ADVERTISEMENT

ನೆನಪಿನಂಗಳದಲ್ಲಿ ಕುತೂಹಲಕಾರಿ ಮಾಹಿತಿ: ವಿಜಯಾ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2012, 19:30 IST
Last Updated 6 ಮಾರ್ಚ್ 2012, 19:30 IST

ಬೆಂಗಳೂರು: `ಲೇಖಕಿ ಎಚ್.ಎಸ್.ಪಾರ್ವತಿ ಅವರು ಜೀವನದಲ್ಲಿ ಭೇಟಿಯಾದ ಸಾಹಿತಿಗಳು, ಗಾಯಕರು, ಶಿಲ್ಪಿಗಳು ಮುಂತಾದವರ ಬಗ್ಗೆ ಕುತೂಹಲ ಸಂಗತಿಗಳನ್ನು ಪುಸ್ತಕದಲ್ಲಿ ಬರೆದಿದ್ದಾರೆ~ ಎಂದು ಲೇಖಕಿ ಡಾ.ವಿಜಯಾ ಹೇಳಿದರು.

ಕರ್ನಾಟಕ ಲೇಖಕಿಯರ ಸಂಘವು ನಗರದ ನಯನ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಪಾರ್ವತಿ ಅವರ `ನೆನಪಿನಂಗಳದಿಂದ~ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.
ಪಾರ್ವತಿ ಅವರು ಬರವಣಿಗೆಗೆ ಪರಿಸರದ ವಸ್ತುಗಳನ್ನು ಆಯ್ಕೆ ಮಾಡಿಕೊಳ್ಳುವುದು ವಿಶೇಷತೆಯಾಗಿದೆ. ಒಟ್ಟು 49 ಮಂದಿ ವ್ಯಕ್ತಿ ಚಿತ್ರವನ್ನು ಅವರು `ನೆನಪಿನಂಗಳದಿಂದ~ ಕೃತಿಯಲ್ಲಿ ದಾಖಲಿಸಿದ್ದಾರೆ. ಪ್ರತಿ ಲೇಖನವೂ ಹಲವು ಕುತೂಹಲಕಾರಿ ಅಂಶಗಳನ್ನು ಒಳಗೊಂಡಿದೆ ಎಂದರು.

`ಲೇಖಕಿ ಟಿ.ಸುನಂದಮ್ಮ ಅವರು ಶಾಲೆ ಬಿಟ್ಟ ಪ್ರಸಂಗವನ್ನು ಪಾರ್ವತಿ ಬರೆದಿದ್ದಾರೆ. ಬುದ್ಧಿವಂತ ವಿದ್ಯಾರ್ಥಿನಿಯಾಗಿದ್ದ ಸುನಂದಮ್ಮ ಅವರು ಶಿಕ್ಷಕರ ಮೆಚ್ಚುಗೆಗೆ ಪಾತ್ರರಾಗುತ್ತಿದ್ದರು. ಆದರೆ ಶಾಲೆಯಲ್ಲಿದ್ದ ಹುಡುಗರಿಗೆ ಇದನ್ನು ಸಹಿಸಲಾಗಲಿಲ್ಲ. ಈ ವಿಷಯವನ್ನು ವಿದ್ಯಾರ್ಥಿಗಳು ಪೋಷಕರಿಗೆ ತಿಳಿಸಿದರು. ಸುನಂದಮ್ಮ ಅವರು ಶಾಲೆಯಲ್ಲಿದ್ದರೆ ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ ಎಂದು ಪೋಷಕರು ಹೇಳುತ್ತಾರೆ. ಈ ಎಲ್ಲ ಬೆಳವಣಿಗೆಯಿಂದ ಬೇಸತ್ತ ಅವರು ಶಾಲೆ ಬಿಟ್ಟು ಮನೆಯಲ್ಲಿಯೇ ಕಲಿಯುತ್ತಾರೆ ಎಂಬ ವಿಷಯವೂ ಪುಸ್ತಕದಲ್ಲಿದೆ~ ಎಂದು ತಿಳಿಸಿದರು.

`ಸಾಧನೆ ಮಾಡಿದವರು ನನ್ನ ಶ್ರಮವೇ ಸಾಧನೆಗೆ ಕಾರಣ ಎಂದು ಜಂಬ ಕೊಚ್ಚಿಕೊಳ್ಳಬಹುದು. ಆದರೆ ಯಾವುದೇ ವ್ಯಕ್ತಿಯ ಸಾಧನೆಗೆ ಬೇರೆಯವರು ನೆರವು ಯಾವುದಾದರೂ ಒಂದು ರೀತಿಯಲ್ಲಿ ಇದ್ದೇ ಇರುತ್ತದೆ~ ಎಂದು ಪಾರ್ವತಿ ಹೇಳಿದರು.  ಸಂಘದ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ ಅಧ್ಯಕ್ಷತೆ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.