ADVERTISEMENT

ನೋವಿನ ಪಂಜರದಿಂದ ಬಿಡುಗಡೆಯಾದ ಜೈಲು ಹಕ್ಕಿ

ಪ್ರಜಾವಾಣಿ ವಿಶೇಷ
Published 28 ಜನವರಿ 2012, 19:30 IST
Last Updated 28 ಜನವರಿ 2012, 19:30 IST
ನೋವಿನ ಪಂಜರದಿಂದ ಬಿಡುಗಡೆಯಾದ ಜೈಲು ಹಕ್ಕಿ
ನೋವಿನ ಪಂಜರದಿಂದ ಬಿಡುಗಡೆಯಾದ ಜೈಲು ಹಕ್ಕಿ   

ಬೆಂಗಳೂರು: ಕೊಲೆ ಯತ್ನದ ಆರೋಪಿ ಬೆಳಗಾವಿಯ ವಿಠಲ ಭೀಮಪ್ಪ ಅವರಿಗೆ ಜೈಲಿನಿಂದ ಬಿಡುಗಡೆಯಾಗುವ ವಿಶ್ವಾಸವಿದ್ದರೂ ದೇಹವನ್ನು ಇಂಚಿಂಚೇ ತಿನ್ನುತ್ತಿದ್ದ ನೋವಿನಿಂದ ಮುಕ್ತರಾಗುವ ನಂಬಿಕೆ ಇರಲಿಲ್ಲ. ಹಾಗೆ ಅವರು ನೋವು ಉಣ್ಣಲು ಶುರು ಮಾಡಿ ಐದಾರು ವರ್ಷಗಳೇ ಕಳೆದಿದ್ದವು. ಜೈಲಿನ ವಾತಾವರಣ, ವೃದ್ಧಾಪ್ಯದ ಭೀತಿ ಅವರನ್ನು ಇನ್ನಿಲ್ಲದಂತೆ ಕಾಡುತ್ತಿದ್ದವು. ಆಗ ಅವರ ಸಹಾಯಕ್ಕೆ ಬಂದದ್ದು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಅಧಿಕಾರಿಗಳು ಹಾಗೂ ಸಂಜಯ ಗಾಂಧಿ ತುರ್ತು ನಿಗಾ ಮತ್ತು ಅಸ್ಥಿ ಚಿಕಿತ್ಸಾ ಆಸ್ಪತ್ರೆ.

ವಿಠಲ ಜೈಲಿಗೆ ಸೇರಿ ಸುಮಾರು ಹತ್ತು ವರ್ಷಗಳೇ ಕಳೆದಿದ್ದವು. ಅದಾದ ಕೆಲ ವರ್ಷಗಳಲ್ಲೇ ಅವರನ್ನು ಕ್ಷಯ ಆವರಿಸಿತು. ಅದು ಶ್ವಾಸಕೋಶಕ್ಕಿಂತ ಹೆಚ್ಚಾಗಿ ಕಿತ್ತು ತಿಂದದ್ದು ಸೊಂಟ ಹಾಗೂ ತೊಡೆಯ ಮೂಳೆಯನ್ನು. ಕ್ಷಯವೇನೋ ದೇಹದಿಂದ ತೊಲಗಿತು. ಆದರೆ ಕ್ಷಯ ತಂದಿತ್ತ ಕಾಲಿನ ನೋವು ಪ್ರಾಣ ಹಿಂಡತೊಡಗಿತು. ದಿನೇ ದಿನೇ ಬಲಗಾಲು ಕಿರಿದಾಗುತ್ತಾ ಸಾಗಿತ್ತು. ಸೊಂಟದ ಮೂಳೆಯನ್ನು ಅದು  ಛೇದಿಸಿದ್ದರಿಂದ ನೇರವಾಗಿ ನಡೆಯುವುದು ಕೂಡ ಸಾಧ್ಯವಿರಲಿಲ್ಲ. ಶಸ್ತ್ರಚಿಕಿತ್ಸೆಯ ಕಾರಣಕ್ಕೇ ಆತನನ್ನು ಬೆಳಗಾವಿ ಜೈಲಿನಿಂದ ನಗರದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲಾಯಿತು. ನಂತರ ಕಾರಾಗೃಹದ ಹಿರಿಯ ಅಧಿಕಾರಿಗಳ ಒಪ್ಪಿಗೆ ಪಡೆದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು.

ಎಕ್ಸ್‌ರೇ ತಗೆದಾಗಲೇ ವೈದ್ಯ ಡಾ. ವೈ.ಎಸ್. ಶಿವಕುಮಾರ್ ಹಾಗೂ ಅವರ ತಂಡಕ್ಕೆ ಗೊತ್ತಾದದ್ದು ಅದು ಸೆಕೆಂಡರಿ ಆರ್ಥರೈಟಿಸ್ ಎಂಬ ವಿಚಿತ್ರ ನ್ಯೂನತೆ ಎಂದು. ತೊಡೆಯ ಮೂಳೆಯನ್ನು ಚೂರು ಚೂರೇ ತಿನ್ನುತ್ತಾ ಬಂದು ಇಡೀ ಬಲಗಾಲು ಚಲಿಸಲು ಸಾಧ್ಯವೇ ಇಲ್ಲದಂತಾಗಿತ್ತು. ವೈದ್ಯರ ತಂಡಕ್ಕೆ ರೋಗಿಯನ್ನು ಏನಾದರೂ ಮಾಡಿ ಈ ನೋವಿನಿಂದ ಪಾರು ಮಾಡಬೇಕೆಂಬ ತವಕ.

