ಬೆಂಗಳೂರು: ‘ನಿರಪರಾಧಿಗಳಿಗೆ ಶಿಕ್ಷೆಯಾಗುವುದನ್ನು ತಡೆಯಲು ಶೀಘ್ರ ನ್ಯಾಯದಾನ ವ್ಯವಸ್ಥೆ ಜಾರಿಗೆ ಬರಬೇಕು’ ಎಂದು ನಿವೃತ್ತ ಐಎಎಸ್ ಅಧಿಕಾರಿ ಶ್ರೀಧರ್ ಹೇಳಿದರು. ಕ್ರಿಸ್ಪ್ ಹಾಗೂ ಸೆರೆನಿಟಿ ಸಂಘಟನೆಗಳು ಜಂಟಿಯಾಗಿ ನಗರದಲ್ಲಿ ಭಾನುವಾರ ಆಯೋಜಿಸಿದ್ದ ‘ಸುಳ್ಳು ಪ್ರಕರಣಗಳ ವಿರುದ್ಧ ಅಭಿಯಾನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಸುಳ್ಳು ಪ್ರಕರಣಗಳನ್ನು ದಾಖಲಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಆಗ ಮಾತ್ರ ಅಮಾಯಕರು ಅನ್ಯಾಯಕ್ಕೆ ಒಳಗಾಗುವುದನ್ನು ತಡೆಯಬಹುದು’ ಎಂದು ಅವರು ಅಭಿಪ್ರಾಯಪಟ್ಟರು.
ಸುಮಂಗಲಿ ಸೇವಾಶ್ರಮದ ಮುಖ್ಯಸ್ಥೆ ಸುಶೀಲಮ್ಮ ಮಾತನಾಡಿ, ‘ಸುಳ್ಳು ಪ್ರಕರಣಗಳನ್ನು ದಾಖಲಿಸುವವರಿಗೆ ಸರಿಯಾದ ಶಾಸ್ತಿಯಾಗಬೇಕು. ಕಾನೂನು ಅಪರಾಧಿಗಳನ್ನು ದಂಡಿಸಬೇಕೆ ಹೊರತು ನಿರಪರಾಧಿಗಳನ್ನಲ್ಲ’ ಎಂದರು.
ಸೇಂಟ್ ಜಾನ್ಸ್ ಆಸ್ಪತ್ರೆಯ ಮನೋವೈದ್ಯ ಡಾ.ಸಾವಿಯೊ ಮಾತನಾಡಿ, ‘ಕಾರಾಗೃಹಗಳಲ್ಲಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳಿಗೆ ಮಾನಸಿಕ ಸಮಾಲೋಚನೆ ಅಗತ್ಯವಿರುತ್ತದೆ. ಹೀಗಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಕೈದಿಗಳಿಗೆ ಆಸ್ಪತ್ರೆ ವತಿಯಿಂದ ಉಚಿತವಾಗಿ ಸಮಾಲೋಚನೆ ನಡೆಸಲಾಗುವುದು’ ಎಂದು ಹೇಳಿದರು.
ಕ್ರಿಸ್ಪ್ ಸಂಘಟನೆಯ ಸಂಸ್ಥಾಪಕ ಕುಮಾರ್ ಜಾಗೀರ್‌ದಾರ್ ಮಾತನಾಡಿ, ‘ಕೆಲವು ಕಾಯ್ದೆಗಳು ನಿರಂತರವಾಗಿ ದುರುಪಯೋಗವಾಗುತ್ತಿರುವುದನ್ನು ನಾವು ಪ್ರತಿನಿತ್ಯ ಕಾಣುತ್ತಿದ್ದೇವೆ. ವರದಕ್ಷಿಣೆ ನಿಷೇಧ ಕಾಯ್ದೆಯಿಂದ ಹಲವು ಅಮಾಯಕರು ತೊಂದರೆ ಅನುಭವಿಸುವಂತಾಗಿದೆ. ಹೀಗಾಗಿ ಕೆಲವು ಕಾಯ್ದೆಗಳ ದುರುಪ ಯೋಗ ಆಗುವುದನ್ನು ತಡೆಯಲು ಸರ್ಕಾರ ಅಗತ್ಯ ಕ್ರಮ ಕೈ
ಗೊಳ್ಳಬೇಕು’ ಎಂದು ಅವರು ಒತ್ತಾಯಿಸಿದರು.
ಕಾಯ್ದೆಗಳ ದುರುಪಯೋಗ ಕಂಡುಬಂದರೆ ಸಂಪರ್ಕಿಸಿ ಸಹಾಯವಾಣಿ: 8139999959
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.