ADVERTISEMENT

ನೆಲದಡಿಯ ಮೆಟ್ರೊ ರೈಲು ನಿಲ್ದಾಣ ಕಾಮಗಾರಿ ಆರಂಭ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2011, 18:45 IST
Last Updated 1 ಫೆಬ್ರುವರಿ 2011, 18:45 IST

ಬೆಂಗಳೂರು: ನಗರದ ಅಂಬೇಡ್ಕರ್ ರಸ್ತೆಯಲ್ಲಿ ನೆಲದಡಿಯ ‘ಮೆಟ್ರೊ’ ರೈಲು ನಿಲ್ದಾಣ ಕಾಮಗಾರಿ ಆರಂಭವಾಗಿರುವ ಹಿನ್ನೆಲೆಯಲ್ಲಿ ವಿಧಾನಸೌಧದ ಮೂರನೇ (ಗೋಪಾಲಗೌಡ ವೃತ್ತದ ಬಳಿ) ಮತ್ತು ಅಂಬೇಡ್ಕರ್ ಪ್ರತಿಮೆ ಬಳಿಯ ನಾಲ್ಕನೇ ಪ್ರವೇಶ ದ್ವಾರವನ್ನು ಮುಚ್ಚಲಾಗಿದೆ.

ವಿಧಾನಸೌಧ ಮತ್ತು ಹೈಕೋರ್ಟ್‌ನಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿ ಹಾಗೂ ಸಾರ್ವಜನಿಕರು ಫೆ.5ರಿಂದ ಈ ಕೆಳಕಂಡ ಮಾರ್ಗಗಳಲ್ಲಿ ಸಂಚರಿಸಲು ಪೊಲೀಸರು ಮನವಿ ಮಾಡಿದ್ದಾರೆ.

ಸಿದ್ದಲಿಂಗಯ್ಯ ವೃತ್ತ ಹಾಗೂ ಹಡ್ಸನ್ ವೃತ್ತದ ಕಡೆಯಿಂದ ವಿಧಾನಸೌಧಕ್ಕೆ ಹೋಗುವ ವಾಹನ ಸವಾರರು ಕೇಂದ್ರ ಗ್ರಂಥಾಲಯ, ಕೆ.ಆರ್.ವೃತ್ತದ ಮೂಲಕ ಬಂದು ಶೇಷಾದ್ರಿ ವೃತ್ತದಲ್ಲಿ ‘ಯು’ ತಿರುವು ಪಡೆದು ಎಂ.ಎಸ್.ಬಿಲ್ಡಿಂಗ್ ಎದುರಿನ ರಸ್ತೆಯಲ್ಲಿ ಸಾಗಿ ವಿಕಾಸಸೌಧ ಪ್ರವೇಶ ದ್ವಾರದ ಮೂಲಕ ವಿಧಾನಸೌಧದೊಳಗೆ ಬರಬೇಕು.

