ADVERTISEMENT

ಪೂರ್ವ ವಿಭಾಗದ ಪೊಲೀಸರ ಯಶಸ್ವಿ ಕಾರ್ಯಾಚರಣೆ.ತಿಂಗಳಲ್ಲೇ 158 ಪ್ರಕರಣ ಪತ್ತೆ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2011, 19:30 IST
Last Updated 28 ಫೆಬ್ರುವರಿ 2011, 19:30 IST

ಬೆಂಗಳೂರು: ದರೋಡೆ, ಕಳವು ಮತ್ತಿತರ ಅಪರಾಧ ಪ್ರಕರಣಗಳನ್ನು ಭೇದಿಸಿರುವ ನಗರದ ಪೂರ್ವ ವಿಭಾಗದ ಪೊಲೀಸರು 83 ಮಂದಿ ಆರೋಪಿಗಳನ್ನು ಬಂಧಿಸಿ, 1.60 ಕೋಟಿ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

‘ಒಂದು ತಿಂಗಳಲ್ಲಿ 158 ಪ್ರಕರಣಗಳನ್ನು ಭೇದಿಸಿರುವ ಪೊಲೀಸರು 3.4 ಕೆ.ಜಿ ಚಿನ್ನಾಭರಣ, ಏಳು ಕೆ.ಜಿ ಬೆಳ್ಳಿ ಆಭರಣಗಳು, ನಾಲ್ಕು ಕಾರು ಮತ್ತು 69 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ’ ಎಂದು ಅಪರಾಧ ವಿಭಾಗದ ಜಂಟಿ ಪೊಲೀಸ್ ಕಮಿಷನರ್ ಅಲೋಕ್ ಕುಮಾರ್ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಉತ್ತಮವಾಗಿ ಕಾರ್ಯ ನಿರ್ವಹಿಸಿರುವ ಪೂರ್ವ ವಿಭಾಗದ ಪೊಲೀಸರು ಏಳು ಸುಲಿಗೆ, 12 ಸರಗಳವು, 79 ವಾಹನ ಕಳವು ಮತ್ತಿತರ ಪ್ರಕರಣಗಳನ್ನು ಪತ್ತೆ ಮಾಡಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅಲೋಕ್ ಕುಮಾರ್ ಸಿಬ್ಬಂದಿ ತಂಡಕ್ಕೆ 1.60 ಲಕ್ಷ ಬಹುಮಾನ ನೀಡಿದರು.

ಹಲಸೂರು:
ಸುಲಿಗೆ, ವಾಹನ ಕಳವು ಪ್ರಕರಣಗಳನ್ನು ಪತ್ತೆ ಮಾಡಿರುವ ಹಲಸೂರು ಪೊಲೀಸರು ಆರು ಮಂದಿಯನ್ನು ಬಂಧಿಸಿ 32.73 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು ವಾಹನಗಳನ್ನು ಜಪ್ತಿ ಮಾಡಿದ್ದಾರೆ.ಅಸ್ಸಾಂನ ಮಿನುಥಾಪ (30), ಸುದ್ದಗುಂಟೆಪಾಳ್ಯದ ಏಜಾಜ್ (29), ಆಸ್ಟಿನ್‌ಟೌನ್‌ನ ಮೋಹನ್ ದಾಸ್ (50), ತಮಿಳುನಾಡಿನ ಕುಮಾರ ವೇಲು (35), ಚಂದ್ರಾಲೇಔಟ್‌ನ ಕಿರಣ್ (32) ಮತ್ತು ಕೊಳ್ಳೆಗಾಲದ ಚಂದ್ರನ್ (23) ಬಂಧಿತರು.

