ADVERTISEMENT

‘ಪರಿಸರ ಇಲಾಖೆಗೂ ಜಾನುವಾರಿಗೂ ಏನು ಸಂಬಂಧ?’

​ಪ್ರಜಾವಾಣಿ ವಾರ್ತೆ
Published 9 ಜೂನ್ 2017, 19:30 IST
Last Updated 9 ಜೂನ್ 2017, 19:30 IST
ಜಿ.ರಾಮಕೃಷ್ಣ ಹಾಗೂ ಸಾಹಿತಿ ಬೊಳುವಾರು ಮಹಮ್ಮದ್ ಕುಂಞಿ ಮಾತುಕತೆ ನಡೆಸಿದರು. ವಿ.ಗೋಪಾಲಗೌಡ ಇದ್ದಾರೆ.  –ಪ್ರಜಾವಾಣಿ ಚಿತ್ರ
ಜಿ.ರಾಮಕೃಷ್ಣ ಹಾಗೂ ಸಾಹಿತಿ ಬೊಳುವಾರು ಮಹಮ್ಮದ್ ಕುಂಞಿ ಮಾತುಕತೆ ನಡೆಸಿದರು. ವಿ.ಗೋಪಾಲಗೌಡ ಇದ್ದಾರೆ. –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಕೇಂದ್ರ ಪರಿಸರ ಸಚಿವಾಲಯಕ್ಕೂ ಜಾನುವಾರುಗಳಿಗೂ ಏನು ಸಂಬಂಧ’ ಎಂದು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ಪ್ರಶ್ನಿಸಿದರು.

ಅಖಿಲ ಭಾರತ ವಕೀಲರ ಸಂಘದ ಬೆಂಗಳೂರು ಜಿಲ್ಲಾ ಸಮಿತಿಯು ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ (ಜಾನುವಾರು ಮಾರುಕಟ್ಟೆಗಳ ನಿಯಂತ್ರಣ) ನಿಯಮಗಳು– 2017’ರ ಸಿಂಧುತ್ವ ಕುರಿತ ಚರ್ಚೆಯಲ್ಲಿ ಅವರು ಮಾತನಾಡಿದರು.

‘ಇಮಾಮ್ ಸಾಬಿಗೂ ಗೋಕುಲಾಷ್ಟಮಿಗೂ ಏನು ಸಂಬಂಧ ಎಂದು ಪ್ರಶ್ನಿಸುವಂತಾಗಿದೆ. ಪರಿಸರ ಸಚಿವಾಲಯದ ಕೆಲಸ ಏನು? ಗಂಗಾ ನದಿ ಮಲಿನಗೊಂಡಿದೆ. ಕೈಗಾರಿಕೆಗಳ ತ್ಯಾಜ್ಯ ನೀರನ್ನು ಬಿಡಲಾಗುತ್ತಿದೆ. ನಗರದಲ್ಲಿರುವ ಬೆಳ್ಳಂದೂರು, ವರ್ತೂರು ಕೆರೆಗಳಲ್ಲಿ ನೊರೆ, ಬೆಂಕಿ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಇದರ ಬಗ್ಗೆ ಗಮನ ಹರಿಸುವುದನ್ನು ಬಿಟ್ಟು ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ನಿಯಮದ ಅಧಿಸೂಚನೆ ಹೊರಡಿಸಿದೆ’ ಎಂದು ದೂರಿದರು.

ADVERTISEMENT

‘ಪ್ರಾಣಿ ಹಿಂಸೆ ತಡೆ ಕಾಯ್ದೆ (ಪಿಸಿಎ)– 1960 ಅನ್ನು 542 ಜನ ಸೇರಿ ಚರ್ಚಿಸಿ ರೂಪಿಸಲಾಗಿತ್ತು. ಹೀಗಿರುವಾಗ ಕೇಂದ್ರ ಪರಿಸರ ಸಚಿವಾಲಯದ ಪ್ರಧಾನ ಕಾರ್ಯದರ್ಶಿ ಹಾಗೂ ಸಚಿವರು ಸಹಿ ಹಾಕಿ ಪ್ರಕಟಿಸಿದ ಅಧಿಸೂಚನೆ ಕಾನೂನು ಆಗುತ್ತದೆಯೇ? ಅದಕ್ಕೆ ಕಿಮ್ಮತ್ತು ಬರುತ್ತದೆಯೇ? ಮೂಲ ಕಾಯ್ದೆಯಲ್ಲಿ ಇಲ್ಲದೇ ಇರುವ ಅಂಶಗಳನ್ನು ಈ ಅಧಿಸೂಚನೆಯಲ್ಲಿ ಸೇರಿಸಲಾಗಿದೆ. ನಿಮಗೆ ಈ ಅಧಿಕಾರ ಕೊಟ್ಟವರು ಯಾರು? ಇಂತಹ ಅಧಿಸೂಚನೆಗೆ ಮಹತ್ವ ನೀಡಬೇಕೇ’ ಎಂದು ಪ್ರಶ್ನಿಸಿದರು. ಅಧಿಸೂಚನೆ ಸಿಂಧುವೇ? ಅದಕ್ಕೆ ಮಹತ್ವ ಇದೆಯೇ’ ಎಂದು ಪ್ರಶ್ನಿಸಿದರು.

‘ಕೇಂದ್ರ ಸರ್ಕಾರವು ಯಾವುದೇ ಅಧಿಸೂಚನೆ ಹೊರಡಿಸಿದರೂ, ರಾಜ್ಯ ಸರ್ಕಾರವು ತನ್ನದೇ ಆದ ಕಾಯ್ದೆಯನ್ನು ಜಾರಿಗೊಳಿಸಬಹುದು. ಅದಕ್ಕೆ ಮಾನ್ಯತೆ ಇರುತ್ತದೆ. ಈ ಬಗ್ಗೆ ರಾಜ್ಯ ಸರ್ಕಾರವು ಯೋಚಿಸಬೇಕು’ ಎಂದು ಸಲಹೆ ನೀಡಿದರು.

