ADVERTISEMENT

ಪರಿಸರ ನಾಶ; ಹಸಿರು ಮಾಯ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2011, 19:25 IST
Last Updated 20 ಫೆಬ್ರುವರಿ 2011, 19:25 IST

ಬೆಂಗಳೂರು: ‘ಪರಿಸರ ನಾಶದಿಂದಾಗಿ ಮಲೆನಾಡಿನಲ್ಲಿ ಹಸಿರು ಮಾಯವಾಗುತ್ತಿದ್ದು ಜನ ಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ’ ಎಂದು ಸಂಸದ ಡಿ.ಬಿ.ಚಂದ್ರೇಗೌಡ ಆತಂಕ ವ್ಯಕ್ತಪಡಿಸಿದರು.

 ಮಲೆನಾಡು ಸ್ಪೋರ್ಟ್ಸ್ ಮತ್ತು ಕಲ್ಚರಲ್ ರಿಕ್ರಿಯೇಷನ್ ಕ್ಲಬ್ ನಗರದಲ್ಲಿ ಭಾನುವಾರ ಆಯೋಜಿಸಿದ್ದ ‘ಮಲೆನಾಡ ಸುಂದರ  ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮ’ದಲ್ಲಿ ಅವರು ಮಾತನಾಡಿದರು.

‘ಮಲೆನಾಡಿನಲ್ಲಿ ಕಾಡು ಕಡಿಮೆಯಾಗಿ ಕೈಗಾರಿಕೆಗಳು ಹೆಚ್ಚುತ್ತಿವೆ. ಮನುಷ್ಯನ ಸ್ವಾರ್ಥಕ್ಕೆ ಮಲೆನಾಡಿನ ಜೀವಸಂಕುಲ ಬಲಿಯಾಗಿದೆ. ಮಲೆನಾಡು ಹೇಗಿತ್ತು ಎಂಬುದನ್ನು ಪುಸ್ತಕಗಳಲ್ಲಿ ಓದಿ ತಿಳಿಯುವ ಸ್ಥಿತಿ ಉದ್ಭವಿಸಿದೆ’ ಎಂದು ನುಡಿದರು.

‘ಮಲೆನಾಡಿನ ಜನ ಜೀವನ ಅರಸಿ ಬೆಂಗಳೂರಿನತ್ತ ಧಾವಿಸುತ್ತಿದ್ದಾರೆ. ಕಾಲ ಕಳೆಯುವವರಿಗೆ ವಾರಾಂತ್ಯದ ತಾಣವಾಗಿ ಹಸಿರಿನ ಮಲೆನಾಡು ಬದಲಾಗಿದೆ. ಅಲ್ಲಿನ ಪರಿಸರದ ಜತೆಗೆ ಶ್ರೀಮಂತ ಸಂಸ್ಕೃತಿಯೂ ಕಾಣೆಯಾಗುತ್ತಿದೆ’ ಎಂದು ಹೇಳಿದರು.

 ‘ಮಲೆನಾಡು ಮಹಾನ್ ಸಾಹಿತಿಗಳು ಹಾಗೂ ಸಜ್ಜನ ರಾಜಕಾರಣಿಗಳನ್ನು ರಾಜ್ಯಕ್ಕೆ ಕೊಡುಗೆಯಾಗಿ ನೀಡಿದೆ.ಕುವೆಂಪು,  ಯು.ಆರ್. ಅನಂತ ಮೂರ್ತಿ, ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರಂತಹ ಶ್ರೇಷ್ಠ ಸಾಹಿತಿಗಳನ್ನೂ ಕಡಿದಾಳ್ ಮಂಜಪ್ಪ, ಶಾಂತವೇರಿ ಗೋಪಾಲಗೌಡ ಅವರಂತಹ ಧೀಮಂತ ರಾಜಕಾರಣಿಗಳು ಮಲೆನಾಡಿನವರು’ಎಂದು ಅವರು ಸ್ಮರಿಸಿದರು.

 ಉನ್ನತ ಶಿಕ್ಷಣ ಸಚಿವ ಡಾ.ವಿ.ಎಸ್.ಆಚಾರ್ಯ ಮಾತನಾಡಿ ‘ಮಲೆನಾಡಿನ ಜನ ಧರ್ಮ ಸಂಸ್ಕೃತಿಗಳಲ್ಲಿ ಅಪಾರ ನಂಬಿಕೆ ಇಟ್ಟವರಾಗಿದ್ದಾರೆ. ಧಾರ್ಮಿಕ ಕಾರ್ಯಕ್ರಮಗಳು ಎಲ್ಲೇ ನಡೆದರೂ ಅಲ್ಲಿ ಅವರ ಕೊಡುಗೆ ಅಪಾರವಾಗಿರುತ್ತದೆ’ ಎಂದರು.

 ‘ಮಕ್ಕಳು ಉತ್ಕೃಷ್ಟವಾದ ಸಾಧನೆ ಮಾಡಿದರೆ ಜೀವನದಲ್ಲಿ ಉನ್ನತಿಯನ್ನು ಗಳಿಸಬಹುದಾಗಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಚಿಂತಿಸುವ ಅಗತ್ಯವಿದೆ’ ಎಂದು ಅಭಿಪ್ರಾಯಪಟ್ಟರು.

ಶಾಸಕ ಜೀವರಾಜ್ ಮಾತನಾಡಿ ‘ರಾಜ್ಯದಲ್ಲಿ ಎಲ್ಲಾದರೂ ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಂಡರೂ ಅದರ ನೇರ ಹೊಡೆತ ಮಲೆನಾಡಿನ ಮೇಲೆ ಉಂಟಾಗುತ್ತಿದೆ. ಇದನ್ನು ತಪ್ಪಿಸಲು ಸಂಘಟಿತವಾದ ಹೋರಾಟ ಅಗತ್ಯವಿದೆ’ ಎಂದರು.ಶಾಸಕ ಸಿ.ಟಿ.ರವಿ ಮಾತನಾಡಿ, ‘ಹಣದ ಆಸೆಯಿಂದ ಮಲೆನಾಡಿನಲ್ಲಿ ಪರಿಸರ ನಾಶವಾಗುತ್ತಿದೆ. ನಕ್ಸಲರು ಹಾಗೂ ಪೊಲೀಸರ ಉಪಟಳ ಹೆಚ್ಚಾಗಿದೆ. ಪರಿಸರ ರಕ್ಷಣೆಗೆ ಮುಂದಾಗುವಂತೆ ಮಕ್ಕಳನ್ನು ರೂಪಿಸಬೇಕಿದೆ’ ಎಂದು ಹೇಳಿದರು.

ಶಾಸಕ ಎಂ.ಪಿ. ಕುಮಾರಸ್ವಾಮಿ, ಕ್ಲಬ್‌ನ ಅಧ್ಯಕ್ಷ ಕೆ.ಟಿ. ವೀರೇಶ್, ಗೌರವಾಧ್ಯಕ್ಷ ಜೆ.ಪಿ. ವೀರೇಶ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.