ADVERTISEMENT

ಪಾದಚಾರಿ ಮಾರ್ಗದಲ್ಲಿ ದ್ವಿಚಕ್ರ ವಾಹನಗಳ ಸಂಚಾರ ತಡೆದು ಪ್ರತಿ ದಿನ ಮಹಿಳೆಯಿಂದ ಜಾಗೃತಿ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2018, 4:10 IST
Last Updated 16 ಮಾರ್ಚ್ 2018, 4:10 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಪಾದಚಾರಿ ಮಾರ್ಗದಲ್ಲಿ ದ್ವಿಚಕ್ರ ವಾಹನಗಳಲ್ಲಿ ತೆರಳುವವರನ್ನು ಮಹಿಳೆಯೊಬ್ಬರು ನಿಲ್ಲಿಸಿ ಜಾಗೃತಿ ಮೂಡಿಸಿದ ಅಪರೂಪದ ದೃಶ್ಯ ಇದೀಗ ಫೇಸ್‌ಬುಕ್‌ನಲ್ಲಿ ವೈರಲ್ ಆಗುತ್ತಿದೆ.

ಬೆಂಗಳೂರಿನಲ್ಲಿ ನಡೆದಿರುವ ಘಟನೆಯ ವಿಡಿಯೊವನ್ನು ಪವನ್‌ಕುಮಾರ್‌ ಎಂಬ ವ್ಯಕ್ತಿ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ ನಡೆದಿದ್ದೇನು ಎಂಬುದನ್ನು ವಿವರಿಸಿದ್ದಾರೆ.

ಪವನ್‌ಕುಮಾರ್ ಅವರು ವಿವರಿಸಿರುವ ಪ್ರಕಾರ, ಪ್ರತಿ ದಿನ ಕೆಲಸ ಮುಗಿದ ಬಳಿಕ ಆ ಮಹಿಳೆ ಒಂದು ಗಂಟೆ ಕಾಲ ಪಾದಚಾರಿ ಮಾರ್ಗದಲ್ಲಿ ನಿಂತು, ಅಲ್ಲಿ ಸಂಚರಿಸುವ ದ್ವಿಚಕ್ರ ವಾಹನಗಳನ್ನು ತಡೆದು ಜಾಗೃತಿ ಮೂಡಿಸುತ್ತಾರಂತೆ!

ADVERTISEMENT

ನಡೆದಿದ್ದೇನು?: ಮಾರ್ಚ್‌ 13ರಂದು (ಮಂಗಳವಾರ) ಕಾರ್ಪೊರೇಷನ್‌ ಬಸ್‌ ನಿಲ್ದಾಣದ ಬಳಿ (ಲಾಲ್‌ಬಾಗ್‌ಗೆ ಬಸ್‌ಗಳು ತೆರಳುವ ಮಾರ್ಗ) ರಾತ್ರಿ 7.30ರ ಸುಮಾರಿಗೆ ಪಾದಚಾರಿ ಮಾರ್ಗದಲ್ಲಿ ದ್ವಿಚಕ್ರ ವಾಹನ ಚಲಾಯಿಸುವವರನ್ನು ಮಂಜು ಥಾಮಸ್ ಎಂಬ ಮಹಿಳೆಯೊಬ್ಬರು ತಡೆದಿದ್ದಾರೆ. ಹೀಗೆ ಕೆಲವು ಮಂದಿಯನ್ನು ತಡೆದು ಪಾದಚಾರಿ ಮಾರ್ಗದಲ್ಲಿ ಸಂಚರಿಸದಂತೆ ಮಾಡುವಲ್ಲಿ ಅವರು ಯಶಸ್ವಿಯಾಗಿದ್ದಾರೆ.

ಆದರೆ, ಕೆಎ 51 ಇಎಫ್‌ 7695 ನೋಂದಣಿ ಸಂಖ್ಯೆಯ ಬಿಳಿ ಹೋಂಡಾ ಆ್ಯಕ್ಟಿವಾದಲ್ಲಿ ಬಂದ ಸವಾರರು ಮಹಿಳೆಯ ಜತೆ ವಾಗ್ವಾದಕ್ಕಿಳಿದಿದ್ದಾರೆ. ಜತೆಗೆ, ಕನ್ನಡ ಬಾರದ ಆ ಮಹಿಳೆಯನ್ನು ಕನ್ನಡದಲ್ಲಿ ನಿಂದಿಸತೊಡಗಿದ್ದಾರೆ. ಈ ಸಂದರ್ಭ ಸ್ಥಳೀಯರೂ ಮಹಿಳೆಗೆ ಬೆಂಬಲ ಸೂಚಿಸಿದ್ದಾರೆ. ನಂತರ ಸವಾರರು ಹೋಂಡಾವನ್ನು ರಸ್ತೆಗಿಳಿಸಿ ತೆರಳಿದ್ದಾರೆ.

ಪ್ರತಿ ದಿನ ಸಂಜೆ ಒಂದು ಗಂಟೆ ಕಾಲ ಪಾದಚಾರಿ ಮಾರ್ಗದಲ್ಲಿ ನಿಂತು ಜಾಗೃತಿ ಮೂಡಿಸುವ ಮಹಿಳೆ ಬಗ್ಗೆ ನೂರಾರು ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

</p></p>

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.