ವಿಧಾನಸೌಧದಿಂದ ಕಾರ್ಪೋರೇಷನ್ ವೃತ್ತಕ್ಕೆ ಹೋಗುವವರು ಅರಮನೆ ರಸ್ತೆ ಮುಖಾಂತರ ಮಹಾರಾಣಿ ಕಾಲೇಜು ವೃತ್ತ, ಶೇಷಾದ್ರಿ ರಸ್ತೆ, ಕೆ.ಆರ್. ವೃತ್ತದ ಮೂಲಕ ಸಾಗಬೇಕು. ಸಿಟಿಓ ವೃತ್ತ, ಪೊಲೀಸ್ ತಿಮ್ಮಯ್ಯ ವೃತ್ತದಿಂದ ಬರುವ ವಾಹನಗಳು ಬಸವೇಶ್ವರ ವೃತ್ತಕ್ಕೆ ಹೋಗಿ, ದೇವರಾಜ ಅರಸು ಗೇಟ್ ಮುಖಾಂತರ ವಿಧಾನಸೌಧಕ್ಕೆ ಹೋಗಬೇಕು.
ಹೈಕೋರ್ಟ್‌ಗೆ ಹೋಗುವವರು ಕೇಂದ್ರ ಗ್ರಂಥಾಲಯದ ಮೂಲಕ ತೆರಳಬಹುದು. ಅಲ್ಲಿಂದ ವಿಧಾನಸೌಧಕ್ಕೆ ಹೋಗಲು ಅವಕಾಶವಿಲ್ಲ. ವಿಧಾನಸೌಧಕ್ಕೆ ಹೋಗುವವರು ಶೇಷಾದ್ರಿ ರಸ್ತೆಯಲ್ಲಿ ‘ಯು’ ತಿರುವು ಪಡೆದು ಎಂ.ಎಸ್.ಬಿಲ್ಡಿಂಗ್, ವಿಕಾಸಸೌಧದ ಮೂಲಕ ನೂತನವಾಗಿ ನಿರ್ಮಿಸಿರುವ ರಸ್ತೆಯಲ್ಲಿ ಸಂಚರಿಸಬಹುದು. ಕ್ವೀನ್ಸ್ ರಸ್ತೆಯಲ್ಲಿ ಬರುವ ವಾಹನಗಳು ಬಾಳೇಕುಂದ್ರಿ ವೃತ್ತದಲ್ಲಿ ಬಲ ತಿರುವು ಪಡೆದು ಕನ್ನಿಂಗ್‌ಹ್ಯಾಂ ರಸ್ತೆ ಮೂಲಕ ಸಾಗಿ, ಚಂದ್ರಿಕಾ ವೃತ್ತದಲ್ಲಿ ಎಡಕ್ಕೆ ತಿರುಗಿ ಬಸವೇಶ್ವರ ವೃತ್ತ ಮತ್ತು ಎಜಿಎಸ್ ವೃತ್ತದ ಮೂಲಕ ಸಾಗಬೇಕು.

ಆನಂದರಾವ್ ವೃತ್ತದ ಮೂಲಕ ಹೈಕೋರ್ಟ್‌ಗೆ ಹೋಗುವ ವಾಹನ ಸವಾರರು ಶೇಷಾದ್ರಿ ರಸ್ತೆ, ಕೆ.ಆರ್.ವೃತ್ತದ ಮೂಲಕ ಕಬ್ಬನ್‌ಪಾರ್ಕ್ ಒಳ ಭಾಗದ ರಸ್ತೆಯಲ್ಲಿ ಬಂದು ಕೇಂದ್ರ ಗ್ರಂಥಾಲಯದ ಬಳಿ ಎಡ ತಿರುವು ಪಡೆದು ಹೋಗಬೇಕು. ವಿಧಾನಸೌಧಕ್ಕೆ ತೆರಳುವವರು ಮಹಾರಾಣಿ ಕಾಲೇಜು ವೃತ್ತದಲ್ಲಿ ಎಡಕ್ಕೆ ತಿರುಗಿ ಅರಮನೆ ರಸ್ತೆಯಲ್ಲಿ ಸಾಗಿ ಎಜಿಎಸ್ ವೃತ್ತದ ಮೂಲಕ ವಿಧಾನಸೌಧ ಪ್ರವೇಶಿಸಬಹುದು.

ಜಿ.ಪಿ.ಓ ವೃತ್ತದ ಕಡೆಯಿಂದ ಬರುವ ವಾಹನಗಳು ಅಂಬೇಡ್ಕರ್ ವೃತ್ತದಲ್ಲಿ ಬಲ ತಿರುವು ಪಡೆಯುವುದನ್ನು ನಿರ್ಬಂಧಿಸಲಾಗಿದೆ. ಅಲ್ಲದೇ ಅಂಬೇಡ್ಕರ್ ವೃತ್ತದಲ್ಲಿ ನೂತನವಾಗಿ ನಿರ್ಮಿಸಿರುವ ಪ್ರವೇಶ ದ್ವಾರದಿಂದ ಹೊರ ಹೋಗಲು ಮಾತ್ರ ಅವಕಾಶವಿದ್ದು, ಗೋಪಾಲಗೌಡ ವೃತ್ತದಲ್ಲಿ ಬಲ ತಿರುವು ನಿಷೇಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.