ADVERTISEMENT

ಪಿಂಚಣಿ ನೀಡಲು ಆಗ್ರಹ: ಕೃಷಿ ಕಾರ್ಮಿಕರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2012, 19:30 IST
Last Updated 19 ಮಾರ್ಚ್ 2012, 19:30 IST

ಬೆಂಗಳೂರು: ರೈತರು ಹಾಗೂ ಕೃಷಿ ಕಾರ್ಮಿಕರಿಗೆ ಪಿಂಚಣಿ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಖಿಲ ಭಾರತ ಕಿಸಾನ್ ಸಭಾ ಸದಸ್ಯರು (ಎಐಕೆಎಸ್) ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ನಗರ ರೈಲು ನಿಲ್ದಾಣದಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ರ‌್ಯಾಲಿ ನಡೆಸಿದ ಪ್ರತಿಭಟನಾಕಾರರು, `ರೈತರು, ಕೃಷಿ ಕಾರ್ಮಿಕರು ಮತ್ತು ಗ್ರಾಮೀಣ ಭಾಗದ ಮಹಿಳೆಯರ ಆರ್ಥಿಕ ಸ್ಥಿತಿ ಸುಧಾರಣೆಗೆ ಸರ್ಕಾರ ಕ್ರಮ ಕೈಗೊಳ್ಳಬೇಕು~ ಎಂದು ಒತ್ತಾಯಿಸಿದರು.

`ವಿದ್ಯುತ್, ರಸಗೊಬ್ಬರ ಮತ್ತಿತರ ಸಮಸ್ಯೆಗಳಿಂದ ರೈತರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಈ ನಡುವೆ ಅನಾವೃಷ್ಟಿಯಿಂದ ರಾಜ್ಯದ 123 ತಾಲ್ಲೂಕುಗಳಲ್ಲಿ ಕೃಷಿ ಚಟುವಟಿಕೆಗಳಿಗೆ ಹಿನ್ನಡೆಯಾಗಿದೆ.

ಇದರಿಂದ ರೈತರು ಮತ್ತು ಕೃಷಿ ಕಾರ್ಮಿಕರು ಕೆಲಸ ಹುಡುಕಿಕೊಂಡು ನಗರಗಳಿಗೆ ಗುಳೆ ಹೋಗುವ ಪರಿಸ್ಥಿತಿ ಎದುರಾಗಿದೆ. ರೈತರು ಇಷ್ಟೆಲ್ಲ ತೊಂದರೆ ಅನುಭವಿಸುತ್ತಿದ್ದರೂ ಸರ್ಕಾರ ಸಮಸ್ಯೆ ಪರಿಹಾರಕ್ಕೆ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ~ ಎಂದು ಎಐಕೆಎಸ್ ರಾಜ್ಯ ಘಟಕದ ಅಧ್ಯಕ್ಷ ಎಂ.ಸಿ.ವೆಂಕಟರಾಮು ದೂರಿದರು.

ರೈತರು ಮತ್ತು ಕೃಷಿ ಕಾರ್ಮಿಕರಿಗೆ ಮಾಸಿಕ ಎರಡು ಸಾವಿರ ರೂಪಾಯಿ ಪಿಂಚಣಿ ನೀಡಬೇಕು. ಸ್ತ್ರೀಶಕ್ತಿ ಹಾಗೂ ಮಹಿಳಾ ಸ್ವಹಾಯ ಸಂಘಗಳಿಗೆ 10 ಲಕ್ಷ ರೂಪಾಯಿ ಬಡ್ಡಿರಹಿತ ಸಾಲ ನೀಡಬೇಕು. ಬರಪೀಡಿತ ತಾಲ್ಲೂಕುಗಳಲ್ಲಿ ಕೂಡಲೇ ಪರಿಹಾರ ಕಾರ್ಯ ಕೈಗೆತ್ತಿಕೊಳ್ಳಬೇಕು. ಗ್ರಾಮೀಣ ಭಾಗದಲ್ಲಿನ ಕುಡಿಯುವ ನೀರು ಸಮಸ್ಯೆ ಪರಿಹರಿಸಬೇಕು.

ಪಡಿತರ ವ್ಯವಸ್ಥೆಯನ್ನು ಬಲಪಡಿಸಬೇಕು. ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಎಐಕೆಎಸ್ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಎಂ.ಗೋಪಾಲ್, ರಾಜ್ಯ ಕೃಷಿ ಕಾರ್ಮಿಕರ ಸಂಘ, ರಾಜ್ಯ ಸ್ತ್ರೀಶಕ್ತಿ ಮತ್ತು ಮಹಿಳಾ ಸ್ವಸಹಾಯ ಸಂಘಗಳ ಒಕ್ಕೂಟದ ಸದಸ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.