ADVERTISEMENT

ಪೊಲೀಸರಿಂದಲೇ ನಾಗಿರೆಡ್ಡಿ ಅಂತ್ಯಸಂಸ್ಕಾರ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2011, 19:35 IST
Last Updated 3 ಫೆಬ್ರುವರಿ 2011, 19:35 IST

ಬೆಂಗಳೂರು: ಎನ್‌ಕೌಂಟರ್‌ನಲ್ಲಿ ಸಾವನ್ನಪ್ಪಿದ ರೌಡಿ ನಾಗಿರೆಡ್ಡಿಯ ಶವವನ್ನು ಪಡೆಯಲು ಪೋಷಕರು ನಿರಾಕರಿಸಿದ ಕಾರಣ ಪೊಲೀಸರೇ ಗುರುವಾರ ನಗರದಲ್ಲಿ ಅಂತ್ಯ ಸಂಸ್ಕಾರ ನಡೆಸಿದ್ದಾರೆ.

‘ರೆಡ್ಡಿಯ ತಂದೆ ಮದನ್ ಮೋಹನ್ ರೆಡ್ಡಿ ಮತ್ತು ತಾಯಿ ಪ್ರಭಾವತಿ ಅವರು ಹೈದರಾಬಾದ್‌ನಲ್ಲಿ ನೆಲೆಸಿದ್ದಾರೆ. ಶವ ಪರೀಕ್ಷೆ ನಡೆಸಲು ಪೋಷಕರ ಅನುಮತಿ ಬೇಕಾಗುತ್ತದೆ.
ಅನುಮತಿ ಪಡೆಯಲು ಹೈದರಾಬಾದ್‌ಗೆ ಹೋಗಿದ್ದೆವು. ಆದರೆ ಆತನ ಪೋಷಕರು ‘ನಾಗಿ ರೆಡ್ಡಿಗೂ ನಮಗೂ ಏನೂ ಸಂಬಂಧ ಇಲ್ಲ’ ಎಂದರು. ಈ ಬಗ್ಗೆ ಪತ್ರವನ್ನೂ ಅವರು ಬರೆದುಕೊಟ್ಟಿದ್ದಾರೆ.ಆದ್ದರಿಂದ ಅಂಬೇಡ್ಕರ್ ವೈದ್ಯಕೀಯ ಕಾಲೇಜಿನಲ್ಲಿ ಶವ ಪರೀಕ್ಷೆ ನಡೆಸಿ ಪುಲಿಕೇಶಿನಗರದ ಕಲ್ಪಳ್ಳಿಯ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಮದನ್ ಮೋಹನ್ ಅವರ ಒಬ್ಬನೇ ಮಗ ನಾಗಿ ರೆಡ್ಡಿ. ನಿವೃತ್ತ ಸರ್ಕಾರಿ ನೌಕರರಾದ ಮದನ್ ಅವರು ಪತ್ನಿ ಜತೆ ಹೈದರಾಬಾದ್‌ನ ನಿಜಾಮ್‌ನಗರದಲ್ಲಿ ನೆಲೆಸಿದ್ದಾರೆ.
ರೆಡ್ಡಿ ಅಪರಾಧ ಎಸಗಲು ಆರಂಭಿಸಿದಾಗಲೇ ಪೋಷಕರು ಆತನನ್ನು ದೂರ ಮಾಡಿದ್ದರು. ಆತನ ಅಂತಿಮ ದರ್ಶನ ಪಡೆಯಲೂ ಅವರು ಒಪ್ಪಲಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ರಾಮಮೂರ್ತಿನಗರದ ಕಲ್ಕೆರೆ ಸಮೀಪ ಮಂಗಳವಾರ (ಫೆ.1) ನಸುಕಿನಲ್ಲಿ ನಡೆದಿದ್ದ ಪೊಲೀಸ್ ಎನ್‌ಕೌಂಟರ್‌ನಲ್ಲಿ ಕುಖ್ಯಾತ ರೌಡಿ ನಲ್ಲ ನಾಗೇಂದ್ರರೆಡ್ಡಿ ಅಲಿಯಾಸ್ ನಾಗಿ ರೆಡ್ಡಿ (30) ಸಾವನ್ನಪ್ಪಿದ್ದ. ಕೊಲೆ ಮತ್ತು ದರೋಡೆ ಸೇರಿದಂತೆ 13ಕ್ಕೂ ಹೆಚ್ಚು ಗಂಭೀರ ಸ್ವರೂಪದ ಅಪರಾಧ ಪ್ರಕರಣಗಳಲ್ಲಿ ಆತ ಆರೋಪಿಯಾಗಿದ್ದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.