ಬೆಂಗಳೂರು: ಸದಾ ಗಿಜಿಗಿಡುವ ಗಾಂಧಿ ಬಜಾರಿನ ಅಂಕಿತ ಪುಸ್ತಕ ಮಳಿಗೆಯಲ್ಲಿ ಯುವ ಜನರ ನೆಚ್ಚಿನ ಸಾಹಿತಿ ಜಯಂತ ಕಾಯ್ಕಿಣಿ ಅವರು ಭಾನುವಾರ ತಮ್ಮ ಪುಸ್ತಕಗಳೊಂದಿಗೆ ಇತರ ಲೇಖಕರ ಪುಸ್ತಕಗಳನ್ನು ಮಾರಾಟ ಮಾಡಿದರು!
ಅಂಕಿತ ಪುಸ್ತಕ ಮಳಿಗೆಯು ಹಮ್ಮಿಕೊಂಡಿದ್ದ `ಜಯಂತ ಕಾಯ್ಕಿಣಿಯೊಂದಿಗೆ ಒಂದು ಭಾನುವಾರ~ ಕಾರ್ಯಕ್ರಮದಲ್ಲಿ ಪುಸ್ತಕ ಮಾರಾಟದೊಂದಿಗೆ ಅನೌಪಚಾರಿಕ ಸಂವಾದ ನಡೆಸಿದರು.
ಕಾಯ್ಕಿಣಿ ಅವರನ್ನು ನೋಡಿ ಮಾತನಾಡುವ ಸಲುವಾಗಿ ನಗರದ ವಿವಿಧ ಭಾಗಗಳಿಂದ ಸಾಹಿತ್ಯಾಸಕ್ತರು ಆಗಮಿಸಿದ್ದರು. ಅವರನ್ನೆಲ್ಲ ತುಂಬು ಪ್ರೀತಿಯಿಂದ ಮಾತನಾಡಿಸುತ್ತಲೇ ಯಾವ ಪುಸ್ತಕ ಕೊಳ್ಳುವಿರಿ? ಎಂಬ ಪ್ರಶ್ನೆಯನ್ನು ಮುಂದಿಟ್ಟರು.
ಗೃಹಿಣಿಯರು, ವಿದ್ಯಾರ್ಥಿಗಳೂ, ಹಿರಿಯ ನಾಗರಿಕರು ಸೇರಿದಂತೆ ವಿವಿಧ ವಲಯದ ಓದುಗರು ನೆಚ್ಚಿನ ಲೇಖಕನೊಂದಿಗೆ ಮಾತನಾಡುತ್ತಲೇ ಪುಸ್ತಕ ಕೊಂಡರು. ಈವರೆಗೆ ಓದಿದ ಕಾಯ್ಕಿಣಿ ಅವರ ಕಥೆ, ಕವನ ಮತ್ತು ನಾಟಕಗಳಲ್ಲಿ ಪ್ರಸ್ತಾಪಗೊಂಡಿರುವ ಹತ್ತು ಹಲವು ವಿಚಾರಗಳ ಕುರಿತು ಚರ್ಚೆ ನಡೆಸಿದರು.
ಈ ಸಂದರ್ಭದಲ್ಲಿ `ಸಾಹಿತಿಯಾಗಲು ಏನು ಮಾಡಬೇಕು? ನಿಮ್ಮಂತೆ ಚಂದವಾಗಿ ಬರೆಯಲು ಯಾವ ತಾಲೀಮು ನಡೆಸಬೇಕು~? ಎಂದು ಓದುಗ ನಳಿನ್ ಅವರಿಂದ ತೂರಿ ಬಂದ ಪ್ರಶ್ನೆಗೆ ಕಾಯ್ಕಿಣಿ ಉತ್ತರಿಸಿದ್ದು ಹೀಗೆ..
`ಜೀವನದ ಪ್ರತಿ ಕ್ಷಣವನ್ನು ಪ್ರೀತಿಯಿಂದಲೇ ಸ್ವೀಕರಿಸಿ. ಸುತ್ತಮುತ್ತ ನಡೆಯುವ ಆಗು-ಹೋಗುಗಳನ್ನು ಪ್ರೀತಿಯಿಂದಲೇ ಗಮನಿಸಿ. ಅದನ್ನು ಬರವಣಿಗೆಗೆ ಇಳಿಸುವ ಪ್ರಯತ್ನ ನಡೆಸಿರಿ. ಆಗ ನಿಮ್ಮಿಂದ ಅರ್ಥಪೂರ್ಣ ಸಾಹಿತ್ಯ ಸೃಜಿಸುತ್ತದೆ~ ಎಂದು ಹೇಳಿದರು.
