ADVERTISEMENT

ನೀಲಿ ಚಿತ್ರ ವೀಕ್ಷಣೆ: ವರದಿ ಸೋಮವಾರ ಸಲ್ಲಿಕೆ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2012, 19:30 IST
Last Updated 16 ಮಾರ್ಚ್ 2012, 19:30 IST

ಬೆಂಗಳೂರು: ಸದನದಲ್ಲಿ ಅಶ್ಲೀಲ ದೃಶ್ಯಾವಳಿ ವೀಕ್ಷಿಸಿದ ಪ್ರಕರಣದ ತನಿಖೆ ನಡೆಸುತ್ತಿರುವ ಶಾಸಕ ಶ್ರೀಶೈಲಪ್ಪ ಬಿದರೂರು ಅಧ್ಯಕ್ಷತೆಯ ಸಮಿತಿ ವರದಿಯನ್ನು ಅಂತಿಮಗೊಳಿಸಿದ್ದು, ಸೋಮವಾರ ವಿಧಾನಸಭೆಯ ಸ್ಪೀಕರ್ ಕೆ.ಜಿ.ಬೋಪಯ್ಯ ಅವರಿಗೆ ಸಲ್ಲಿಸುವ ಸಾಧ್ಯತೆ ಇದೆ.

ಇದೇ 20ರವರೆಗೂ ವರದಿ ಸಲ್ಲಿಸಲು ಅವಕಾಶವಿದೆ. 20ರಂದು ವಿಧಾನ ಮಂಡಲದ ಅಧಿವೇಶನ ಆರಂಭವಾಗುವ ಹಿನ್ನೆಲೆಯಲ್ಲಿ 19ರಂದೇ ವರದಿ ಸಲ್ಲಿಸಲು ಸಮಿತಿ ತೀರ್ಮಾನಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಮೊಬೈಲ್‌ನಲ್ಲಿ ಅಶ್ಲೀಲ ದೃಶ್ಯಾವಳಿ ವೀಕ್ಷಿಸಿದ ಮಾಜಿ ಸಚಿವ ಲಕ್ಷ್ಮಣ ಸವದಿ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರವನ್ನು ಸ್ಪೀಕರ್ ವಿವೇಚನೆಗೆ ಬಿಡಲಾಗಿದೆ. ಉಳಿದ ಇಬ್ಬರಾದ ಸಿ.ಸಿ.ಪಾಟೀಲ, ಕೃಷ್ಣ ಪಾಲೆಮಾರ್ ಅವರನ್ನು ಆರೋಪ ಮುಕ್ತಗೊಳಿಸಲಾಗಿದೆ ಎಂದು ಗೊತ್ತಾಗಿದೆ.

ಸಮಿತಿಯು ಶುಕ್ರವಾರ ಸಭೆ ನಡೆಸಿ ಶಿಫಾರಸು ಮಾಡಬೇಕಾದ ಅಂಶಗಳನ್ನು ಅಂತಿಮಗೊಳಿಸಿದೆ. ಲಕ್ಷ್ಮಣ ಸವದಿ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೈಗೊಳ್ಳಬಹುದಾದ ಕ್ರಮ ಕುರಿತ ಅಂತಿಮ ತೀರ್ಮಾನವನ್ನು ಸ್ಪೀಕರ್ ವಿವೇಚನೆಗೆ ಬಿಡುವುದು ಸೂಕ್ತ ಎಂಬ ನಿರ್ಧಾರಕ್ಕೆ ಸಮಿತಿ ಬಂದಿದೆ.

ಪಾಟೀಲ, ಕೃಷ್ಣ ಪಾಲೆಮಾರ್ ಅವರು, ತಾವು ಯಾವುದೇ ತಪ್ಪು ಮಾಡಿಲ್ಲ ಎಂದು ಸಮಿತಿಯ ಮುಂದೆ ಹೇಳಿಕೆ ನೀಡಿದ್ದಾರೆ. ಮೂವರೂ ಶಾಸಕರು ನೋಟಿಸ್‌ಗೆ ನೀಡಿರುವ ಉತ್ತರ, ಸಮಿತಿಯ ಮುಂದೆ ಹಾಜರಾಗಿದ್ದ ಮಾಧ್ಯಮ ಪ್ರತಿನಿಧಿಗಳ ಹೇಳಿಕೆಗಳನ್ನು ವರದಿಯಲ್ಲಿ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.