ಕೃಷ್ಣರಾಜಪುರ:‘ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಶಿಕ್ಷಕರು ಸಮಾಜದ ಆರೋಗ್ಯಕರ ಬೆಳವಣಿಗೆಗೆ ಶ್ರಮಿಸಬೇಕು’ ಎಂದು ವಿಧಾನ ಪರಿಷತ್ತಿನ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಕರೆ ನೀಡಿದರು. ರಾಮಮೂರ್ತಿನಗರದ ವರ್ತುಲ ರಸ್ತೆಯ ಬಳಿ ಎ.ಎಸ್.ಆರ್ ಕಲ್ಯಾಣ ಮಂಟಪದಲ್ಲಿ ರಾಜ್ಯ ಪ್ರೌಢಶಾಲಾ ಶಿಕ್ಷಕರ ಸಂಘವು ಏರ್ಪಡಿಸಿದ್ದ ವೃತ್ತಿ ನೈಪುಣ್ಯತಾ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಾಧ್ಯಮಿಕ ತರಗತಿಗಳಲ್ಲಿ ಪಾಠ ಹೇಳುವುದು ಶಿಕ್ಷಕರಿಗೆ ಒಂದು ಕಷ್ಟದ ಕೆಲಸವಾಗಿದೆ. ಇದನ್ನು ಒಂದು ಸವಾಲು ಎಂದೇ ಸ್ವೀಕರಿಸಿ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಬೇಕು.ಕಾರ್ಯಾಗಾರದ ಪೂರ್ಣ ಪ್ರಯೋಜನವನ್ನು ಶಿಕ್ಷಕರು ಪಡೆದುಕೊಳ್ಳಲಿ ಎಂದು ಅವರು ಹೇಳಿದರು. ರಾಜ್ಯ ಯೋಜನಾ ಮಂಡಳಿಯ ಉಪಾಧ್ಯಕ್ಷ ರಾಮಚಂದ್ರಗೌಡ ಮಾತನಾಡಿ, ‘ಕೆಳಸ್ತರದ ಕುಟುಂಬಗಳಿಂದ ಬಂದ ವಿದ್ಯಾರ್ಥಿಗಳಿಗೆ ಶಿಕ್ಷಕರು ವಿಶೇಷ ಆಸಕ್ತಿ ವಹಿಸಿ ಶಿಕ್ಷಣ ನೀಡಬೇಕು. ಅವರನ್ನು ಸಮಾಜಮುಖಿಯಾಗಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.