ADVERTISEMENT

ನೈಸ್ ದರ ಹೆಚ್ಚಳ: ಚಾಲಕರ ವಿರೋಧ

​ಪ್ರಜಾವಾಣಿ ವಾರ್ತೆ
Published 4 ಜನವರಿ 2012, 19:30 IST
Last Updated 4 ಜನವರಿ 2012, 19:30 IST

ಬೆಂಗಳೂರು: ನಂದಿ ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್‌ಪ್ರೈಸಸ್ ಲಿಮಿಟೆಡ್ (ನೈಸ್) ಕಂಪೆನಿ ಬೆಂಗಳೂರು ಮತ್ತು ಮೈಸೂರು ಕಾರಿಡಾರ್ ರಸ್ತೆಯ ಟೋಲ್ ದರ ಹೆಚ್ಚಿಸಿರುವುದು ವಾಹನ ಚಾಲಕರಿಗೆ ಹೊರೆಯಾಗಿದೆ. 2011ರ ಜನವರಿಯಲ್ಲಿ ಕೊನೆಯ ಬಾರಿಗೆ ಟೋಲ್ ದರವನ್ನು ಪರಿಷ್ಕರಿಸಲಾಗಿತ್ತು. ಈಗ ಮತ್ತೆ ದರ ಹೆಚ್ಚಳ ಮಾಡಿರುವುದಕ್ಕೆ ವಾಹನ ಚಾಲಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

 `ನೈಸ್ ಟೋಲ್ ದರ ದುಬಾರಿಯಾಗಿದೆ. ಕಳೆದ ವರ್ಷವೂ ದರ ಹೆಚ್ಚಳ ಮಾಡಲಾಗಿತ್ತು. ಈಗ ಮತ್ತೆ ದುಬಾರಿ ದರ ನೀಡಿ ರಸ್ತೆಯಲ್ಲಿ ಸಂಚರಿಸಬೇಕಾಗಿದೆ. ಎಂಟು ಕಿ.ಮೀ ಸಂಚರಿಸಲು ಹನ್ನೆರಡು ರೂಪಾಯಿ ಕೊಡಬೇಕು. ವಾರದಲ್ಲಿ ನಾಲ್ಕೈದು ಬಾರಿ ನೈಸ್ ರಸ್ತೆಯಲ್ಲಿ ಸಂಚರಿಸುತ್ತೇನೆ. ದರವನ್ನು ಕಡಿಮೆ ಮಾಡಿದರೆ ಅನುಕೂಲವಾಗುತ್ತದೆ~ ಎಂದು ಮಹಾಲಕ್ಷ್ಮಿ ಲೇಔಟ್‌ನ ಶಂಕರನಗರ ನಿವಾಸಿ ಖಾಸಗಿ ಕಂಪೆನಿ ಉದ್ಯೋಗಿ ನಂದೀಶ್ ಹೇಳುತ್ತಾರೆ.

`ನಾಲ್ಕು ಪಥದ ಹೆದ್ದಾರಿಯಲ್ಲಿ ಪ್ರತಿ ಕಿ.ಮೀಗೆ ಎಂಬತ್ತು ಪೈಸೆ ಟೋಲ್ ವಿಧಿಸಲಾಗುತ್ತದೆ. ಇದನ್ನು ಹೊರತುಪಡಿಸಿ ಉಳಿದ ರಸ್ತೆಗಳಲ್ಲಿ ಅದರ ಆಕಾರ -ವಿನ್ಯಾಸಕ್ಕೆ ಅನುಗುಣವಾಗಿ ಟೋಲ್ ನಿಗದಿಯಾಗುತ್ತದೆ. ಎಲಿವೇಟೆಡ್ ರಸ್ತೆ, ಲಿಂಕ್ ಕಲ್ಪಿಸುವ ರಸ್ತೆ ಎಲ್ಲದಕ್ಕೂ ಒಂದೊಂದು ದರ ವಿಧಿಸಲಾಗುತ್ತದೆ. ಆದರೆ ನೈಸ್ ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಆದ್ದರಿಂದ ಆ ಬಗ್ಗೆ ಏನೂ ಹೇಳಲಾಗದು~ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿ ತಿಳಿಸಿದರು.

