ADVERTISEMENT

ಪತಿಗೆ ಗಂಡಾಂತರವೆಂದು ಬೆದರಿಸಿ ಚಿನ್ನ ದೋಚಿದರು!

ವಿಶೇಷ ಪೂಜೆ ನೆಪದಲ್ಲಿ ವಂಚನೆ l ನಕಲಿ ಜ್ಯೋತಿಷಿ, ಸನ್ಯಾಸಿನಿಯರ ಪತ್ತೆಗೆ ವಿಶೇಷ ತಂಡ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2018, 20:01 IST
Last Updated 1 ಏಪ್ರಿಲ್ 2018, 20:01 IST

ಬೆಂಗಳೂರು: ಶಾಸ್ತ್ರ ಹೇಳುವವನ ಸೋಗಿನಲ್ಲಿ ಬಂದ ನಕಲಿ ಜ್ಯೋತಿಷಿಯೊಬ್ಬ, ‘ವಿಶೇಷ ಪೂಜೆ ಮಾಡಿಸದಿದ್ದರೆ ನಿಮ್ಮ ಗಂಡ ಸಾಯುತ್ತಾರೆ’ ಎಂದು ಮಹಿಳೆಗೆ ಹೆದರಿಸಿ ಚಿನ್ನಾಭರಣ ದೋಚಿಕೊಂಡು ಹೋಗಿದ್ದಾನೆ.

ವಂಚನೆಗೆ ಒಳಗಾದ ಜನತಾ ಕಾಲೊನಿಯ ಕವಿತಾ, ಮಾರ್ಚ್ 29ರಂದು ಅಮೃತಹಳ್ಳಿ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು
ಸಿ.ಸಿ ಟಿ.ವಿ ಕ್ಯಾಮೆರಾಗಳನ್ನು ಪರಿಶೀಲಿಸಿ, ವಂಚಕನ ಬಂಧನಕ್ಕೆ ಬಲೆ ಬೀಸಿದ್ದಾರೆ.

‘ಮಾರ್ಚ್ 29ರ ಬೆಳಿಗ್ಗೆ 11 ಗಂಟೆಗೆ ನಾನೊಬ್ಬಳೇ ಮನೆಯಲ್ಲಿದ್ದೆ. ಆಗ ಬಾಗಿಲು ಬಡಿದ ವ್ಯಕ್ತಿಯೊಬ್ಬ, ತನ್ನನ್ನು ಜ್ಯೋತಿಷಿ ಎಂದು ಪರಿಚಯಿಸಿಕೊಂಡ. ಹಸಿರು ಅಂಗಿ, ಬಿಳಿ ಪಂಚೆ ಹಾಗೂ ತಲೆಗೆ ಪೇಟ ಕಟ್ಟಿಕೊಂಡಿದ್ದ ಆ ವ್ಯಕ್ತಿ ಜ್ಯೋತಿಷಿಯಂತೆಯೇ ಕಾಣಿಸುತ್ತಿದ್ದ. ಹೀಗಾಗಿ, ಆತನ ಮಾತನ್ನು ನಂಬಿದೆ’ ಎಂದು ಕವಿತಾ ದೂರಿನಲ್ಲಿ ವಿವರಿಸಿದ್ದಾರೆ.

ADVERTISEMENT

‘ನಂತರ ಮನೆಯೊಳಗೆ ಬಂದು ವಾಸ್ತು ನೋಡಿದ ಆತ, ‘ನಿಮ್ಮ ಪತಿಗೆ ಗಂಡಾಂತರವಿದೆ. ಈ ದಿನ ವಿಶೇಷ ಪೂಜೆ ಮಾಡದಿದ
ಇನ್ನೆರಡು ದಿನಗಳಲ್ಲಿ ಅವರು ಸತ್ತು ಹೋಗುತ್ತಾರೆ’ ಎಂದು ಹೇಳಿದ. ಇದರಿಂದ ಗಾಬರಿಗೆ ಒಳಗಾಗಿ, ಕೂಡಲೇ ಪೂಜೆ ಶುರು ಮಾಡಲು ಸೂಚಿಸಿದೆ.’

‘ಮನೆಯಲ್ಲಿರುವ ಆಭರಣಗಳನ್ನು ಪೂಜೆಗೆ ಇಡಬೇಕೆಂದು ಆತ ಹೇಳಿದ್ದರಿಂದ, ಎರಡು ಚಿನ್ನದ ಸರಗಳು, ಓಲೆಗಳು ಹಾಗೂ ಒಂದು ಜೊತೆ ಬಳೆಯನ್ನು ಡಬ್ಬಿಯಲ್ಲಿ ಹಾಕಿ ಕೊಟ್ಟೆ. ಸ್ವಲ್ಪ ಸಮಯದ ಬಳಿಕ ಪೂಜೆ ಮುಗಿಸಿದ ಆತ, ಕಾಣಿಕೆ ನೀಡುವಂತೆ ಕೇಳಿದ. ನಾನು ಹಣ ತಂದು ಕೊಟ್ಟ ಬಳಿಕ ಆ ಡಬ್ಬಿ ಕೊಟ್ಟು, ‘ಇದನ್ನು ಈಗ ದೇವರ ಮುಂದಿಡಿ. ಸ್ನಾನ ಮಾಡಿ ದೀಪ ಹಚ್ಚಿದ ನಂತರ ತೆರೆಯಿರಿ’ ಎಂದು ಹೇಳಿದ. ಅಂತೆಯೇ ನಾನು ಸ್ನಾನ ಮುಗಿಸಿ ಡಬ್ಬಿ ತೆಗೆದರೆ ಅದರಲ್ಲಿ ಒಡವೆ ಇರಲಿಲ್ಲ.’

