ADVERTISEMENT

ನೆಟ್ಟಕಲ್ಲಪ್ಪ ವೃತ್ತದಲ್ಲಿ ಸಂಚಾರ ಬದಲು

ಸೋಮವಾರದಿಂದ ಡಿವಿಜಿ ರಸ್ತೆಯಲ್ಲಿ ಏಕಮುಖ ಸಂಚಾರ

​ಪ್ರಜಾವಾಣಿ ವಾರ್ತೆ
Published 21 ಜೂನ್ 2013, 19:55 IST
Last Updated 21 ಜೂನ್ 2013, 19:55 IST

ಬೆಂಗಳೂರು: ಬಸವನಗುಡಿಯ ನೆಟ್ಟಕಲ್ಲಪ್ಪ ವೃತ್ತದಿಂದ ಮಲ್ಲಿಕಾರ್ಜುನ ದೇವಸ್ಥಾನ ರಸ್ತೆ ಕಡೆಗೆ ಡಿ.ವಿ.ಜಿ ರಸ್ತೆಯಲ್ಲಿ ಏಕಮುಖ ಸಂಚಾರ ವ್ಯವಸ್ಥೆ ಜಾರಿಗೊಳಿಸಿ ನಗರ ಪೊಲೀಸ್  ಕಮಿಷನರ್ ಶುಕ್ರವಾರ ಆದೇಶ ಹೊರಡಿಸಿದ್ದಾರೆ.

  ಸೋಮವಾರದಿಂದ (ಜೂ.24) ಆದೇಶ ಜಾರಿಗೆ ಬರಲಿದೆ. ಈವರೆಗೆ ಡಿ.ವಿ.ಜಿ ರಸ್ತೆ ಹಾಗೂ ಸುಬ್ಬರಾಮಚೆಟ್ಟಿ ರಸ್ತೆಗಳು ಕೂಡುವ ನೆಟ್ಟಕಲ್ಲಪ್ಪ ವೃತ್ತದಲ್ಲಿ ಸಿಗ್ನಲ್ ದೀಪಗಳನ್ನು ಅಳವಡಿಸಲಾಗಿತ್ತು. ನೆಟ್ಟಕಲ್ಲಪ್ಪ ವೃತ್ತದಿಂದ ಮಲ್ಲಿಕಾರ್ಜುನ ದೇವಸ್ಥಾನ ರಸ್ತೆ ಕಡೆಗೆ ಡಿ.ವಿ.ಜಿ ರಸ್ತೆಯಲ್ಲಿ ದ್ವಿಮುಖ ಸಂಚಾರ ವ್ಯವಸ್ಥೆ ಜಾರಿಯಲ್ಲಿತ್ತು.

ಆದರೆ, ನೆಟ್ಟಕಲ್ಲಪ್ಪ ವೃತ್ತದಲ್ಲಿ ವಾಹನ ದಟ್ಟಣೆ ಹೆಚ್ಚಾಗಿರುವ ಕಾರಣ ಈ ಮಾರ್ಗದಲ್ಲಿ ಏಕಮುಖ ಸಂಚಾರ ವ್ಯವಸ್ಥೆ ಜಾರಿಗೊಳಿಸುವಂತೆ ಸ್ಥಳೀಯರು ಮನವಿ ಸಲ್ಲಿಸಿದ್ದರು. ಹೀಗಾಗಿ ಡಿ.ವಿ.ಜಿ ರಸ್ತೆ ಹಾಗೂ ಮಲ್ಲಿಕಾರ್ಜುನ ದೇವಸ್ಥಾನ ರಸ್ತೆಯ ಮಾರ್ಗವಾಗಿ ಎರಡೂ ಕಡೆಗಳಿಂದ ನೆಟ್ಟಕಲ್ಲಪ್ಪ ವೃತ್ತದ ಕಡೆಗೆ ಬರುವ ವಾಹನಗಳಿಗೆ ಡಿ.ವಿ.ಜಿ ಜಂಕ್ಷನ್‌ನಲ್ಲಿ ನಿರ್ಬಂಧ ವಿಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಡಿ.ವಿ.ಜಿ ರಸ್ತೆ ಹಾಗೂ ಮಲ್ಲಿಕಾರ್ಜುನ ದೇವಸ್ಥಾನ ರಸ್ತೆಗಳಿಂದ ನೆಟ್ಟಕಲ್ಲಪ್ಪ ವೃತ್ತದ ಕಡೆಗೆ ಹೋಗುವ ವಾಹನಗಳು ಪುಟ್ಟಣ್ಣ ರಸ್ತೆ ಅಥವಾ ಈಸ್ಟ್ ಆಂಜನೇಯ ಟೆಂಪಲ್ ಸ್ಟ್ರೀಟ್ ಮೂಲಕ ನೆಟ್ಟಕಲ್ಲಪ್ಪ ವೃತ್ತದ ಕಡೆಗೆ ಸಾಗಬಹುದು.

ನೆಟ್ಟಕಲ್ಲಪ್ಪ ವೃತ್ತದಿಂದ ಮಲ್ಲಿಕಾರ್ಜುನ ದೇವಸ್ಥಾನ ರಸ್ತೆಯ ಕಡೆಗೆ ಸಾಗುವ ವಾಹನಗಳು ಎಂದಿನಂತೆ ಸಂಚರಿಸಬಹುದು ಎಂದು ಪೊಲೀಸರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.