`ಒಬ್ಬ ಲೇಖಕ ಕೃತಿಗಳನ್ನು ಖುದ್ದು ಮಾರಾಟ ಮಾಡುವುದು ಒಂದು ಅದ್ಭುತ ಕಲ್ಪನೆ. ಇದು ಇಂಗ್ಲಿಷ್ ಪುಸ್ತಕೋದ್ಯಮದಲ್ಲಿ ಮಾತ್ರ ಇತ್ತು. ಆದರೆ, ಅಂಕಿತ ಪುಸ್ತಕದವರು ಈ ಕಲ್ಪನೆಯನ್ನು ಕನ್ನಡಕ್ಕೆ ತಂದಿರುವುದು ನಿಜಕ್ಕೂ ಸಂತೋಷ ತಂದಿದೆ.
ಈಚೆಗಷ್ಟೇ ಪ್ರಕಾಶನದಿಂದ ನನ್ನ ಕೃತಿಗಳಾದ `ಚಾರ್‌ಮಿನಾರ್~ ಮತ್ತು `ಎಲ್ಲೋ ಮಳೆಯಾಗಿದೆ~ ಬಿಡುಗಡೆಯಾಗಿರುವ ಹಿನ್ನೆಲೆಯಲ್ಲಿ ಇಂತಹದ್ದೊಂದು ಕಲ್ಪನೆಯನ್ನು ಸಾಕಾರಗೊಳಿಸಲಾಗಿದೆ~ ಎಂದು ಹೇಳಿದರು.
ಓದುಗ ಮತ್ತು ಲೇಖಕನ ಸಂಬಂಧ ಹಾಗೂ ಪುಸ್ತಕ ಪ್ರೀತಿ ಕುರಿತು ಓದುಗರು ಕೇಳಿದ ಪ್ರಶ್ನೆಗೆ ಕಾಯ್ಕಿಣಿ, `ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಎಲ್ಲ ಓದುಗರನ್ನು ಮಾತನಾಡಿಸಲು ಸಾಧ್ಯವಾಗದೇ ಇರುವುದರಿಂದ ಲೇಖಕ ಮತ್ತು ಓದುಗನ ನಡುವೆ ಅನೌಪಚಾರಿಕ ಸಂವಾದದ ಅಗತ್ಯವಿರುತ್ತದೆ~ ಎಂದರು.
`ಯುರೋಪಿಯನ್ ದೇಶಗಳಲ್ಲಿ ರೈಲು ನಿಲ್ದಾಣ, ಬಸ್ ನಿಲ್ದಾಣಗಳಲ್ಲಿ ಸುಮ್ಮನೆ ಕುಳಿತಿರುವ ಯುವಕರ ಕೈಯಲ್ಲಿ ಪುಸ್ತಕಗಳಿರುತ್ತದೆ. ಇದು ಉತ್ತಮ ಬೆಳವಣಿಗೆ. ಇಂತಹ ಬೆಳವಣಿಗೆ ಕರ್ನಾಟಕದಲ್ಲೂ ನಡೆಯಬೇಕು~ ಎಂದು ಹೇಳಿದರು. `ಪುಸ್ತಕದೊಂದಿಗೆ ಸ್ನೇಹ ಎಂದಿಗೂ ಶಾಶ್ವತ. ಸಾಹಿತ್ಯವು ಆತ್ಮ ಸಂತೋಷ ನೀಡುತ್ತದೆ. ಸಾಹಿತ್ಯ ಕ್ಷೇತ್ರಕ್ಕೆ ಆಗಮಿಸುವ ಎಳೆಯರು ಗಂಗಾಧರ ಚಿತ್ತಾಲ, ಪಿ.ಲಂಕೇಶ್, ಕೆ.ವಿ. ತಿರುಮಲೇಶ್, ಎ.ಕೆ.ರಾಮಾನುಜನ್ ಅವರ ಕೃತಿಗಳನ್ನು ತಪ್ಪದೇ ಓದಬೇಕು~ ಎಂದು ಸಲಹೆ ನೀಡಿದರು.