‘ಸ್ಥಳೀಯರ ನೆರವಿನಿಂದ ಸುತ್ತಮುತ್ತಲ ರಸ್ತೆಗಳಲ್ಲಿ ಹುಡುಕಾಟ ನಡೆಸಿದರೂ ಆ ವ್ಯಕ್ತಿ ಪತ್ತೆಯಾಗಲಿಲ್ಲ. ನಂತರ ಪತಿಗೆ ವಿಷಯ ತಿಳಿಸಿ, ಅವರ ಸೂಚ
ನೆಯಂತೆ ಠಾಣೆಗೆ ದೂರು ಕೊಟ್ಟಿದ್ದೇನೆ’ ಎಂದು ಕವಿತಾ ದೂರಿನಲ್ಲಿ ಹೇಳಿದ್ದಾರೆ.

ಸನ್ಯಾಸಿನಿಯರೂ ಭಾಗಿ: ‘ಮಾರ್ಚ್ 28ರ ಮಧ್ಯಾಹ್ನ ಸನ್ಯಾಸಿನಿಯರ ಸೋಗಿನಲ್ಲಿ ಮನೆ ಹತ್ತಿರ ಬಂದಿದ್ದ ಇಬ್ಬರು ಯುವತಿಯರು, ‘ನಮ್ಮ ಗುರುಗಳು ನಾಳೆ ಈ ಪ್ರದೇಶಕ್ಕೆ ಬರುತ್ತಾರೆ. ಕೌಟುಂಬಿಕ ಸಮಸ್ಯೆಗಳಿದ್ದರೆ ಅವರ ಬಳಿ ಹೇಳಿಕೊಳ್ಳಿ. ಅವರು ಸುಲಭವಾಗಿ ನಿಮ್ಮ ಸಮಸ್ಯೆಗಳನ್ನು ಬಗೆಹರಿಸುತ್ತಾರೆ’ ಎಂದು ಹೇಳಿ ಹೋಗಿದ್ದರು. ಅಂತೆಯೇ ಮರುದಿನ ಬೆಳಿಗ್ಗೆ ಈ ವ್ಯಕ್ತಿ ಬಂದಿದ್ದರಿಂದ ಪತ್ನಿ ನಂಬಿಮೋಸ ಹೋಗಿದ್ದಾಳೆ’ ಎಂದು ಕವಿತಾ ಪತಿ ರಘು ‘ಪ್ರಜಾವಾಣಿ’ಗೆ ತಿಳಿಸಿದರು.
**
ಒಂದೇ ಗ್ಯಾಂಗ್‌ನ ಕಾರ್ಯಾಚರಣೆ

‘2017ರ ನ.17ರಂದು ಸುಬ್ರಹ್ಮಣ್ಯಪುರದಲ್ಲಿ ನಕಲಿ ಜ್ಯೋತಿಷಿ ಹಾಗೂ ಸನ್ಯಾಸಿನಿಯರ ಗ್ಯಾಂಗ್ ಶ್ರೀದೇವಿ ಎಂಬುವರಿಂದ ಚಿನ್ನಾಭರಣ ದೋಚಿತ್ತು. ಅದಾದ ನಾಲ್ಕೇ ದಿನಗಳಲ್ಲಿ ಅತ್ತಿಬೆಲೆಯ ಕಿತ್ತಗಾನಹಳ್ಳಿಯಲ್ಲಿ ವಿಶೇಷ ಪೂಜೆ ನೆಪದಲ್ಲಿ ಕಾವ್ಯಾ ಎಂಬುವರ ಮನೆಯಿಂದ ₹12 ಸಾವಿರ ನಗದು ಹಾಗೂ 150 ಗ್ರಾಂ ಚಿನ್ನ ಕದ್ದೊಯ್ದಿತ್ತು. ವಂಚನೆ ಶೈಲಿಯನ್ನು ಗಮನಿಸಿದರೆ, ಇಲ್ಲೂ ಅದೇ ಗ್ಯಾಂಗ್ ಕೃತ್ಯ ಎಸಗಿರುವ ಅನುಮಾನ ವ್ಯಕ್ತವಾಗಿದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.