ADVERTISEMENT

ಪೊಲೀಸರ ಬೆವರಿಳಿಸಿದ ಹೈಕೋರ್ಟ್‌

​ಪ್ರಜಾವಾಣಿ ವಾರ್ತೆ
Published 1 ಜೂನ್ 2018, 20:07 IST
Last Updated 1 ಜೂನ್ 2018, 20:07 IST
ಪೊಲೀಸರ ಬೆವರಿಳಿಸಿದ ಹೈಕೋರ್ಟ್‌
ಪೊಲೀಸರ ಬೆವರಿಳಿಸಿದ ಹೈಕೋರ್ಟ್‌   

ಬೆಂಗಳೂರು: ‘ನಾಪತ್ತೆಯಾಗಿರುವ ಟೆಕಿ ಅಜಿತಾಬ್ ಕುಮಾರ್, ದೇಶದ ಹಿತಾಸಕ್ತಿ ವಿರುದ್ಧ ಕೆಲಸ ಮಾಡುವ ಸಂಘಟನೆಗಳ ಕೈಗೆ ಸಿಕ್ಕಿಹಾಕಿಕೊಂಡಿದ್ದರೆ ಏನು ಮಾಡುವುದು’ ಎಂದು ಹೈಕೋರ್ಟ್‌ ಸಿಐಡಿಯನ್ನು ಪ್ರಶ್ನಿಸಿದೆ.

‘ಅಜಿತಾಬ್ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ತನಿಖೆಯಲ್ಲಿ ಯಾವುದೇ ಪ್ರಗತಿ ಕಂಡು ಬಂದಿಲ್ಲ‘ ಎಂದು ನ್ಯಾಯಮೂರ್ತಿ ಅರವಿಂದ ಕುಮಾರ್ ಶುಕ್ರವಾರ ಸಿಐಡಿ ತನಿಖಾಧಿಕಾರಿಗಳನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.

‘ಒಂದು ವೇಳೆ ದೇಶದ್ರೋಹಿ ಸಂಘಟನೆಗಳು ಆತನ ಕೌಶಲವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದರೆ ಏನು ಮಾಡುವುದು? ಇದೊಂದು ಆಘಾತಕಾರಿ ವಿಚಾರವಾಗಿದೆ’ ಎಂಬ ನ್ಯಾಯಮೂರ್ತಿ ಆತಂಕ ವ್ಯಕ್ತಪಡಿಸಿದರು.

ADVERTISEMENT

ವಿಚಾರಣೆ ವೇಳೆ ಸರ್ಕಾರಿ ವಕೀಲರು, ಅಜಿತಾಬ್ ನಾಪತ್ತೆ ನಂತರ ಅವರ ಮೊಬೈಲ್ ಕರೆಗಳ ಮಾಹಿತಿ ಒಳಗೊಂಡ ವರದಿಯನ್ನು ನ್ಯಾಯಪೀಠಕ್ಕೆ ಹಾಜರುಪಡಿಸಿದರು.

ವರದಿ ಪರಿಶೀಲಿಸಿದ ನ್ಯಾಯಮೂರ್ತಿ, ‘ಈ ಕರೆಗಳ ಜಾಡು ಹಿಡಿದು ಏನಾದರೂ ತನಿಖೆ ನಡೆಸಿದ್ದೀರಾ’ ಎಂದು ಪ್ರಶ್ನಿಸಿದಾಗ ಸರ್ಕಾರಿ ವಕೀಲರು, ‘ಇನ್ನೂ ಪ್ರಶ್ನಿಸಿಲ್ಲ’ ಎಂದರು.

ಇದರಿಂದ ಕುಪಿತರಾದ ನ್ಯಾಯಮೂರ್ತಿ, ‘ಒಂದು ತನಿಖಾ ಸಂಸ್ಥೆಯಿಂದ ನಿರೀಕ್ಷಿಸಬಹುದಾದ ವೃತ್ತಿಪರ ತನಿಖೆ ಇಲ್ಲಿ ನಡೆದಿಲ್ಲ. ಈವರೆಗಿನ ವಿದ್ಯಮಾನ ಗಮನಿಸಿದರೆ, ನಿಮ್ಮ ತನಿಖೆಯು ಕೇವಲ ಕಣ್ಣೊರೆಸುವ ತಂತ್ರದಂತಿದೆ. ಈವರೆಗೂ ಅಜಿತಾಬ್ ಬದುಕಿದ್ದಾನೋ ಅಥವಾ ಇಲ್ಲವೋ ಎಂಬುದನ್ನೇ ಕಂಡುಕೊಂಡಿಲ್ಲವಲ್ಲಾ’ ಎಂದು ಕಿಡಿ ಕಾರಿದರು.

‘ಇಂದಿನ ತಂತ್ರಜ್ಞಾನದಲ್ಲಿ ಒಬ್ಬ ವ್ಯಕ್ತಿ ಎಲ್ಲಿದ್ದಾನೆಂಬುದನ್ನು ಶ್ರಮವಿಲ್ಲದೇ ಕಂಡು ಹಿಡಿಯಬಹುದು. ಆದರೆ, ಅಜಿತಾಬ್ ಬದುಕಿದ್ದಾನೋ ಇಲ್ಲವೋ, ಎಲ್ಲಿದ್ದಾನೆ ಎಂಬುದನ್ನೇ ನೀವು ಪತ್ತೆ ಹಚ್ಚಿಲ್ಲ. ಈ ಪ್ರಕರಣದ ತನಿಖೆ ಅಸಮರ್ಪಕ ಹಾಗೂ ಅಸಮರ್ಥತೆಯಿಂದ ಕೂಡಿದೆ’ ಎಂದು ನ್ಯಾಯಮೂರ್ತಿ ಬೇಸರ ವ್ಯಕ್ತಪಡಿಸಿದರು. ವಿಚಾರಣೆಯನ್ನು ಇದೇ 4ಕ್ಕೆ ಮುಂದೂಡಲಾಗಿದೆ.

‘ಕರೆಗಳ ಮಾಹಿತಿ ಸಂಗ್ರಹಿಸಿ’
‘2017ರ ಡಿಸೆಂಬರ್ 18ರಿಂದ 26ರವರೆಗಿನ ಅಜಿತಾಬ್‌ ಮೊಬೈಲ್ ಕರೆಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಸಂಗ್ರಹಿಸಿ, ಮುಂದಿನ ವಿಚಾರಣೆ ವೇಳೆ ಕೋರ್ಟ್‌ಗೆ ಸಲ್ಲಿಸಬೇಕು’ ಎಂದು ನ್ಯಾಯಪೀಠ ತನಿಖಾಧಿಕಾರಿಗಳಿಗೆ ಸೂಚಿಸಿದೆ. ‘ಸಾಧ್ಯವಾದರೆ ಮೊಬೈಲ್ ಕಂಪನಿಗಳಿಂದ ಕರೆಗಳ ಧ್ವನಿಮುದ್ರಿಕೆ ಪಡೆಯಿರಿ ಎಂದೂ ಸಲಹೆ ನೀಡಿದೆ.

*
ನಿಮ್ಮ ವರದಿಯೊಳಗೆ ಏನೇನೂ ಇಲ್ಲ. ಅವನು ಅಲ್ಲಿಗೆ ಹೋದ; ಇಲ್ಲಿಗೆ ಬಂದ, ಅಲ್ಲಿ ಕೂತ, ಎದ್ದು ಬಂದ ಎಂದಂತಿದೆ ಅಷ್ಟೆ...
–ಅರವಿಂದ ಕುಮಾರ್, ನ್ಯಾಯಮೂರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.