ಅಂಕಿತ ಪುಸ್ತಕ ಮಳಿಗೆಯ ಪ್ರಕಾಶ್ ಕಂಬತ್ತಳ್ಳಿ, `ಈವರೆಗೆ ಕಾಯ್ಕಿಣಿ ಮತ್ತು ಇತರೆ ಲೇಖಕರ ಒಟ್ಟು 300 ಪುಸ್ತಕಗಳು ಮಾರಾಟಗೊಂಡಿದ್ದು, 400ಕ್ಕಿಂತಲೂ ಹೆಚ್ಚು ಓದುಗರು ಕಾಯ್ಕಿಣಿ ಅವರನ್ನು ನೋಡುವ ಸಲುವಾಗಿಯೇ ಆಗಮಿಸಿದ್ದಾರೆ. ಕಾಯ್ಕಿಣಿ ಕೇವಲ ಚಿತ್ರ ಸಾಹಿತಿ ಮಾತ್ರವಲ್ಲ. ಅವರ ಇತರೆ ಸಾಹಿತ್ಯದ ಪರಿಚಯವು ನಾನಾ ವಲಯದ ಓದುಗರಿಗೆ ತಿಳಿಯಪಡಿಸಲು ಇದೊಂದು ಒಳ್ಳೆಯ ಅವಕಾಶ~ ಎಂದು ಹೇಳಿದರು.
ಓದುಗರ ಅಭಿಪ್ರಾಯ ಕನ್ನಡ ಉಳಿಸುವ ನಿಟ್ಟಿನಲ್ಲಿ ಅವರ ಬಳಸುವ ಕನ್ನಡ ಭಾಷೆ ಎಲ್ಲರಿಗೂ ಅಚ್ಚುಮೆಚ್ಚು. ಈವರೆಗೆ ಅವರನ್ನು ಮುಖತಃ ಮಾತನಾಡಿಸಲು ಸಾಧ್ಯವಾಗಿರಲಿಲ್ಲ. ಈಗ ಅವರನ್ನು ಮಾತನಾಡಿಸಿ ಪುಸ್ತಕ ಕೊಂಡ ಖುಷಿಯೇ ಬೇರೆ. ಕನ್ನಡ ಭಾಷೆ, ಸಾಹಿತ್ಯ ಸೇರಿದಂತೆ ಹಲವು ವಿಚಾರಗಳಲ್ಲಿ ಅವರು ನೀಡಿದ ಸಲಹೆ ಮತ್ತು ಸೂಚನೆ ಇಷ್ಟವಾಯಿತು. |
ಶೀಘ್ರವೇ ಅನಂತಮೂರ್ತಿ ಜತೆ ಸಂವಾದ ಹಿರಿಯ ಸಾಹಿತಿ ಡಾ.ಯು.ಆರ್.ಅನಂತಮೂರ್ತಿ ಅವರೊಂದಿಗೆ ಇಂತಹದೊಂದು ಅನೌಪಚಾರಿಕ ಸಂವಾದ ಏರ್ಪಡಿಸುವ ಕುರಿತು ಅಂಕಿತ ಪುಸ್ತಕವು ಈಗಾಗಲೇ ಚಿಂತನೆ ನಡೆಸಿದೆ. ಏಪ್ರಿಲ್ 1 ರಂದು ಅನಂತಮೂರ್ತಿ ಅವರ `ಆರು ದಶಕದ ಆಯ್ದ ಬರಹಗಳು~ ಮತ್ತು `ಅಂದಿನಿಂದ ಇಂದಿಗೆ~ ಪುಸ್ತಕಗಳು ಬಿಡುಗಡೆಯಾಗಲಿವೆ. ಇದಾದ ಕೆಲವೇ ದಿನಗಳಲ್ಲಿ ಇಂತಹ ಸಂವಾದವನ್ನು ಹಮ್ಮಿಕೊಳ್ಳಲಾಗುವುದು ಎಂದು ಪ್ರಕಾಶ್ ಕಂಬತ್ತಳ್ಳಿ ತಿಳಿಸಿದರು. |
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.