ಆರೋಪಿಗಳಿಂದ ಒಂದು ಕೆ.ಜಿ ಚಿನ್ನಾಭರಣ, ಮೂರು ಬೈಕ್, ಎರಡು ಆಟೊ ಮತ್ತು ಲ್ಯಾಪ್‌ಟಾಪ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಪುಲಿಕೇಶಿನಗರ: ವಿವಿಧ ಪ್ರಕರಣಗಳನ್ನು ಪತ್ತೆ ಹಚ್ಚಿರುವ ಪುಲಿಕೇಶಿನಗರ ಪೊಲೀಸರು 15 ಆರೋಪಿಗಳನ್ನು ಬಂಧಿಸಿ 22 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.2006ರಲ್ಲಿ ನಡೆದಿದ್ದ ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಚರಣ್, ಗಿರೀಶ್, ಮಂಜುನಾಥ್‌ರಾವ್, ಕುಮಾರ್ ಮತ್ತು ಮೋಹನ್ ಎಂಬುವರನ್ನು ಇದೇ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಪ್ರಯಾಣಿಕರ ಸೋಗಿನಲ್ಲಿ ಕೆ.ಆರ್.ಪುರದ ಬಳಿ ಕಾಲ್‌ಸೆಂಟರ್‌ವೊಂದರ ಕಾರು ಹತ್ತಿಕೊಂಡಿದ್ದ ಈ ಆರೋಪಿಗಳು ಚಾಲಕ ಸಂದೇಶ್‌ಕುಮಾರ್ (22) ಎಂಬಾತನ ಕುತ್ತಿಗೆಗೆ ಹಗ್ಗ ಬಿಗಿದು ಕೊಲೆ ಮಾಡಿ ಶವವನ್ನು ಕುಕ್ಕೆ ಸುಬ್ರಹ್ಮಣ್ಯದ ಬಿಸ್ಲೇ ಘಾಟ್‌ನಲ್ಲಿ ಎಸೆದು ಬಂದಿದ್ದರು.

ಆದಿಚುಂಚನಗಿರಿ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳನ್ನು ಅಪಹರಿಸಲು ಉದ್ದೇಶಿಸಿದ್ದ ಆರೋಪಿಗಳು, ಸಂದೇಶ್‌ಕುಮಾರ್‌ನನ್ನು ಕೊಲೆ ಮಾಡಿ ಕಾರಿನೊಂದಿಗೆ ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಆರು ತಿಂಗಳ ನಂತರ ಸಂದೇಶ್‌ಕುಮಾರ್‌ನ ಶವ ಪತ್ತೆಯಾಗಿತ್ತು. ಬಂಧಿತರು ಕಳವು ಮಾಡಿದ್ದ ಕಾರನ್ನೇ ಬಳಸಿ ಉತ್ತರ ಭಾರತದ ಯುಗಮ್ ಚೋಪ್ರಾ ಮತ್ತು ಭೋಪೇಂದರ್ ಎಂಬ ವೈದ್ಯಕೀಯ ವಿದ್ಯಾರ್ಥಿಗಳನ್ನು ಅಪಹರಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಕಾಡುಗೊಂಡನಹಳ್ಳಿ: ಕೊಲೆ ಯತ್ನ, ಹಲ್ಲೆ ಪ್ರಕರಣದಲ್ಲಿ ಎರಡು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕಾಡುಗೊಂಡನಹಳ್ಳಿಯ ತೌಫಿಕ್ ಪಾಷಾ ಎಂಬಾತನನ್ನು ಬಂಧಿಸಿರುವ ಪೊಲೀಸರು ಒಂದು ಪಿಸ್ತೂಲ್, ಮೂರು ಜೀವಂತ ಗುಂಡುಗಳು ಮತ್ತು ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.

ತೌಫಿಕ್ ಪಾಷಾ ತನ್ನ ಸಹಚರರೊಂದಿಗೆ ಸೇರಿ ಬಿಲಾಲ್ ಮಸೀದಿಯ ಅಧ್ಯಕ್ಷ ಅಮೀರ್ ಜಾನ್ ಎಂಬುವರನ್ನು ಕೊಲೆ ಮಾಡಲು ಯತ್ನಿಸಿ, ತಲೆ ಮರೆಸಿಕೊಂಡಿದ್ದ ಎಂದು ಪೊಲೀಸರು ಹೇಳಿದ್ದಾರೆ.ಪೂರ್ವ ವಿಭಾಗದ ಡಿಸಿಪಿ ಎಂ.ಚಂದ್ರಶೇಖರ್, ಎಸಿಪಿಗಳಾದ ಜಿ.ಬಿ.ಮಂಜುನಾಥ್, ಬಿ.ಬಿ.ಅಶೋಕ್ ಕುಮಾರ್, ಎನ್.ನರಸಿಂಹಯ್ಯ ಮತ್ತು ಸಿಬ್ಬಂದಿ ತಂಡ ಆರೋಪಿಗಳನ್ನು ಬಂಧಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.