪಕವಾಗಿ ಪುನರ್‌ಬಳಕೆ ಮಾಡಿಕೊಂಡರೆ ಪ್ರತಿದಿನ 70 ದಶಲಕ್ಷ ಲೀಟರ್ ನೀರು ನಗರಕ್ಕೆ ಸಿಗಲಿದೆ. ಆದರೆ, ಸದ್ಯ ಪ್ರತಿದಿನ ಕೇವಲ 4 ದಶಲಕ್ಷ ಲೀಟರ್ ನೀರನ್ನು ಮಾತ್ರ ಪುನರ್‌ಬಳಕೆ ಮಾಡಿಕೊಳ್ಳಲಾಗುತ್ತಿದೆ~ ಎಂದು ಅವರು ಹೇಳಿದರು.

`ಮೇಕೇದಾಟು ಪ್ರದೇಶದಲ್ಲಿ ರಾಜ್ಯ ಸರ್ಕಾರ ನಿರ್ಮಿಸಲು ಉದ್ದೇಶಿಸಿದ್ದ ಬ್ಯಾರೇಜ್ ನಿರ್ಮಾಣಕ್ಕೆ ತಮಿಳುನಾಡು ಅಡ್ಡಗಾಲು ಹಾಕುತ್ತಾ ಬಂದಿದೆ. ಬ್ಯಾರೇಜ್ ನಿರ್ಮಾಣದಿಂದ ರಾಜ್ಯಕ್ಕೆ ವಿದ್ಯುತ್ ಉತ್ಪಾದನೆಯ ಜತೆಗೆ ನಗರಕ್ಕೆ ಕುಡಿಯುವ ನೀರು ಪೂರೈಕೆಯೂ ಸುಲಭವಾಗಲಿದೆ.

ಇದರಿಂದ ತಮಿಳುನಾಡಿಗೆ ಹರಿಸುವ ನೀರಿನ ಪ್ರಮಾಣದ ಸರಿಯಾದ ಮಾಪನವೂ ದೊರೆಯಲಿದೆ. ಹೀಗಾಗಿ ತಮಿಳುನಾಡಿನ ಮನವೊಲಿಸಿ ಈ ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೆ ತರಬೇಕು~ ಎಂದು ಅವರು ಒತ್ತಾಯಿಸಿದರು.

`ಕಟ್ಟಡಗಳ ಮಾಳಿಗೆಯ ಮೇಲೆ ಬಿದ್ದ ಮಳೆನೀರು ಸಂರಕ್ಷಣೆಯ ಜತೆಗೆ ರಸ್ತೆಯಲ್ಲಿ ಬಿದ್ದ ಮಳೆನೀರನ್ನೂ ಸಂರಕ್ಷಿಸಬೇಕಾದ ಅಗತ್ಯವಿದೆ. ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಅನೇಕ ಬಾರಿ ಪತ್ರ ಬರೆದಿದ್ದೇನೆ. ಆದರೆ, ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ~ ಎಂದು ಅವರು ವಿಷಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT