ADVERTISEMENT

ಪೊಲೀಸ್ ಠಾಣೆ ಎದುರು ಶವವಿಟ್ಟು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 13 ಜುಲೈ 2012, 18:30 IST
Last Updated 13 ಜುಲೈ 2012, 18:30 IST

ಬೆಂಗಳೂರು:  ನಗರದ ಶೇಷಾದ್ರಿಪುರದಲ್ಲಿ ಭಾನುವಾರ ಕಟ್ಟಡದ ಮೂರನೇ ಮಹಡಿಯಿಂದ ಕೆಳಗೆ ಬಿದ್ದು ಗಾಯಗೊಂಡಿದ್ದ ಬಾಲಕಿ ಶ್ವೇತಾ (15) ಸಾವಿಗೆ ಆಕೆ ಕೆಲಸ ಮಾಡುತ್ತಿದ್ದ ಮನೆಯ ಮಾಲೀಕ ರಾಜೇಶ್ ಜೈನ್ ಕುಟುಂಬವೇ ಕಾರಣ ಎಂದು ಆರೋಪಿಸಿ ಬಾಲಕಿಯ ಪೋಷಕರು ಮತ್ತು ವಿವಿಧ ಸಂಘಟನೆಗಳ ಸದಸ್ಯರು ಗುರುವಾರ ಶೇಷಾದ್ರಿಪುರ ಪೊಲೀಸ್ ಠಾಣೆಯ ಎದುರು ಬಾಲಕಿಯ ಶವವಿಟ್ಟು ಪ್ರತಿಭಟನೆ ನಡೆಸಿದರು.

ಬನ್ನೇರುಘಟ್ಟ ರಸ್ತೆಯ ಕೊಳೆಗೇರಿಯ ನಿವಾಸಿಗಳಾದ ಬಾಲಕಿಯ ತಂದೆ ಇಳೈ ಮತ್ತು ತಾಯಿ ಗೀತಾ ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದಾರೆ. ಮನೆಯ ಬಡತನದ ಕಾರಣ ಮೂರು ವರ್ಷಗಳ ಹಿಂದೆ ತಮ್ಮ ಮಗಳನ್ನು ರಾಜೇಶ್ ಜೈನ್ ಅವರ ಮನೆಗೆ ಮನೆ ಕೆಲಸಕ್ಕೆಂದು ಸೇರಿಸಿದ್ದರು. ರಾಜೇಶ್ ಜೈನ್ ಅವೆನ್ಯೂ ರಸ್ತೆಯಲ್ಲಿ ಬಟ್ಟೆ ಅಂಗಡಿಯೊಂದರ ಮಾಲೀಕ.

`ಮಗಳನ್ನು ಕೆಲಸಕ್ಕೆ ಸೇರಿಸಿದಾಗ ರಾಜೇಶ್ ಜೈನ್ ಕುಟುಂಬದವರು ಹತ್ತು ಸಾವಿರ ರೂಪಾಯಿ ಕೊಟ್ಟಿದ್ದರು. ಮಗಳನ್ನು ನೋಡಲು ಹೋದಾಗ ಎರಡು ಮೂರು ಸಾವಿರ ರೂಪಾಯಿ ನೀಡುತ್ತಿದ್ದರು. ಆದರೆ ಆರು ತಿಂಗಳ ಹಿಂದೆ ಮನೆಗೆ ಭೇಟಿ ನೀಡಿದ್ದ ವೇಳೆ ಮೂವತ್ತು ಸಾವಿರ ರೂಪಾಯಿ ಹಣ ಪಡೆಯಲಾಗಿದೆ ಎಂಬ ಪತ್ರಕ್ಕೆ ನಮ್ಮಿಂದ ಸಹಿ ಹಾಕಿಸಿಕೊಂಡಿದ್ದಾರೆ~ ಎಂದು ಶ್ವೇತಾ ತಾಯಿ ಗೀತಾ `ಪ್ರಜಾವಾಣಿ~ಗೆ ತಿಳಿಸಿದರು.

