ADVERTISEMENT

ನೆಹರೂ ಕನಸು ಇನ್ನೂ ಅಪೂರ್ಣ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2011, 19:40 IST
Last Updated 17 ಅಕ್ಟೋಬರ್ 2011, 19:40 IST

ಬೆಂಗಳೂರು:`ವಿದ್ಯಾರ್ಥಿಗಳು ಸಮಾಜ ಸೇವೆಯಲ್ಲಿ ತೊಡಗುವ ಮೂಲಕ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಬೇಕು~ ಎಂದು ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಸೋಮವಾರ ಕರೆ ನೀಡಿದರು.

ಯುವಜನ ಸೇವಾ ಇಲಾಖೆಯ ರಾಷ್ಟ್ರೀಯ ಸೇವಾ ಯೋಜನೆ ಕೋಶವು ರಾಜಭವನದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಎನ್‌ಎಸ್‌ಎಸ್ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

`ರಾಷ್ಟ್ರದ ಅಭಿವೃದ್ಧಿಗೆ ಶ್ರಮಿಸಬೇಕಾದದ್ದು ವಿದ್ಯಾರ್ಥಿಗಳ ಕರ್ತವ್ಯ. ಉತ್ತಮ ಸಮಾಜ ನಿರ್ಮಾಣಕ್ಕಾಗಿ ವಿದ್ಯಾರ್ಥಿಗಳು ತಮ್ಮಲ್ಲಿನ ಉತ್ಸಾಹ ಹಾಗೂ ಶಕ್ತಿಯನ್ನು ವಿನಿಯೋಗಿಸಿ ದುಡಿಯಬೇಕು. ನಾಗರಿಕ ಪ್ರಜ್ಞೆ ಇಲ್ಲದವರಿಂದ ಉತ್ತಮ ಸಮಾಜ ನಿರ್ಮಾಣ ಅಸಾಧ್ಯ~ ಎಂದರು.

`ಜವಾಹರಲಾಲ್ ನೆಹರೂ ನಂತರ ದೇಶದ ರಾಜಕೀಯ ರಂಗದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಆದರೆ, ನೆಹರೂ ಕಂಡಂತಹ ಅನೇಕ ಕನಸು ಹಾಗೂ ಗುರಿಗಳು ಇನ್ನೂ ಪೂರ್ಣ ಪ್ರಮಾಣದಲ್ಲಿ ಈಡೇರಿಲ್ಲ. ಅದನ್ನು ಪೂರ್ಣಗೊಳಿಸುವ ಕರ್ತವ್ಯ ಯುವಕರ ಮೇಲಿದೆ~ ಎಂದು ರಾಜ್ಯಪಾಲರು ನುಡಿದರು.

ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಮಾತನಾಡಿ, ರಾಜ್ಯದಲ್ಲಿ 3 ಲಕ್ಷಕ್ಕೂ ಅಧಿಕ ಮಂದಿ ಎನ್‌ಎಸ್‌ಎಸ್ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಮೂಲಕ ಸಮಾಜದ ಒಳಿತಿಗೆ ಶ್ರಮಿಸುತ್ತಿದ್ದಾರೆ. ಎನ್‌ಎಸ್‌ಎಸ್ ಸ್ವಯಂ ಸೇವಕರ ಸೇವೆ ಶ್ಲಾಘನೀಯವಾದುದು ಎಂದರು.

`ವಿದ್ಯಾರ್ಥಿಗಳು ಎನ್‌ಎಸ್‌ಎಸ್ ಸೇವೆಯಲ್ಲಿ ತೊಡಗಿಸಿಕೊಳ್ಳುವುದರ ಜತೆಗೆ, ಅಧ್ಯಯನಶೀಲತೆಯನ್ನೂ ಮೈಗೂಡಿಸಿಕೊಳ್ಳಬೇಕು~ ಎಂದು ಕರೆ ನೀಡಿದ ಅವರು, `ನೈರ್ಮಲ್ಯ, ಪರಿಸರ ಸಂರಕ್ಷಣೆ, ರಕ್ತದಾನ ಮೊದಲಾದ ಚಟುವಟಿಕೆಗಳ ಬಗ್ಗೆ ಎನ್‌ಎಸ್‌ಎಸ್ ಗ್ರಾಮೀಣ ಪ್ರದೇಶದಲ್ಲಿ ಶಿಬಿರಗಳನ್ನು ನಡೆಸುವ ಮೂಲಕ ತಿಳುವಳಿಕೆ ಮೂಡಿಸುವ ಕೆಲಸ ಮಾಡುತ್ತಿರುವುದು ಮೆಚ್ಚುವಂಥದ್ದು~ ಎಂದರು.

