ADVERTISEMENT

ಪಾದಚಾರಿ ಮೇಲ್ಸೇತುವೆ ಕಾಮಗಾರಿ ಚುರುಕು

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2018, 20:10 IST
Last Updated 30 ಮಾರ್ಚ್ 2018, 20:10 IST
ಪಾದಚಾರಿ ಮೇಲ್ಸೇತುವೆ ಕಾಮಗಾರಿ ಚುರುಕು
ಪಾದಚಾರಿ ಮೇಲ್ಸೇತುವೆ ಕಾಮಗಾರಿ ಚುರುಕು   

ಬೆಂಗಳೂರು: ಎರಡು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಗರ ರೈಲು ನಿಲ್ದಾಣದ 10ನೇ ಪ್ಲ್ಯಾಟ್‌ಫಾರಂ ಹಾಗೂ ನಗರ ರೈಲು ಮೆಟ್ರೊ ನಿಲ್ದಾಣವನ್ನು ಸಂಪರ್ಕಿಸುವ ಪಾದಚಾರಿ ಮೇಲ್ಸೇತುವೆ ಕಾಮಗಾರಿ ಮತ್ತೆ ಆರಂಭವಾಗಿದೆ.

ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಆರ್‌.ಎಸ್‌.ಸಕ್ಸೇನಾ, ‘ಬೆಂಗಳೂರು ಮೆಟ್ರೊ ರೈಲು ನಿಗಮವು (ಬಿಎಂಆರ್‌ಸಿಎಲ್‌) ಬಾಕಿ ಅನುದಾನ ಬಿಡುಗಡೆ ಮಾಡಿದೆ. ಹಾಗಾಗಿ ಪಾದಚಾರಿ ಮೇಲ್ಸೇತುವೆ ನಿರ್ಮಾಣ ಕಾರ್ಯ ಮತ್ತೆ ಆರಂಭವಾಗಿದೆ. ಇದು ಜೂನ್‌ ತಿಂಗಳಲ್ಲಿ ಜನರ ಬಳಕೆಗೆ ಲಭ್ಯವಾಗಲಿದೆ’ ಎಂದು ತಿಳಿಸಿದರು.

ಮೆಟ್ರೊನಿಲ್ದಾಣ (ನಗರ ರೈಲು ನಿಲ್ದಾಣ) ಹಾಗೂ 10ನೇ ಪ್ಲ್ಯಾಟ್‌ಫಾರಂ ನಡುವೆ ಸುಮಾರು 250 ಮೀ ಅಂತರವಿದೆ. ಈ ಯೋಜನೆಗೆ ಬಿಎಂಆರ್‌ಸಿಎಲ್‌ ₹ 2 ಕೋಟಿ ಅನುದಾನ ಒದಗಿಸಿದೆ. ರೈಲ್ವೆ ಇಲಾಖೆಯು ಕಾಮಗಾರಿಯನ್ನು ಅನುಷ್ಠಾನಗೊಳಿಸುತ್ತಿದೆ. ಇದರ ಕಾಮಗಾರಿ ವರ್ಷಗಳ ಹಿಂದೆಯೇ ಆರಂಭವಾಗಿತ್ತು. ಆದರೆ, ರೈಲ್ವೆ ಇಲಾಖೆ ಹಾಗೂ ಮೆಟ್ರೊ ನಿಗಮದ ನಡುವಿನ ಸಮನ್ವಯ ಕೊರತೆಯಿಂದಾಗಿ ಅರ್ಧದಲ್ಲೇ ಸ್ಥಗಿತಗೊಂಡಿತ್ತು.

ADVERTISEMENT

ಇಲ್ಲಿ ಎಸ್ಕಲೇಟರ್‌ ಹಾಗೂ ಲಿಫ್ಟ್‌ ಸೌಲಭ್ಯವನ್ನೂ ಒದಗಿಸುವ ಚಿಂತನೆಯನ್ನು ಬಿಎಂಆರ್‌ಸಿಎಲ್‌ ಹೊಂದಿದೆ.

ಮೆಟ್ರೊ ನಿಲ್ದಾಣದಿಂದ ರೈಲು ನಿಲ್ದಾಣಕ್ಕೆ ನೇರ ಸಂಪರ್ಕ ಕಲ್ಪಿಸುವ ಈ ಪಾದಚಾರಿ ಮಾರ್ಗದ ಮೂಲಕ ಬರುವ ಪ್ರಯಾಣಿಕರು ರೈಲು ನಿಲ್ದಾಣವನ್ನು ಪ್ರವೇಶಿಸುವ ಮುನ್ನವೇ ಟಿಕೆಟ್‌ ಖರೀದಿಸಲು ಅನುವು ಮಾಡಿಕೊಡುವ ಸಲುವಾಗಿ ಹೊಸ ಕೌಂಟರ್‌ಗಳನ್ನು ತೆರೆಯಲಾಗುವುದು ಎಂದು ಸಕ್ಸೇನಾ ತಿಳಿಸಿದರು.

‘ಪ್ರಯಾಣಿಕರು ಕೌಂಟರ್‌ ಎದುರು ಸಾಲುಗಟ್ಟಿ ನಿಂತು ಟಿಕೆಟ್‌ ಖರೀದಿಸುವ ಬದಲು ಯುಟಿಎಸ್‌ ಆ್ಯಪ್‌ ಮೂಲಕವೇ ಟಿಕೆಟ್‌ ಬುಕ್‌ ಮಾಡಬೇಕು ಎಂದು ನಾವು ಬಯಸುತ್ತೇವೆ’ ಎಂದರು.

ಕೆಂಪೇಗೌಡ ಮೆಟ್ರೊ ನಿಲ್ದಾಣ ಮತ್ತು ನಗರ ರೈಲು ನಿಲ್ದಾಣದ ಮುಖ್ಯ ಪ್ರವೇಶದ ನಡುವೆ 450 ಮೀ ಅಂತರವಿದೆ. ಇಲ್ಲಿ ಪಾದಚಾರಿ ಸುರಂಗ ಮಾರ್ಗವೂ ಇದೆ. ಆದರೆ, ಸರಿಯಾದ ನಿರ್ವಹಣೆ ಇಲ್ಲದ ಕಾರಣ ಪ್ರಯಾಣಿಕರು ಕೊಳಚೆ ನಡುವೆ ಹೆಜ್ಜೆ ಹಾಕಬೇಕಾದ ಪರಿಸ್ಥಿತಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.