ADVERTISEMENT

ಪತ್ರ ಬರೆದಿಟ್ಟು ಕಟ್ಟಡದಿಂದ ಹಾರಿದ ವಿದ್ಯಾರ್ಥಿನಿ

ಕಾಲೇಜು ಬಳಿ ರಾದ್ಧಾಂತ, 15 ದಿನಗಳಿಂದ ಕೋಮಾ ಸ್ಥಿತಿ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2015, 19:53 IST
Last Updated 1 ಸೆಪ್ಟೆಂಬರ್ 2015, 19:53 IST

ಬೆಂಗಳೂರು: ‘ತರಗತಿಗೆ ಹೋಗದೆ ನಡುರಸ್ತೆಯಲ್ಲಿ ಹುಡುಗನ ಜತೆ ಮಾತನಾಡುತ್ತ ನಿಂತಿದ್ದೆನೆಂದು ಸುಳ್ಳು ಹೇಳಿ ರಾದ್ಧಾಂತ ಮಾಡಿದ ಮಹಿಳೆ, ನನ್ನ ತಾಯಿ, ಸಹಪಾಠಿಗಳು ಹಾಗೂ ಶಿಕ್ಷಕರಿಗೆ ಮುಖ ತೋರಿಸದಂತೆ ಮಾಡಿದ್ದಾರೆ’ ಎಂದು ಪತ್ರ ಬರೆದಿಟ್ಟು ಕಟ್ಟಡದ  4ನೇ ಮಹಡಿಯಿಂದ ಬಿದ್ದಿದ್ದ ವಿದ್ಯಾರ್ಥಿನಿ, ಖಾಸಗಿ ಆಸ್ಪತ್ರೆಯಲ್ಲಿ 15 ದಿನಗಳಿಂದ ಜೀವನ್ಮರಣ ಹೋರಾಟ ನಡೆಸುತ್ತಿದ್ದಾಳೆ.

ಆಗಸ್ಟ್ 18ರಂದು ಹಲಸೂರು ಸಮೀಪದ ಗೌತಮಪುರದಲ್ಲಿ ವಿದ್ಯಾರ್ಥಿನಿ ಕಟ್ಟಡದಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಮೊದಲು ಆಕೆಯನ್ನು ಸಿಎಂಎಚ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹಾಸ್ಮ್ಯಾಟ್‌ಗೆ ವರ್ಗಾಯಿಸಲಾಗಿದೆ. ಅಂದಿನಿಂದ ಕೋಮಾ ಸ್ಥಿತಿಯಲ್ಲೇ ಇದ್ದ ಆಕೆ, ಮಂಗಳವಾರ ಕಣ್ಣು ತೆರೆದಿದ್ದಾಳೆ ಎಂದು ಪೊಲೀಸರು ಹೇಳಿದರು.

‘ಆ.18ರಂದು ಗೀತಾ ಅಂಥೋಣಿ ಎಂಬುವರು, ತಂಗಿಯ ಜುಟ್ಟು ಹಿಡಿದುಕೊಂಡು ಕಾಲೇಜಿಗೆ ಎಳೆದುಕೊಂಡು ಹೋಗಿದ್ದರು. ಅಲ್ಲಿ ಸಹಪಾಠಿಗಳ ಎದುರೇ, ‘ಈಕೆ ನನ್ನ ಮನೆ ಮುಂದೆ ಹುಡುಗನೊಬ್ಬನ ಜತೆ ಕೆಟ್ಟದಾಗಿ ನಡೆದುಕೊಳ್ಳುತ್ತಿದ್ದಳು’ ಎಂದು ಹೇಳಿದ್ದರು. ಆಗ ವಿದ್ಯಾರ್ಥಿಗಳು ಗುಂಪುಗೂಡಿರುವುದನ್ನು ಕಂಡು ಸ್ಥಳಕ್ಕೆ ಬಂದ ಶಿಕ್ಷಕರು, ಗೀತಾ ಅವರನ್ನು ಸಮಾಧಾನಪಡಿಸಿ ಕಳುಹಿಸಿದ್ದರು’ ಎಂದು ವಿದ್ಯಾರ್ಥಿನಿಯ ಸೋದರ ಹೇಳಿದರು.

