ADVERTISEMENT

ಪೊಲೀಸ್ -ಜನಸಂಪರ್ಕ ಜಾಲತಾಣಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2012, 19:30 IST
Last Updated 10 ಅಕ್ಟೋಬರ್ 2012, 19:30 IST
ಪೊಲೀಸ್ -ಜನಸಂಪರ್ಕ ಜಾಲತಾಣಕ್ಕೆ ಚಾಲನೆ
ಪೊಲೀಸ್ -ಜನಸಂಪರ್ಕ ಜಾಲತಾಣಕ್ಕೆ ಚಾಲನೆ   

ಬೆಂಗಳೂರು: ಜನಸ್ನೇಹಿ ಪೊಲೀಸ್ ವ್ಯವಸ್ಥೆಯ ಭಾಗವಾಗಿ ನಗರ ಪೊಲೀಸರು ರೂಪಿಸಿರುವ `ಪೊಲೀಸ್-ಸಾರ್ವಜನಿಕ ಸಂಪರ್ಕ ಸೇತುವಾಗಿ ಸಾಮಾಜಿಕ ಜಾಲ ತಾಣಗಳ ಬಳಕೆ~ ಯೋಜನೆಗೆ ಉಪ ಮುಖ್ಯಮಂತ್ರಿ ಆರ್.ಅಶೋಕ ಅವರು ಬುಧವಾರ ಚಾಲನೆ ನೀಡಿದರು.

ನಗರದ ನೃಪತುಂಗ ರಸ್ತೆಯಲ್ಲಿರುವ ರಾಜ್ಯ ಪೊಲೀಸ್ ಪ್ರಧಾನ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ನೂತನ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅಶೋಕ, `ಪೊಲೀಸರು ಮತ್ತು ಸಾರ್ವಜನಿಕರ ನಡುವೆ ಮಾಹಿತಿ ವಿನಿಮಯಕ್ಕೆ ಅಲ್ಲದೇ ಪರಸ್ಪರರ ನಡುವಿನ ಬಾಂಧವ್ಯ ಸುಧಾರಣೆಗೂ ಉತ್ತಮ ವೇದಿಕೆಯಾಗಲಿದೆ~ ಎಂದು ಅಭಿಪ್ರಾಯಪಟ್ಟರು.

ಜನಸ್ನೇಹಿ ಪೊಲೀಸ್ ವ್ಯವಸ್ಥೆ ರೂಪಿಸುವುದು ಸರ್ಕಾರದ ಆದ್ಯತೆಯಾಗಿದೆ. ಅದರ ಭಾಗವಾಗಿ ಈ ಯೋಜನೆ ರೂಪಿಸಲಾಗಿದೆ. ಇತ್ತೀಚೆಗೆ ಈಶಾನ್ಯ ರಾಜ್ಯಗಳ ಜನರ ಮೇಲೆ ಹಲ್ಲೆ ನಡೆದಿದ್ದ ಸಂದರ್ಭದಲ್ಲಿ ಸಮಾಜಘಾತುಕ ವ್ಯಕ್ತಿಗಳು ಸಾಮಾಜಿಕ ಜಾಲ ತಾಣಗಳನ್ನು ದುರ್ಬಳಕೆ ಮಾಡಿಕೊಂಡಿದ್ದರು.

ಬೇರೆ ದೇಶಗಳಲ್ಲಿ ನಡೆದ ಹಿಂಸಾತ್ಮಕ ಘಟನಾವಳಿಯ ದೃಶ್ಯಗಳನ್ನು ಹಾಗೂ ಸುಳ್ಳು ಮಾಹಿತಿಯನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಹರಿಬಿಟ್ಟು, ಭಯದ ವಾತಾವರಣ ನಿರ್ಮಿಸಿದ್ದರು. ಇದರಿಂದ ಪೊಲೀಸ್ ಇಲಾಖೆಗೆ ಹಾಗೂ ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯಾಯಿತು ಎಂದರು.

