ADVERTISEMENT

ಪಾನಮತ್ತ ಯುವತಿ ಕಟ್ಟಡದಿಂದ ಬಿದ್ದು ಸಾವು

​ಪ್ರಜಾವಾಣಿ ವಾರ್ತೆ
Published 1 ಜುಲೈ 2012, 19:30 IST
Last Updated 1 ಜುಲೈ 2012, 19:30 IST

ಬೆಂಗಳೂರು: ಪಾನಮತ್ತಳಾಗಿದ್ದ ಯುವತಿ ಕಟ್ಟಡದಿಂದ ಕೆಳಗಿಳಿಯುವ ವೇಳೆ ನಿಯಂತ್ರಣ ತಪ್ಪಿ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಬಿಟಿಎಂ ಲೇಔಟ್‌ನ ಕೇಂದ್ರ ಲೋಕೋಪಯೋಗಿ ಇಲಾಖೆ (ಸಿಪಿಡಬ್ಲ್ಯೂಡಿ) ವಸತಿ ಸಮುಚ್ಚಯದಲ್ಲಿ ಶನಿವಾರ ರಾತ್ರಿ ನಡೆದಿದೆ.

ಮೂಲತಃ ಕೊಡಗು ಜಿಲ್ಲೆಯ ಕುಟ್ಟಂದಿ ಗ್ರಾಮದ ನಿವಾಸಿ ನಾಣಯ್ಯ ಎಂಬುವರ ಪುತ್ರಿ ಮೋಕ್ಷಾ ನಾಣಯ್ಯ (24) ಮೃತಪಟ್ಟವರು. ಅವರು ನಗರದ ಅರಕೆರೆ ಲೇಔಟ್‌ನ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದರು. ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ ಬಿ.ಕಾಂ ಓದಿದ್ದ ಅವರು, ಸರ್ಜಾಪುರ ವರ್ತುಲ ರಸ್ತೆ ಯಲ್ಲಿನ ಖಾಸಗಿ ಬ್ಯಾಂಕ್ ಒಂದರಲ್ಲಿ ಉದ್ಯೋಗಿಯಾಗಿದ್ದರು.

ಅವರ ಸ್ನೇಹಿತ ಕಾಳಪ್ಪ ಎಂಬುವರು, ನಿತಿನ್ ಎಂಬುವರ ಜತೆ ಸಿಪಿಡಬ್ಲ್ಯೂಡಿ ವಸತಿ ಸಮುಚ್ಚಯದಲ್ಲಿ ವಾಸವಾಗಿದ್ದಾರೆ. ಕೊಡಗು ಜಿಲ್ಲೆಯ ಕಾಳಪ್ಪ ಸಾಫ್ಟ್‌ವೇರ್ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದಾರೆ. ಮೋಕ್ಷಾ ಅವರು ಆಗಾಗ್ಗೆ ಕಾಳಪ್ಪನ ಮನೆಗೆ ಬಂದು ಹೋಗುತ್ತಿದ್ದರು. ಅಂತೆಯೇ ಅವರು ಶನಿವಾರ ರಾತ್ರಿ ಆತನ ಮನೆಗೆ ಬಂದಿದ್ದರು. ಈ ವೇಳೆ ನಿತಿನ್ ಊರಿಗೆ ಹೋಗಿದ್ದರು.
 
ಮನೆಯಲ್ಲಿದ್ದ ಕಾಳಪ್ಪ ಜತೆ ಮೋಕ್ಷಾ, ಅದೇ ಕಟ್ಟಡದ ಮೂರನೇ ಮಹಡಿಗೆ ಹೋಗಿ ಮದ್ಯ ಕುಡಿದಿದ್ದಾರೆ. ನಂತರ ಅವರು ಕಬ್ಬಿಣದ ಏಣಿ ಮೂಲಕ ಕೆಳಗಿಳಿಯುವ ವೇಳೆ ಮೋಕ್ಷಾ ನಿಯಂತ್ರಣ ತಪ್ಪಿ ಕಟ್ಟಡದಿಂದ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಭಾನುವಾರ ಬೆಳಿಗ್ಗೆ ಅವರ ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ಕುಟುಂಬ ಸದಸ್ಯರಿಗೆ ಒಪ್ಪಿಸಲಾಯಿತು. ಮೋಕ್ಷಾ ಅವರು ಮದ್ಯ ಕುಡಿದಿರುವುದು ವೈದ್ಯಕೀಯ ಪರೀಕ್ಷೆಯಿಂದ ದೃಢಪಟ್ಟಿದೆ. ಅವರ ಅಂಗಾಂಗಗಳನ್ನು ಹೆಚ್ಚಿನ ಪರೀಕ್ಷೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್) ಕಳುಹಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಘಟನೆ ಸಂಬಂಧ ಮೃತರ ತಮ್ಮ ಅಯ್ಯಪ್ಪ ಅವರು ದೂರು ಕೊಟ್ಟಿದ್ದಾರೆ. `ಅಕ್ಕ ಮಹಡಿಯಿಂದ ಕೆಳಗಿಳಿಯುವ ವೇಳೆ ಆಯತಪ್ಪಿ ಬಿದ್ದು ಸಾವನ್ನಪ್ಪಿದ್ದಾಳೆ. ಅಕ್ಕನ ಸ್ನೇಹಿತ ಕಾಳಪ್ಪ ಅವರ ಮೇಲೆ ಯಾವುದೇ ಅನುಮಾನವಿಲ್ಲ~ ಎಂದು ಅಯ್ಯಪ್ಪ ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮಡಿವಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

`ಮಗಳನ್ನು ಬಿಟ್ಟು ಬದುಕುವ ಶಕ್ತಿ ನಮಗಿಲ್ಲ. ಆದರೆ, ಅನಿವಾರ್ಯವಾಗಿ ಆಕೆಯನ್ನು ಬೆಂಗಳೂರಿಗೆ ಕಳುಹಿಸಬೇಕಾಯಿತು. ಮಗಳು ಮತ್ತೆಂದು ಬಾರದ ಲೋಕವನ್ನು ಸೇರಿದ್ದಾಳೆ. ನಮ್ಮ ಎಸ್ಟೇಟ್‌ನಲ್ಲೇ ಅಂತ್ಯಕ್ರಿಯೆ ನಡೆಸಿ, ಸೂತಕದ ಮನೆಗೆ ಹಿಂದಿರುಗಿದ್ದೇವೆ~ ಎಂದು ಮೋಕ್ಷಾ ತಾಯಿ `ಪ್ರಜಾವಾಣಿ~ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.