ಆಗಲೇ ಮೇಲೇರಿದ್ದ ಸೊಂಟದ ಮಧ್ಯಭಾಗವನ್ನು ಮತ್ತೆ ಸ್ವಸ್ಥಾನಕ್ಕೆ ತರುವುದು ಹಾಗೂ ಎಗ್ಗಿಲ್ಲದೆ ಬೆಳೆದಿದ್ದ ತೊಡೆಯ ಮೂಳೆಯನ್ನು ಸೊಂಟಕ್ಕೆ ಸೇರ್ಪಡೆ ಮಾಡುವುದು ಎಂದು ತಂಡ ನಿರ್ಧರಿಸಿತು. ಅದೇ ಸಮಯಕ್ಕೆ ಇದು ಮಾಮೂಲಿ ಶಸ್ತ್ರಚಿಕಿತ್ಸೆ ಅಲ್ಲ ಎಂಬುದು ಕೂಡ ವೈದ್ಯರ ಅರಿವಿಗೆ ಬಂದಿತ್ತು. ತೊಡೆಯ ಕೀಲು ವಿಪರೀತ ಬೆಳೆದು ಸೊಂಟದ ಮೂಳೆಯಲ್ಲಿ ರಂಧ್ರ ಉಂಟಾಗಿದ್ದು. ಆ ಜಾಗವನ್ನು ಮೊದಲು ಬಿಗಿಗೊಳಿಸುವ `ಎಂಜಿನಿಯರಿಂಗ್~ ಕೆಲಸಕ್ಕೆ ಕೈ ಹಾಕಲಾಯಿತು. ಅದಕ್ಕಾಗಿ ತಿಪ್ಪಸಂದ್ರದ ಮೂಳೆ ಬ್ಯಾಂಕ್ ಒಂದರಿಂದ ತರಿಸಲಾಗಿದ್ದ ಕಸಿ ಮೂಳೆ ಹಾಗೂ ಆತನ ದೇಹದೊಳಗೇ ಇದ್ದ ಮೂಳೆಯ ತುದಿಯನ್ನು ಬಳಸಿಕೊಳ್ಳಲಾಯಿತು.

ನಂತರ ಟೈಟಾನಿಯಂ ಪಂಜರವನ್ನು ಖಾಲಿ ಜಾಗಕ್ಕೆ ತುಂಬಲಾಯಿತು. ಆಮೇಲೆ ನಡೆದದ್ದು ಸಿಮೆಂಟ್ ಬಳಸಿ ಕೀಲು ಹಾಗೂ ಸೊಂಟದ ಭಾಗವನ್ನು ಜೋಡಿಸುವ ಕಾರ್ಯ. ಇದಕ್ಕಾಗಿ ತುಕ್ಕು ರಹಿತ ಉಕ್ಕಿನಿಂದ ಮಾಡಿದ ಆಮದುಗೊಂಡ ಸಾಧನವನ್ನು ಬಳಸಲಾಯಿತು. ಒಟ್ಟು ಮೂರು ಹಂತದ ಶಸ್ತ್ರಚಿಕಿತ್ಸೆಗೆ ತೆಗೆದುಕೊಂಡ ಕಾಲಾವಧಿ ಎರಡು ಗಂಟೆಗಳು. ಖಾಸಗಿ ಆಸ್ಪತ್ರೆಗಳಲ್ಲಿ ಸುಮಾರು 2.5 ಲಕ್ಷ ರೂಪಾಯಿ ವೆಚ್ಚದಲ್ಲಿ ನಡೆಯುವ ಇಂತಹ ಶಸ್ತ್ರಚಿಕಿತ್ಸೆಗೆ ಸಂಜಯ ಗಾಂಧಿ ಆಸ್ಪತ್ರೆಯಲ್ಲಿ 1.2 ಲಕ್ಷ ರೂಪಾಯಿ ಖರ್ಚಾಗಿದೆ.

`ವೈದ್ಯರ ಶ್ರಮಕ್ಕೆ ಪ್ರತಿಫಲ ದೊರೆತಿದೆ. ಆತ ಗುಣಮುಖನಾಗಿದ್ದಾನೆ. ಹಿಂದೆ ಇಂತಹ ಶಸ್ತ್ರಚಿಕಿತ್ಸೆಗಳು ಖಾಸಗಿ ಆಸ್ಪತ್ರೆಯಲ್ಲಿ ನಡೆದಿವೆ. ಆದರೆ ಅವೆಲ್ಲಕ್ಕಿಂತಲೂ ಸಂಕೀರ್ಣವಾದ ಶಸ್ತ್ರಚಿಕಿತ್ಸೆ ಇದಾಗಿತ್ತು~ ಎನ್ನುತ್ತಾರೆ ವೈದ್ಯ ಡಾ.ಶಿವಕುಮಾರ್.