ಸಾರ್ವಜನಿಕರು ನಿರ್ಭೀತಿಯಿಂದ ಪೊಲೀಸ್ ಠಾಣೆಗಳಿಗೆ ಬಂದು ದೂರು ನೀಡುವ ಹಾಗೂ ಅಧಿಕಾರಿಗಳೊಂದಿಗೆ ಮುಕ್ತವಾಗಿ ಮಾತನಾಡುವಂತಹ ವಾತಾವರಣ ನಿರ್ಮಾಣವಾಗಬೇಕು. ಈ ನಿಟ್ಟಿನಲ್ಲಿ ಪೊಲೀಸ್ ಸಿಬ್ಬಂದಿ ಪ್ರಯತ್ನ ನಡೆಸಬೇಕು. ಅಂತರ್ಜಾಲ ಬಳಕೆಯ ಬಗ್ಗೆ ಸಿಬ್ಬಂದಿ ಹೆಚ್ಚು ಗಮನಹರಿಸಬೇಕು ಎಂದು ಹೇಳಿದರು.

ರಾಜ್ಯ ಪೊಲೀಸ್ ಮಹಾನಿರ್ದೇಶಕ (ಹಂಗಾಮಿ) ಲಾಲ್ ರೋಕುಮ ಪಚಾವೊ ಮಾತನಾಡಿ, `ಸಿಬ್ಬಂದಿ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲು ಈ ಯೋಜನೆ ಸಹಕಾರಿಯಾಗಲಿದೆ. ಸಾರ್ವಜನಿಕರಿಗೆ ಮಾಹಿತಿ ನೀಡಲು ಹಾಗೂ ಅವರಿಂದ ಮಾಹಿತಿ ಪಡೆದುಕೊಳ್ಳಲು ಉಪಯುಕ್ತವಾಗಲಿದೆ~ ಎಂದು ತಿಳಿಸಿದರು.

ಈ ಯೋಜನೆಯ ನಿರ್ವಹಣೆಗಾಗಿ ವಿಶೇಷ ಸಿಬ್ಬಂದಿ ತಂಡವನ್ನು ರಚಿಸಲಾಗಿದೆ. ಆ ಸಿಬ್ಬಂದಿ ದಿನದ 24 ಗಂಟೆಯೂ ಕಾರ್ಯ ನಿರ್ವಹಿಸಲಿದ್ದು, ಸಾರ್ವಜನಿಕರ ಅಹವಾಲುಗಳಿಗೆ ಸ್ಪಂದಿಸಲಿದ್ದಾರೆ ಎಂದು ನಗರ ಪೊಲೀಸ್ ಕಮಿಷನರ್ ಜ್ಯೋತಿಪ್ರಕಾಶ್ ಮಿರ್ಜಿ ಮಾಹಿತಿ ನೀಡಿದರು.

ಫೇಸ್‌ಬುಕ್, ಟ್ವಿಟ್ಟರ್ ಮತ್ತಿತರ ಸಾಮಾಜಿಕ ಜಾಲ ತಾಣಗಳ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಹಾಗೂ ನಾಗರಿಕರೊಂದಿಗೆ ಸಂಪರ್ಕ ಸಾಧಿಸುವುದು ಈ ಯೋಜನೆಯ ಉದ್ದೇಶಗಳಾಗಿವೆ.

ಹವಾಸ್ ವರ್ಲ್ಡ್‌ವೈಡ್ ಡಿಜಿಟಲ್ ಮ್ಯಾಟ್ರಿಕ್ಸ್ ಸಂಸ್ಥೆಯ ಸಹಯೋಗದೊಂದಿಗೆ ಪೊಲೀಸರು ಈ ಯೋಜನೆ ಆರಂಭಿಸಿದ್ದಾರೆ.

ತರಬೇತಿ ವಿಭಾಗದ ಡಿಜಿಪಿ ಸುಶಾಂತ್ ಮಹಾಪಾತ್ರ, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಟಿ.ಸುನಿಲ್‌ಕುಮಾರ್, ಪೂರ್ವ ಅಪರಾಧ ವಿಭಾಗದ ಜಂಟಿ ಪೊಲೀಸ್ ಕಮಿಷನರ್ ಬಿ.ದಯಾನಂದ, ಹವಾಸ್ ವರ್ಲ್ಡ್‌ವೈಡ್ ಡಿಜಿಟಲ್ ಮ್ಯಾಟ್ರಿಕ್ಸ್ ಸಂಸ್ಥೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರವಿಶಂಕರ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.