`ಮನೆಯ ಮಾಲೀಕರು ಮಗಳಿಗೆ ಹೆಚ್ಚು ಹಿಂಸೆ ನೀಡುತ್ತಿದ್ದರು. ಪ್ರತಿ ಬಾರಿ ಮನೆಗೆ ಬಂದಾಗಲೂ ಆಕೆ ಕಣ್ಣೀರು ಹಾಕುತ್ತಿದ್ದಳು. ಆದರೆ ಆಕೆಯನ್ನು ಬಿಡಿಸಿಕೊಂಡು ಹೋಗಲು ನಾವು ಅಸಹಾಯಕರಾಗಿದ್ದೆವು. ಮನೆಯಲ್ಲಿ ಉಪ್ಪಿಟ್ಟು ಕದ್ದಿದ್ದಾಳೆ ಎಂಬ ಕಾರಣಕ್ಕೆ ಅವಳಿಗೆ ಚಿತ್ರ ಹಿಂಸೆ ನೀಡಿದ್ದಾರೆ. ಅವರಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಆಕೆ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದಾಳೆ. ಆಕೆಯ ಸಾವಿಗೆ ರಾಜೇಶ್ ಜೈನ್ ಕುಟುಂಬದ ಸದಸ್ಯರೇ ನೇರ ಕಾರಣ~ ಎಂದು ಅವರು ಆರೋಪಿಸಿದರು.

`ಮಗಳು ನಮ್ಮಂದಿಗೆ ಬಡತನದಲ್ಲಿ ಬೆಳೆಯುವುದಕ್ಕಿಂತಾ ಶ್ರೀಮಂತರ ಮನೆಯಲ್ಲಿ ಕೆಲಸ ಮಾಡಿಕೊಂಡಾದರೂ ಸುಖವಾಗಿರಲಿ ಎಂದು ಇವರ ಮನೆಗೆ ಸೇರಿಸಿದ್ದೆವು. ಆದರೆ ಇವರು ಇಷ್ಟರ ಮಟ್ಟಿಗೆ ಹಿಂಸೆ ನೀಡಿ ಅವಳ ಸಾವಿಗೆ ಕಾರಣರಾಗುತ್ತಾರೆ ಎಂಬುದು ಗೊತ್ತಿರಲಿಲ್ಲ~ ಎಂದು ಅವರು ಒತ್ತಾಯಿಸಿದರು.
`ಹಸಿವು ಹೆಚ್ಚಾಗಿ ಊಟ ಕದಿಯುವ ಮಟ್ಟಿಗೆ ಬಾಲಕಿಯನ್ನು ಹಿಂಸಿಸಿರುವುದು ಅಮಾನವೀಯ.
 
ಬಾಲಕಿಯ ಸಾವಿಗೆ ಕಾರಣರಾದ ರಾಜೇಶ್ ಜೈನ್ ಕುಟುಂಬ ಸದಸ್ಯರನ್ನು ಬಂಧಿಸಿ, ಕಠಿಣ ಶಿಕ್ಷೆ ವಿಧಿಸಬೇಕು~ ಎಂದು ಮನೆಗೆಲಸದವರ ಹಕ್ಕುಗಳ ರಕ್ಷಣಾ ಸಂಘಟನೆಯ ಮುಖ್ಯಸ್ಥೆ ಗೀತಾ ಮೆನನ್ ಒತ್ತಾಯಿಸಿದರು. `ಬಾಲಕಿಯ ಸಾವಿಗೆ ಕಾರಣರಾದ ಆರೋಪದ ಮೇಲೆ ಕುಟುಂಬದ ರಾಜೇಶ್ ಜೈನ್ ಮತ್ತು ಆತನ ಮಗ ಜತಿನ್ ಎಂಬುವರನ್ನು ಬಂಧಿಸಲಾಗಿದೆ. ಕುಟುಂಬದ ಇನ್ನುಳಿದ ಸದಸ್ಯರಾದ ಕಂಚನ್ ಮತ್ತು ಖುಷ್ಬು ಅವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ~ ಎಂದು ಶೇಷಾದ್ರಿಪುರ ಉಪ ವಿಭಾಗದ ಎಸಿಪಿ ಸೊಲಬೇಶ್ವರಪ್ಪ ತಿಳಿಸಿದ್ದಾರೆ.

ಬಾಲಕಿಯ ಸಾವಿಗೆ ಕಾರಣರಾದ ಎಲ್ಲರನ್ನು ಬಂಧಿಸಲಾಗುವುದು ಎಂಬ ಆಶ್ವಾಸನೆಯ ನಂತರವೂ ಪ್ರತಿಭಟನೆ ಕೈ ಬಿಡದ ಸಂಘಟನೆಗಳ ಸದಸ್ಯರನ್ನು ವಶಕ್ಕೆ ತೆಗೆದುಕೊಂಡ ಪೊಲೀಸರು ನಂತರ ಬಿಡುಗಡೆಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.