ADVERTISEMENT

‘ನೀರು ಸಂಗ್ರಹ ವಿಧಾನದ ಕೊರತೆ’

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2018, 19:57 IST
Last Updated 22 ಮಾರ್ಚ್ 2018, 19:57 IST
ಡಾ.ಎಚ್.ಕೆ.ರಾಮರಾಜು, ಡಾ.ಲಕ್ಷ್ಮಣ್‌, ಕಾಲೇಜಿನ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಡಾ.ಸಿ.ಪಿ.ಎಸ್‌.ಪ್ರಕಾಶ್‌ ಪಾಲ್ಗೊಂಡಿದ್ದರು – ಪ್ರಜಾವಾಣಿ ಚಿತ್ರ
ಡಾ.ಎಚ್.ಕೆ.ರಾಮರಾಜು, ಡಾ.ಲಕ್ಷ್ಮಣ್‌, ಕಾಲೇಜಿನ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಡಾ.ಸಿ.ಪಿ.ಎಸ್‌.ಪ್ರಕಾಶ್‌ ಪಾಲ್ಗೊಂಡಿದ್ದರು – ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ದೇಶದಲ್ಲಿ ನೀರಿಗೆ ಕೊರತೆ ಇಲ್ಲ. ಅದನ್ನು ಶೇಖರಿಸುವ ವಿಧಾನದ ಕೊರತೆಯಿದೆ’ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ಸಿವಿಲ್ ಎಂಜಿನಿಯರಿಂಗ್‌ ವಿಭಾಗದ ಪ್ರಾಧ್ಯಾಪಕ ಪ್ರೊ. ಟಿ.ಜಿ.ಸೀತಾರಾಮ್ ಹೇಳಿದರು.

ದಯಾನಂದ ಸಾಗರ ಎಂಜಿನಿಯರಿಂಗ್‌ ಕಾಲೇಜಿನ ಸಿವಿಲ್ ಎಂಜಿನಿಯರಿಂಗ್ ವಿಭಾಗವು ಗುರುವಾರ ಆಯೋಜಿಸಿದ್ದ ವಿಶ್ವ ಜಲ ದಿನಾಚರಣೆಯಲ್ಲಿ ಅವರು ಮಾತನಾಡಿದರು.

‘ಶೇ 10 ರಷ್ಟು ಮಳೆ ನೀರನ್ನು ಮಾತ್ರ ಸಂಗ್ರಹಿಸುತ್ತಿದ್ದೇವೆ. ಉಳಿದ ನೀರು ವ್ಯರ್ಥವಾಗಿ ಸಮುದ್ರದ ಪಾಲಾಗುತ್ತಿದೆ. ಕರಾವಳಿ ಭಾಗಗಳಲ್ಲಿ ಜಲಾಶಯಗಳನ್ನು ಕಟ್ಟುವ ಮೂಲಕ ಸಮುದ್ರ ಪಾಲಾಗುತ್ತಿರುವ ನೀರನ್ನು ಬಳಕೆ ಮಾಡಿಕೊಳ್ಳಬೇಕು’ ಎಂದರು.

ADVERTISEMENT

‘ನಗರದ ಜಲಮೂಲಗಳಿಗೆ ಕೊಳಚೆ ನೀರು ಹರಿಸಿ, ಅವುಗಳನ್ನು ಹಾಳು ಮಾಡಲಾಗುತ್ತಿದೆ. ಹೀಗಾಗಿ, ಅದಕ್ಕೆ ಕಡಿವಾಣ ಹಾಕಬೇಕು’ ಎಂದು ಸಲಹೆ ನೀಡಿದರು.

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಲಕ್ಷ್ಮಣ್, ‘ತ್ಯಾಜ್ಯ ವಿಲೇವಾರಿಗೆ ಮಂಡಳಿ ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆ. ಆಸ್ಪತ್ರೆ ತ್ಯಾಜ್ಯ, ಇ–ತ್ಯಾಜ್ಯ, ಒಣ ಮತ್ತು ಹಸಿ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಕ್ರಮಕೈಗೊಳ್ಳಲಾಗಿದೆ. ಕಸ ಸಮಸ್ಯೆ ಪರಿಹಾರಕ್ಕೆ ಜನರ ಸಹಕಾರ ಮುಖ್ಯ’ ಎಂದರು.

ಸಿವಿಲ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಎಚ್.ಕೆ.ರಾಮರಾಜು, ‘ನಗರದಲ್ಲಿ ವಾರ್ಷಿಕವಾಗಿ 1,100 ಮಿ.ಮೀ. ಮಳೆಯಾಗುತ್ತದೆ. ಅದರಿಂದ ಸುಮಾರು 80 ಕೋಟಿ ಲೀಟರ್ ನೀರನ್ನು ಶೇಖರಣೆ ಮಾಡಬಹುದು. ನಗರದ ಎಲ್ಲ ಜಲಮೂಲಗಳನ್ನು ಪುನಶ್ಚೇತನಗೊಳಿಸಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.