ಮಂಗಳೂರು ವಿವಿಗೆ ಅತ್ಯುತ್ತಮ ಎನ್‌ಎಸ್‌ಎಸ್ ಪ್ರಶಸ್ತಿ
ಇದೇ ಸಂದರ್ಭದಲ್ಲಿ ಮಂಗಳೂರು ವಿಶ್ವವಿದ್ಯಾಲಯಕ್ಕೆ 2010-11ನೇ ಸಾಲಿನ ಅತ್ಯುತ್ತಮ ರಾಷ್ಟ್ರೀಯ ಸೇವಾ ಯೋಜನೆ ವಿಶ್ವವಿದ್ಯಾಲಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಎನ್‌ಎಸ್‌ಎಸ್ ಚಟುವಟಿಕೆಗಳನ್ನು ಕಾಲೇಜು ಮಟ್ಟದಲ್ಲಿ ಶಿಸ್ತುಬದ್ಧವಾಗಿ ಅನುಷ್ಠಾನಗೊಳಿಸಿದ್ದರ ಜತೆಗೆ, 3000 ಯುನಿಟ್ ರಕ್ತದಾನ, 60 ಕಾನೂನು ಸಾಕ್ಷರತಾ ಕ್ಲಬ್ ಹಾಗೂ 52 ರೆಡ್ ರಿಬ್ಬನ್ ಕ್ಲಬ್‌ಗಳ ಸ್ಥಾಪನೆ, 10 ಸಾವಿರ ಗಿಡ ನೆಡುವಂತಹ ಪರಿಸರ ಜಾಗೃತಿ ಕಾರ್ಯಕ್ರಮಗಳನ್ನು ರೂಪಿಸಿದ್ದಕ್ಕಾಗಿ ಮಂಗಳೂರು ವಿವಿಗೆ ಅತ್ಯುತ್ತಮ ಎನ್‌ಎಸ್‌ಎಸ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.
 
ವಿವಿ ಪರವಾಗಿ ಕುಲಪತಿ ಪ್ರೊ.ಟಿ.ಸಿ. ಶಿವಶಂಕರಮೂರ್ತಿ ಅವರು ರಾಜ್ಯಪಾಲರಿಂದ ಪ್ರಶಸ್ತಿ ಸ್ವೀಕರಿಸಿದರು. ಮಂಗಳೂರು ವಿವಿಯ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ. ಗಣನಾಥ ಶೆಟ್ಟಿ ಎಕ್ಕಾರು ಅವರಿಗೆ ಇದೇ ಸಾಲಿನ ಅತ್ಯುತ್ತಮ ಕಾರ್ಯಕ್ರಮ ಸಂಯೋಜನಾಧಿಕಾರಿ ಪ್ರಶಸ್ತಿ ನೀಡಲಾಯಿತು.

ಸಮಾರಂಭದಲ್ಲಿ ಇತರೆ 18 ಮಂದಿ ಅಧಿಕಾರಿಗಳಿಗೆ ಅತ್ಯುತ್ತಮ ಎನ್‌ಎಸ್‌ಎಸ್ ಘಟಕ/ ಕಾರ್ಯಕ್ರಮ ಅಧಿಕಾರಿ ಹಾಗೂ 10 ಮಂದಿ ವಿದ್ಯಾರ್ಥಿಗಳಿಗೆ ಉತ್ತಮ ಸ್ವಯಂ ಸೇವಕ- ಸೇವಕಿಯರ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಯುವಜನ ಸೇವಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಐ.ಆರ್. ಪೆರುಮಾಳ್, ಎನ್‌ಎಸ್‌ಎಸ್ ಸಂಪರ್ಕ ಅಧಿಕಾರಿ ಹಾಗೂ ಇಲಾಖೆಯ ಪದನಿಮಿತ್ತ ಸರ್ಕಾರದ ಜಂಟಿ ಕಾರ್ಯದರ್ಶಿ ಡಾ.ಕೆ.ಬಿ. ಧನಂಜಯ, ಎನ್‌ಎಸ್‌ಎಸ್ ಪ್ರಾದೇಶಿಕ ಕೇಂದ್ರದ ಮುಖ್ಯಸ್ಥ ಕೆ.ವಿ. ಖಾದ್ರಿ ನರಸಿಂಹಯ್ಯ, ಮಂಗಳೂರು ವಿವಿ ಕುಲಸಚಿವ ಪ್ರೊ. ಚಿನ್ನಪ್ಪಗೌಡ ಮತ್ತಿತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.