ಸಾಹಿತಿ ಜಿ.ರಾಮಕೃಷ್ಣ ಮಾತನಾಡಿ, ‘ವಿಶ್ವವಿದ್ಯಾಲಯ ಅನುದಾನ ಆಯೋಗವು (ಯುಜಿಸಿ) ಎಲ್ಲ ಕುರಿಗಳನ್ನು ಕೊಂದು ಹಾಕಿ ಎಂದು ನಿಯಮ ಜಾರಿಗೊಳಿಸಿದರೆ ಹೇಗಿರುತ್ತದೆ? ಆ ರೀತಿ ಇದೆ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ನಿಯಮದ ಅಧಿಸೂಚನೆ. ಪರಿಸರ ಸಚಿವಾಲಯದ ಅಡಿ ಇದನ್ನು ಜಾರಿಗೊಳಿಸಿದ್ದಾರೆ. ಕೇಂದ್ರ ಸರ್ಕಾರದವರು ಎಷ್ಟೊಂದು ಜಾಣರಿದ್ದಾರೆ’ ಎಂದು ಮಾರ್ಮಿಕವಾಗಿ ನುಡಿದರು.

‘ಉಚ್ಚ ವರ್ಣದವರು ಸೇರಿಕೊಂಡು ಉದ್ಧಟತನ, ಅವಾಸ್ತವಿಕ ತೀರ್ಮಾನಗಳನ್ನು ದೇಶದ ಮೇಲೆ ಹೇರುತ್ತಿದ್ದಾರೆ. ನೋಟು ರದ್ದತಿ, ವಿದೇಶಿ ನೇರ ಹೂಡಿಕೆ, ಜಿಎಸ್‌ಟಿಯಂತಹ ವೈಫಲ್ಯಗಳನ್ನು ಮುಚ್ಚಿಕೊಳ್ಳಲು, ಜನರ ಗಮನವನ್ನು ಬೇರೆ ಕಡೆಗೆ ಹರಿಸುವಂತೆ ಮಾಡುವ ಉದ್ದೇಶದಿಂದ ಭಾವನಾತ್ಮಕ ವಿಷಯಗಳನ್ನು ಮುನ್ನೆಲೆಗೆ ತರಲಾಗುತ್ತಿದೆ’ ಎಂದು ದೂರಿದರು.

ಸಾಹಿತಿ ಬೊಳುವಾರು ಮಹಮ್ಮದ್ ಕುಂಞಿ ಮಾತನಾಡಿ, ‘ಕೇಂದ್ರ ಸರ್ಕಾರವು ಮೂರು ವರ್ಷಗಳ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಈ ಅಧಿಸೂಚನೆ ಹೊರಡಿಸಿದೆ. ಅಧಿಕಾರವನ್ನು ಉಳಿಸಿಕೊಳ್ಳಲು ಚಾಣಕ್ಯ ತಂತ್ರ ರೂಪಿಸಿದೆ. ರಾಮಮಂದಿರ ನಿರ್ಮಾಣ, ಏಕರೂಪ ನಾಗರಿಕ ಸಂಹಿತೆ, ಲವ್‌ ಜಿಹಾದ್‌, ತ್ರಿವಳಿ ತಲಾಖ್‌ ಹೀಗೆ– ಅನೇಕ ವಿಷಯಗಳನ್ನು ಮುಂದಿಕೊಟ್ಟುಕೊಂಡು ರಾಜಕೀಯ ಮಾಡುತ್ತಿದೆ’ ಎಂದು ದೂರಿದರು.

‘ನಾಗೇಶ ಹೆಗಡೆ ಅವರ ಲೇಖನ ಓದಿ’
‘ಪ್ರಜಾವಾಣಿ’ಯಲ್ಲಿ ಪ್ರಕಟಗೊಂಡ ನಾಗೇಶ ಹೆಗಡೆ ಅವರ ‘ಆಧುನಿಕ ಬದುಕಿನ ಪ್ರತಿಕ್ಷಣವೂ ಗೋ–ಮಯ’ ಅಂಕಣವನ್ನು ಉಲ್ಲೇಖಿಸಿದ ಗೋಪಾಲಗೌಡ ಅವರು, ಅದರಲ್ಲಿರುವ ವಿಷಯಗಳನ್ನು ಓದುವ ಮೂಲಕ ಸಭಿಕರ ಗಮನಕ್ಕೆ ತಂದರು.

‘ಈ ಲೇಖನವನ್ನು ಅರ್ಥ ಮಾಡಿಕೊಳ್ಳಲು ನಾಲ್ಕು ಬಾರಿ ಓದಿದ್ದೇನೆ. ಅನೇಕ ವಿಷಯಗಳನ್ನು ಅಚ್ಚುಕಟ್ಟಾಗಿ ಹೇಳಿದ್ದಾರೆ. ದಯಮಾಡಿ ಈ ಲೇಖನವನ್ನು ಎಲ್ಲರೂ ಓದಬೇಕು’ ಎಂದು ಮನವಿ ಮಾಡಿದರು.

*
ಈ ಅಧಿಸೂಚನೆಯು ಅಸಾಂವಿಧಾನಿಕ, ಅಸಿಂಧು ಹಾಗೂ ಅವೈಜ್ಞಾನಿಕವಾಗಿದೆ. ಇದನ್ನು ನಾನು ಒಪ್ಪುವುದಿಲ್ಲ.
-ವಿ.ಗೋಪಾಲಗೌಡ,
ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.