ADVERTISEMENT

ಪಾಲಿಕೆ, ಬಿಡಿಎ ಅಧಿಕಾರಿಗಳ ವಿರುದ್ಧ ತನಿಖೆ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2012, 19:30 IST
Last Updated 10 ಫೆಬ್ರುವರಿ 2012, 19:30 IST

ಬೆಂಗಳೂರು:  ನಗರದ ಬಿಟಿಎಂ ಲೇಔಟ್ ಬಳಿ ಉದ್ಯಾನಕ್ಕೆ ಮೀಸಲು ಇರಿಸಲಾದ ಜಮೀನಿನಲ್ಲಿ ಕಟ್ಟಡ ನಿರ್ಮಾಣಕ್ಕೆ ಖಾಸಗಿಯವರಿಗೆ ಅನುಮತಿ ನೀಡಿರುವ ಬಿಡಿಎ ಹಾಗೂ ಬಿಬಿಎಂಪಿ ಅಧಿಕಾರಿಗಳು ಈಗ ಪೇಚಿಗೆ ಸಿಲುಕಿದ್ದಾರೆ!

ಈ ಕಾನೂನು ಬಾಹಿರ ಕೃತ್ಯವನ್ನು ಯಾರು ಎಸಗಿದ್ದಾರೆ ಎಂಬ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ನ್ಯಾಯಮೂರ್ತಿ ಡಿ.ವಿ.ಶೈಲೇಂದ್ರಕುಮಾರ್ ಆದೇಶಿಸಿದ್ದಾರೆ.

ವರದಿಯನ್ನು ಮಾರ್ಚ್ 30ರ ಒಳಗೆ ನೀಡುವಂತೆ ನ್ಯಾಯಮೂರ್ತಿಗಳು ನಿರ್ದೇಶಿಸಿದ್ದಾರೆ.
ತಾವರೆಕೆರೆ ಬಳಿಯ 2.31 ಎಕರೆ ಜಮೀನಿಗೆ ಸಂಬಂಧಿಸಿದ ವಿವಾದ ಇದು.  ಇಲ್ಲಿದ್ದ ಸುಮಾರು 30 ಎಕರೆ ಜಮೀನನ್ನು ಲೇಔಟ್ ನಿರ್ಮಾಣಕ್ಕೆ 1978ರಲ್ಲಿ ಬ್ಯಾಂಕ್ ನೌಕರರ ಕ್ಷೇಮಾಭಿವೃದ್ಧಿ ಸಂಘಕ್ಕೆ ಬಿಡಿಎ ಮಂಜೂರು ಮಾಡಿತ್ತು. ಈ ಪೈಕಿ 2.31 ಎಕರೆ ಜಾಗವನ್ನು ಬಿಡಿಎಗೆ ಹಿಂದಿರುಗಿಸಿದ ಸಂಘವು ಅದನ್ನು ಉದ್ಯಾನಕ್ಕೆ ಮೀಸಲು ಇರಿಸುವಂತೆ ಸೂಚಿಸಿತ್ತು. ಆದರೆ ಈ ಜಾಗದಲ್ಲಿ ಈಗ ಕಟ್ಟಡ ನಿರ್ಮಾಣ ಆಗುತ್ತಿರುವುದಾಗಿ ದೂರಿ ಸಂಘವು ಹೈಕೋರ್ಟ್ ಮೊರೆ ಹೋಗಿತ್ತು.ಇದನ್ನು ನ್ಯಾಯಮೂರ್ತಿಗಳು ಗಂಭೀರವಾಗಿ ಪರಿಗಣಿಸಿದರು.

`ಬಿಡಿಎ ಹಾಗೂ ಪಾಲಿಕೆಗಳ ಇಂತಹ ಕ್ರಮ ನಮಗೆ ತೀವ್ರ ಅಚ್ಚರಿ ಉಂಟು ಮಾಡುತ್ತಿದೆ. ಒಬ್ಬರ ಮೇರೆ ಒಬ್ಬರು ಆರೋಪ ಹೊರಿಸುವುದು ಬಿಟ್ಟರೆ ಏನೂ ಆಗುತ್ತಿಲ್ಲ. ಇದನ್ನೆಲ್ಲ ಗಮನಿಸಿದರೆ ಏನೋ ನಡೆಯುತ್ತಿದೆ ಎಂದು ಅನುಮಾನ ಹುಟ್ಟುತ್ತಿದೆ~ ಎಂದು ತೀರ್ಪಿನಲ್ಲಿ ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಕಟ್ಟಡ ನಿರ್ಮಾಣಕ್ಕೆ  ಖಾಸಗಿ ವ್ಯಕ್ತಿಗಳಿಗೆ ನಿರಾಕ್ಷೇಪಣಾ ಪತ್ರ ನೀಡಿದವರು ಯಾರು ಎಂಬ ಬಗ್ಗೆ ತನಿಖೆ ನಡೆಸುವಂತೆ ಬಿಡಿಎ ಆಯುಕ್ತರಿಗೆ ಹಾಗೂ ನಿವೇಶನದಾರರಿಗೆ ಖಾತಾ ಬದಲಾವಣೆ ಮಾಡಲು ನೆರವಾದವರು ಯಾರು ಎಂಬ ಬಗ್ಗೆ ತನಿಖೆ ನಡೆಸುವಂತೆ ಪಾಲಿಕೆ ಆಯುಕ್ತರಿಗೆ ನ್ಯಾಯಮೂರ್ತಿಗಳು ನಿರ್ದೇಶಿಸಿದ್ದಾರೆ.

ಆಕ್ಷೇಪಣೆ ಸಲ್ಲಿಕೆಗೆ ಆದೇಶ: ನಗರದ ಎಚ್‌ಎಸ್‌ಆರ್ ಲೇಔಟ್‌ನಲ್ಲಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡಿರುವುದಾಗಿ ದೂರಿ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ  ಆಕ್ಷೇಪಣಾ ಹೇಳಿಕೆ ಸಲ್ಲಿಸುವಂತೆ ಗೌಡರು ಹಾಗೂ ಇತರ ಪ್ರತಿವಾದಿಗಳಿಗೆ ಹೈಕೋರ್ಟ್ ಶುಕ್ರವಾರ ಆದೇಶಿಸಿದೆ.

ಪತ್ರಕರ್ತೆ ಕೆ.ಜಿ.ನಾಗಲಕ್ಷ್ಮಿ ಬಾಯಿ ಸಲ್ಲಿಸಿರುವ ಅರ್ಜಿ ಇದಾಗಿದೆ. ಮುಖ್ಯಮಂತ್ರಿಗಳ ವಿವೇಚನಾ ಕೋಟಾದಡಿ ಸದಾನಂದ ಗೌಡರು 50/80 ಅಡಿ ನಿವೇಶನ ಪಡೆದುಕೊಂಡಿದ್ದಾರೆ. ಇಲ್ಲಿ ನಿಯಮ ಉಲ್ಲಂಘಿಸಿ 5ನೇ ಮಹಡಿ ನಿರ್ಮಾಣ ಮಾಡಿದ್ದಾರೆ ಎನ್ನುವುದು ಅವರ ವಾದ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.