ADVERTISEMENT

ಪೊಲೀಸ್‌ ಜೀಪಿಗೆ ಮುತ್ತಿಗೆ; 30 ಮಂದಿ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 2 ಜೂನ್ 2017, 19:58 IST
Last Updated 2 ಜೂನ್ 2017, 19:58 IST
ಪ್ರತಿಭಟನಾಕಾರರು ಕಾರ್ಪೊರೇಷನ್‌ ವೃತ್ತದಲ್ಲಿ ಪೊಲೀಸ್ ಜೀಪಿಗೆ ಮುತ್ತಿಗೆ ಹಾಕಿದರು – ಪ್ರಜಾವಾಣಿ ಚಿತ್ರ
ಪ್ರತಿಭಟನಾಕಾರರು ಕಾರ್ಪೊರೇಷನ್‌ ವೃತ್ತದಲ್ಲಿ ಪೊಲೀಸ್ ಜೀಪಿಗೆ ಮುತ್ತಿಗೆ ಹಾಕಿದರು – ಪ್ರಜಾವಾಣಿ ಚಿತ್ರ   

ಬೆಂಗಳೂರು: ಗೋ ಹತ್ಯೆ ನಿಷೇಧ ಮಾಡಿರುವ ಕೇಂದ್ರ ಸರ್ಕಾರದ ವರ್ತನೆ ಖಂಡಿಸಿ ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲು ಯತ್ನಿಸಿದ್ದ 30 ಮಂದಿಯನ್ನು  ಪೊಲೀಸರು ವಶಕ್ಕೆ ಪಡೆದರು.

ದಲಿತ ಸಂಘರ್ಷ ಸಮಿತಿ, ಸಮತಾ ಸೈನಿಕ ದಳ, ಸಿಪಿಐ (ಎಂ.ಎಲ್‌), ಸ್ವರಾಜ್‌ ಅಭಿಯಾನ್‌, ಕರ್ನಾಟಕ ಕೋಮು ಸೌಹಾರ್ದ ವೇದಿಕೆ, ಕರ್ನಾಟಕ ಜನಶಕ್ತಿ ಹಾಗೂ ಸೋಷಿಯಲ್‌ ಡೆಮಾಕ್ರೆಟಿಕ್‌ ಪಾರ್ಟಿ ಆಫ್‌ ಇಂಡಿಯಾ (ಎಸ್‌ಡಿಪಿಐ) ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಕಾರ್ಪೊರೇಷನ್‌ ವೃತ್ತದಲ್ಲಿ ಸೇರಿದ್ದ ಪ್ರತಿಭಟನಾಕಾರರು  ಮೆರವಣಿಗೆ ಮೂಲಕ ಪುರಭವನದ ಕಡೆಗೆ ಹೋಗಲು ಮುಂದಾಗಿದ್ದರು. ಈ ವೇಳೆ ಪೊಲೀಸರು ಅವರನ್ನು ತಡೆದು ನಿಲ್ಲಿಸಿದ್ದರು.

‘ಪ್ರತಿಭಟನೆಗೆ ಅನುಮತಿ ಇಲ್ಲ. ವಾಪಸ್‌ ಹೋಗಿ’ ಎಂದು ಪೊಲೀಸರು ವಿನಂತಿಸಿದರು. ಆಗ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು.

ADVERTISEMENT

ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಕೆಲ ಪ್ರತಿಭಟನಾಕಾರರು, ಪೊಲೀಸ್‌ ಜೀಪಿಗೆ ಮುತ್ತಿಗೆ ಹಾಕಿ ಘೋಷಣೆ ಕೂಗಿದರು. ಕೆಲವರು ಜೀಪಿನ ಮೇಲೆ ಹತ್ತಲು ಯತ್ನಿಸಿದರು. ಆಗ ಅವರೆಲ್ಲರನ್ನೂ ವಶಕ್ಕೆ ಪಡೆದ ಪೊಲೀಸರು, ಸಂಜೆ ಬಿಡುಗಡೆಗೊಳಿಸಿದರು. 

ಪುರಭವನ ಬಳಿ ಐವರು ವಶಕ್ಕೆ: ಕಾರ್ಪೊರೇಷನ್‌ ವೃತ್ತದಲ್ಲಿ ಪೊಲೀಸರಿಂದ ತಪ್ಪಿಸಿಕೊಂಡು ಬಂದ ಐವರು ಪುರಭವನ ಎದುರು ಪ್ರತಿಭಟನೆ ನಡೆಸಲು ಯತ್ನಿಸಿದರು. ಅವರನ್ನೂ ಪೊಲೀಸರು ವಶಕ್ಕೆ ಪಡೆದರು.

ಶಿವಾಜಿನಗರದಲ್ಲೂ ಪ್ರತಿಭಟನೆ: ಸೋಷಿಯಲ್‌ ಡೆಮಾಕ್ರೆಟಿಕ್‌ ಪಾರ್ಟಿ ಆಫ್‌ ಇಂಡಿಯಾ (ಎಸ್‌ಡಿಪಿಐ) ಸದಸ್ಯರು ಶಿವಾಜಿನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು. 

‘ಗೋಹತ್ಯೆ ನಿಷೇಧವು ಸಂವಿಧಾನ ಬಾಹಿರವಾಗಿದ್ದು, ಆಹಾರದ ಹಕ್ಕಿಗೆ ಧಕ್ಕೆ ಉಂಟಾಗಲಿದೆ. ಈ ನಿರ್ಧಾರವನ್ನು ಕೇಂದ್ರ ಸರ್ಕಾರ ಹಿಂಪಡೆಯಬೇಕು’ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಪ್ರತಿಭಟನೆಗೆ ಅನುಮತಿ ಇಲ್ಲದಿದ್ದರಿಂದ ಸ್ಥಳಕ್ಕೆ ಬಂದ ಪೊಲೀಸರು 15 ಮಂದಿಯನ್ನು ವಶಕ್ಕೆ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.