ADVERTISEMENT

ಪೀಣ್ಯ ಕೈಗಾರಿಕೆಗಳ ಮೇಲೆ ದಾಳಿ: 27 ಬಾಲಕಾರ್ಮಿಕರ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2013, 20:03 IST
Last Updated 23 ಫೆಬ್ರುವರಿ 2013, 20:03 IST

ಬೆಂಗಳೂರು: ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿನ ಐದು ಕಾರ್ಖಾನೆಗಳ ಮೇಲೆ ಶನಿವಾರ ದಾಳಿ ನಡೆಸಿದ ಬೆಂಗಳೂರು ನಗರ ಜಿಲ್ಲಾಧಿಕಾರಿ ಡಾ.ಜಿ.ಸಿ.ಪ್ರಕಾಶ್ ನೇತೃತ್ವದ ತಂಡ ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿದ್ದ 27 ಬಾಲಕರನ್ನು ರಕ್ಷಣೆ ಮಾಡಿದೆ.

`ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿರುವ ಚಾರು ಅಗರಬತ್ತಿ, ಗಜಾನನ ಕೈಗಾರಿಕೆ, ಟಿ-ಲೈಟ್, ಡಿ.ಕಾರ್ ಗ್ಯಾರೇಜ್ ಹಾಗೂ ಶಕ್ತಿ ರಬ್ಬರ್ ಕಾರ್ಖಾನೆ ಮೇಲೆ ದಾಳಿ ನಡೆಸಲಾಯಿತು. ಈ ವೇಳೆ ಕೆಲಸ ಮಾಡುತ್ತಿದ್ದ ಬಾಲಕರನ್ನು ರಕ್ಷಣೆ ಮಾಡಲಾಗಿದೆ. ಬಾಲಕರು ಜಾರ್ಖಂಡ್, ನೇಪಾಳ, ಬಿಹಾರ, ಒಡಿಶಾ ಹಾಗೂ ಕರ್ನಾಟಕ ರಾಜ್ಯದವರು ಎಂದು ಬಚ್ಪನ್ ಬಚಾವೋ ಆಂದೋಲನದ ಕಾರ್ಯಕರ್ತರು ತಿಳಿಸಿದರು.

ಜಿಲ್ಲಾಧಿಕಾರಿ ಪ್ರಕಾಶ್ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಶನಿವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಕಾರ್ಖಾನೆಗಳ ಮೇಲೆ ದಾಳಿ ನಡೆಸಿತು. ಕಾರ್ಖಾನೆ ಮತ್ತು ಬಾಯ್ಲರ್, ಕೈಗಾರಿಕಾ ಸುರಕ್ಷತಾ ಸಂಸ್ಥೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ದಾಳಿಯಲ್ಲಿ ಪಾಲ್ಗೊಂಡಿದ್ದರು.

`ರಕ್ಷಿಸಿರುವ ಮಕ್ಕಳಲ್ಲಿ 14 ವರ್ಷದೊಳಗಿನ ನಾಲ್ವರು ಬಾಲಕರಿದ್ದಾರೆ. ಕಾರ್ಖಾನೆಗಳ ಮಾಲೀಕರು ಪೋಷಕರಿಗೆ ಹಣದ ಆಮಿಷ ತೋರಿಸಿ ಬಾಲಕರನ್ನು ಕೆಲಸಕ್ಕೆ ಸೇರಿಸಿಕೊಂಡಿದ್ದಾರೆ' ಎಂದು ಬಚ್ಪನ್ ಬಚಾವೋ ಆಂದೋಲನದ ಕಾರ್ಯಕರ್ತರು ಹೇಳಿದರು.

`ಮಕ್ಕಳನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ. ಮಕ್ಕಳ ಪೋಷಕರನ್ನು ಸಂಪರ್ಕಿಸಕಲು ಪ್ರಯತ್ನಿಸುತ್ತಿದ್ದೇವೆ. ಪೋಷಕರು ಸಿಗುವವರೆಗೂ ಮಕ್ಕಳನ್ನು ರಾಷ್ಟ್ರೀಯ ಅಥವಾ ರಾಜ್ಯ ಬಾಲ ಕಾರ್ಮಿಕರ ಪುನರ್ವಸತಿ ಶಾಲೆಗಳಿಗೆ ದಾಖಲಿಸಲಾಗುವುದು. ಕಾರ್ಖಾನೆಗಳ ಮಾಲೀಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ' ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.