ಅಕ್ರಮ: `ನೈಸ್ ರಸ್ತೆ ದರವನ್ನು ಅಕ್ರಮವಾಗಿ ಹೆಚ್ಚಳ ಮಾಡಲಾಗಿದೆ. ಪ್ರತಿ ವರ್ಷ ಶೇ 10ರಿಂದ 20ರಷ್ಟು ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದೆ. ಅಂದರೆ ನೈಸ್ ರಸ್ತೆಯಲ್ಲಿ ಸಂಚರಿಸುವ ವಾಹನಗಳ ಸಂಖ್ಯೆಯೂ ಹೆಚ್ಚಾಗುತ್ತಿದ್ದು, ಅಧಿಕ ಹಣ ಸಂಗ್ರಹವಾಗುತ್ತಿದೆ. ಆದ್ದರಿಂದ ದರ ಕಡಿಮೆ ಮಾಡಬೇಕೇ ಹೊರತು ಹೆಚ್ಚಿಸಬಾರದು. ದರ ಹೆಚ್ಚಳದಿಂದ ವಾಹನದ ಮಾಲೀಕರಿಗೆ ಹೆಚ್ಚಿನ ಹೊರೆಯಾಗಿದೆ~ ಎಂದು ರಾಜ್ಯ ಲಾರಿ ಮಾಲೀಕರು ಮತ್ತು ಏಜೆಂಟರ ಸಂಘ ಅಧ್ಯಕ್ಷ ಜಿ.ಆರ್.ಷಣ್ಮುಗಪ್ಪ ಅಭಿಪ್ರಾಯಪಡುತ್ತಾರೆ.

`ರಾಜ್ಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಜತೆ ಇದೇ ತಿಂಗಳ ಆರನೇ ತಾರೀಖು ಸಭೆ ಏರ್ಪಾಡಾಗಿದೆ. ಸಭೆಯಲ್ಲಿ ಈ ವಿಷಯವನ್ನೂ ಪ್ರಸ್ತಾಪಿಸಲಾಗುತ್ತದೆ. ಆ ನಂತರ ರಾಜ್ಯ ಸರ್ಕಾರಕ್ಕೂ ಮನವಿ ಸಲ್ಲಿಸಲಾಗುತ್ತದೆ. ದರ ಕಡಿಮೆ ಮಾಡುವಂತೆ ನೈಸ್ ಮುಖ್ಯಸ್ಥರಿಗೆ ಪತ್ರ ಬರೆಯಲಾಗಿದೆ. ಅವರಿಂದ ಉತ್ತರ ಬಂದಿಲ್ಲ. ಉತ್ತರ ಬಂದ ನಂತರ ಮುಂದೆ ಏನು ಮಾಡಬೇಕು ಎಂಬುದನ್ನು ನಿರ್ಧರಿಸಲಾಗುತ್ತದೆ. ದರ ಕಡಿಮೆ ಮಾಡದಿದ್ದರೆ ಹೆದ್ದಾರಿ ಬಂದ್ ಮಾಡುವ ಯೋಚನೆ ಸಹ ಇದೆ~ ಎಂದು ಅವರು ತಿಳಿಸಿದರು.

ಒಪ್ಪಂದದಲ್ಲೇ ಇದೆ: `ನಿಯಮದ ಪ್ರಕಾರವಾಗಿಯೇ ಟೋಲ್ ದರವನ್ನು ಹೆಚ್ಚಿಸಲಾಗಿದೆ. ಪ್ರತಿ ವರ್ಷ ಟೋಲ್ ದರ ಹೆಚ್ಚಿಸಬಹುದು ಎಂಬ ಅಂಶ ಒಪ್ಪಂದದಲ್ಲಿಯೇ ಇದೆ. ರಸ್ತೆ ನಿರ್ವಹಣೆ ಮತ್ತು ರಿಪೇರಿಗೆ ಹೆಚ್ಚಿನ ಹಣ ಖರ್ಚಾಗುತ್ತದೆ. ಆದ್ದರಿಂದಲೇ ಹೆಚ್ಚಳ ಮಾಡಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಡೀಸೆಲ್ ದರ, ಪೆಟ್ರೋಲ್ ದರ ಶೇ 30ರಷ್ಟು ಹೆಚ್ಚಾಗಿದೆ. ಆದರೆ ಅಷ್ಟು ಪ್ರಮಾಣದಲ್ಲಿ ನಾವು ದರ ಹೆಚ್ಚಿಸಿಲ್ಲ. ರಸ್ತೆಗಳ ನಿರ್ವಹಣೆ ಮತ್ತು ರಿಪೇರಿಗೆ ಕಳೆದ ವರ್ಷ ಹದಿನೈದು ಕೋಟಿ ರೂಪಾಯಿ ವೆಚ್ಚವಾಗಿದೆ~ ಎಂದು ನೈಸ್ ಮುಖ್ಯಸ್ಥ ಅಶೋಕ್ ಖೇಣಿ `ಪ್ರಜಾವಾಣಿ~ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.