‘ಕಿರುಪರೀಕ್ಷೆ ಇದ್ದ ಕಾರಣ ತಂಗಿಯನ್ನು ತರಗತಿಗೆ ಕಳುಹಿಸಿದ ಶಿಕ್ಷಕರು, ನಂತರ ತಾಯಿಗೆ ಕರೆ ಮಾಡಿ ನಡೆದ ಘಟನೆಯನ್ನು ವಿವರಿಸಿದರು. ಆಗ ತಾಯಿ ಕೂಡ ಕಾಲೇಜಿಗೆ ಹೋಗಿ ಗೀತಾ ಅಂಥೋಣಿ ಅವರ ಬಳಿ ಮಾತುಕತೆ ನಡೆಸಿ ಬಂದಿದ್ದರು’ ಎಂದರು. ಪರೀಕ್ಷೆ ಮುಗಿಸಿ ಮಧ್ಯಾಹ್ನ ಮನೆಗೆ ಮರಳಿದ ವಿದ್ಯಾರ್ಥಿನಿ, ಎರಡು ಪುಟ ಪತ್ರ ಬರೆದಿದ್ದಳು. ನಂತರ ಬಾಲ್ಕನಿಗೆ ಬಂದು ನಾಲ್ಕನೇ ಮಹಡಿಯಿಂದ ಹಾರಿದ್ದಳು. ಈ ವೇಳೆ ಆಕೆಯ ಅಜ್ಜಿ ಮಾತ್ರ ಮನೆಯಲ್ಲಿದ್ದರು. ಸ್ಥಳೀಯರು ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದರು.

ಪತ್ರದಲ್ಲಿ ಹೀಗಿದೆ: ‘ನನ್ನ ಮಾತನ್ನು ನಂಬಿ. ಆ ಆಂಟಿ ಹೇಳಿದ ಹಾಗೆ ನಾನು ನಡೆದುಕೊಂಡಿಲ್ಲ. ಇಷ್ಟೆಲ್ಲ ಆದ ಮೇಲೆ ನಿಮಗೆ ಹೇಗೆ ಮುಖ ತೋರಿಸಬೇಕು ತಿಳಿಯುತ್ತಿಲ್ಲ. ದಯವಿಟ್ಟು ಕ್ಷಮಿಸಿಬಿಡು ಅಮ್ಮ’ ಎಂದು ವಿದ್ಯಾರ್ಥಿನಿ ಪತ್ರದಲ್ಲಿ ಬರೆದಿದ್ದಾಳೆ. ಅದರ ಅನ್ವಯ ಅಪರಾಧ ಸಂಚು (506) ಹಾಗೂ ಉದ್ದೇಶ ಪೂರ್ವಕವಾಗಿ ಶಾಂತಿ ಕದಡಿದ (504) ಆರೋಪದ ಮೇಲೆ ಗೀತಾ ಅಂಥೋಣಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಹಲಸೂರು ಪೊಲೀಸರು ಮಾಹಿತಿ ನೀಡಿದರು.