ಅಂದಹಾಗೆ ರೋಗಿಯ ಇಡೀ ವೈದ್ಯಕೀಯ ವೆಚ್ಚವನ್ನು ಬಂದಿಖಾನೆ ಅಧಿಕಾರಿಗಳೇ ಭರಿಸಿದ್ದಾರೆ. ವಿಠಲ ಅವರು ಜೈಲಿನಿಂದ ಆಸ್ಪತ್ರೆಗೆ ಸೇರಿದಾಗ ಅವರ ಬಂಧುಗಳಾಗಲೀ, ಸ್ನೇಹಿತರಾಗಲೀ ಇರಲಿಲ್ಲ. ಆತ ಆಸ್ಪತೆಗೆ ದಾಖಲಾಗಿ ಸಂಪೂರ್ಣ ಗುಣಮುಖನಾಗಿ ಹೊರ ಬರುವವರೆಗೂ ಜೈಲು ಸಿಬ್ಬಂದಿ ಆತನ ನಿಗಾ ವಹಿಸಿದ್ದಾರೆ. ಹಣ್ಣು ಹಂಪಲು, ಅಗತ್ಯ ಆಹಾರ ನೀಡಿ ಪ್ರೀತಿಯಿಂದ ಸಲಹಿದ್ದಾರೆ. ಆಸ್ಪತ್ರೆಯಿಂದ ಬಿಡುಗಡೆಯಾಗುವ ವೇಳೆಗೆ ಆತನಿಗೆ ಜಾಮೀನು ಕೂಡ ದೊರೆತು ಈಗ ಜೈಲಿನಿಂದಲೂ ಆತ ಮುಕ್ತ.

`ಪ್ರಜಾವಾಣಿ~ಯೊಂದಿಗೆ ಮಾತನಾಡಿದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಜೈಲು ಅಧೀಕ್ಷಕ ಟಿ.ಎಚ್. ಲಕ್ಷ್ಮೀನಾರಾಯಣ, `ಶಸ್ತ್ರಚಿಕಿತ್ಸೆಗೆ ಸುಮಾರು 99 ಸಾವಿರ ರೂಪಾಯಿ ಹಣ ನೀಡಲು ಮಾತ್ರ ಐಜಿಗೆ ಅಧಿಕಾರವಿತ್ತು. ಹೀಗಾಗಿ ಜೈಲು ಅಧಿಕಾರಿಗಳಿಂದ ನೀಡಬಹುದಾದ ಹಣವನ್ನು ಉಪಯೋಗಿಸಿ ಶಸ್ತ್ರಚಿಕಿತ್ಸೆಗೆ ನೀಡಲಾಯಿತು. ಬಾಕಿ ಹಣವನ್ನು ಶೀಘ್ರದಲ್ಲಿಯೇ ಪಾವತಿ ಮಾಡಲಾಗುವುದು ಎಂದು ಆಸ್ಪತ್ರೆಗೆ ತಿಳಿಸಿದ್ದೇವೆ~ ಎಂದರು.

`ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ವಿಠಲ ಆರಾಮಾಗಿ ಓಡಾಡತೊಡಗಿದರು. ಅಷ್ಟರಲ್ಲಿಯೇ ಅವರ ಜಾಮೀನು ಆದೇಶವೂ ಬಂತು. ಬೆಳಗಾವಿಗೆ ಆತ ಪ್ರಯಾಣಿಸಲು ಅನುಕೂಲವಾಗುವಂತೆ ಪ್ರಯಾಣದ ವೆಚ್ಚವನ್ನು ಕಾರಾಗೃಹದಿಂದಲೇ ಭರಿಸಲಾಗಿದೆ. ಆತ ಗುಣಮುಖನಾಗಿದ್ದು ಸಂತೋಷದ ವಿಚಾರ~ ಎಂದು ತಿಳಿಸಿದರು.

ಆಸ್ಪತ್ರೆ ಇಂತಹ ಸಂಕೀರ್ಣ ಶಸ್ತ್ರಚಿಕಿತ್ಸೆಗಳನ್ನು ಕಡಿಮೆ ವೆಚ್ಚದಲ್ಲಿ ನಡೆಸಲು ಸಿದ್ಧವಿದೆ. ಪ್ರತಿ ಬುಧವಾರ ಆಸ್ಪತ್ರೆಯ ಹೊರರೋಗಿಗಳ ವಿಭಾಗದಲ್ಲಿ ವೈದ್ಯರನ್ನು ಭೇಟಿ ಮಾಡಲು ಅವಕಾಶವಿದೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಬಹುದಾದ ದೂರವಾಣಿ ಸಂಖ್ಯೆ: 9845371435.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.