ಬುದ್ಧಿ ಹೇಳಿದ್ದೆವು: ‘ನಮ್ಮ ಮನೆ ಎದುರು ಯುವಕ–ಯುವತಿಯರು ಕೆಟ್ಟದಾಗಿ ನಡೆದುಕೊಳ್ಳುವುದು ಸಾಮಾನ್ಯವಾಗಿದೆ. ಸ್ಥಳೀಯರೆಲ್ಲ ಮುಜುಗರ ಪಡುವಂಥ ವಾತಾವರಣ ನಿರ್ಮಾಣವಾಗಿದೆ. ಈ ಕಾರಣಕ್ಕೆ ಅಲ್ಲಿ ಸೇರುವವರನ್ನು ಬೈಯ್ದು ಕಳುಹಿಸುತ್ತಿದ್ದೇವೆ’ ಎಂದು ಗೀತಾ ಅವರ ಪತಿ ಅಂಥೋಣಿ ನಂದನ್ ಹೇಳಿದರು. ‘ಆ ದಿನ ಕೂಡ ಪತ್ನಿಯು ಇದು ಪಾರ್ಕ್‌ ಅಲ್ಲ. ಸಾರ್ವಜನಿಕ ರಸ್ತೆ ಎಂದು ಏರು ಧ್ವನಿಯಲ್ಲಿ ವಿದ್ಯಾರ್ಥಿನಿಗೆ ಬೈಯ್ದಿದ್ದಳು. ನಂತರ ಕಾಲೇಜಿನ ಬಳಿ ತೆರಳಿ ಶಿಕ್ಷಕರಿಗೆ ದೂರು ಕೊಟ್ಟಿದ್ದಳು’ ಎಂದರು.

ಪ್ರತಿ ದೂರು: ವಿದ್ಯಾರ್ಥಿನಿಯ ಕೈ–ಕಾಲು ಸ್ವಾಸ್ಥ್ಯ ಕಳೆದುಕೊಂಡಿವೆ. ಚಿಕಿತ್ಸೆಗೆ 8 ಲಕ್ಷ ತಗುಲಬಹುದು ಎಂದು ವೈದ್ಯರು ಹೇಳಿದ್ದಾರೆ. ಗೀತಾ ಅವರೇ ವೈದ್ಯಕೀಯ ವೆಚ್ಚ ಭರಿಸಬೇಕು ಎಂದು ಗಾಯಾಳು ಕುಟುಂಬ ಒತ್ತಾಯಿಸಿದೆ. ಇದಕ್ಕೆ ಅವರು ಒಪ್ಪುತ್ತಿಲ್ಲ. ‘ನಮ್ಮ ಮನೆ ಮುಂದೆ ಬಂದು ಹಣಕ್ಕಾಗಿ ಬೆದರಿಕೆ ಹಾಕುತ್ತಿದ್ದಾರೆ’ ಎಂದು ಗೀತಾ ಅವರು ವಿದ್ಯಾರ್ಥಿನಿಯ ಕುಟುಂಬದ ವಿರುದ್ಧ ಪ್ರತಿದೂರು ಕೊಟ್ಟಿದ್ದಾರೆ ಎಂದು ಹಲಸೂರು ಠಾಣೆಯ ಪೊಲೀಸರು ಮಾಹಿತಿ ನೀಡಿದರು.

*
‘ಕರೆ ಮಾಡಲು ಹೇಳಿದ್ದೆ’
‘ಆ ವಿದ್ಯಾರ್ಥಿನಿ ಪರೀಕ್ಷೆ ಬರೆದು 12 ಗಂಟೆಗೆ ತರಗತಿಯಿಂದ ಹೊರಬಂದಳು. ಆಗ ಮನೆ ತಲುಪಿದ ಕೂಡಲೇ ಕರೆ ಮಾಡು ಎಂದು ಹೇಳಿ ಕಳುಹಿಸಿದ್ದೆ. ಆದರೆ, ಸಂಜೆ 4 ಗಂಟೆಗೆ ಕರೆ ಮಾಡಿದ ಆಕೆಯ ಸಂಬಂಧಿಕರು, ವಿದ್ಯಾರ್ಥಿನಿ ಕಟ್ಟಡದಿಂದ ಹಾರಿದ ಸಂಗತಿ ತಿಳಿಸಿದರು’ ಎಂದು ಪ್ರಾಂಶುಪಾಲೆ ರೇಖಾ ವೇಣುಗೋಪಾಲ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.