ADVERTISEMENT

ಪೊಲೀಸ್ ಸೋಗಿನಲ್ಲೇ ಆಸ್ಪತ್ರೆಯಿಂದ ಪರಾರಿಯಾಗಿದ್ದ!

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2011, 20:35 IST
Last Updated 1 ಫೆಬ್ರುವರಿ 2011, 20:35 IST

ಬೆಂಗಳೂರು: ವಿದ್ಯಾವಂತನಾಗಿ ಒಳ್ಳೆಯ ವೃತ್ತಿ ಹಿಡಿದು ಸ್ಥಿತಿವಂತನಾಗಿದ್ದರೂ ಅನಿರೀಕ್ಷಿತವಾಗಿ ಅಪರಾಧ ಜಗತ್ತಿಗೆ ಬಂದ ನಾಗೇಂದ್ರರೆಡ್ಡಿ ಪೊಲೀಸರ ಗುಂಡಿಗೆ ಬಲಿಯಾಗುವ ಮೂಲಕ ದುರಂತ ಅಂತ್ಯ ಕಂಡಿದ್ದಾನೆ.

ಮೂರ್ನಾಲ್ಕು ವರ್ಷಗಳ ಕಾಲ ಇಂಗ್ಲೆಂಡ್‌ನಲ್ಲಿ ನೆಲೆಸಿದ್ದ ಆತ ಸಾಕಷ್ಟು ಹಣ ಸಂಪಾದಿಸಿದ್ದ. ಅಲ್ಲದೇ ಸ್ನೇಹಿತ ರಾಧಾಕೃಷ್ಣ ಚೆಪೂರ್‌ನ ಜತೆ ಸೇರಿಕೊಂಡು ಇಂಗ್ಲೆಂಡ್‌ನಲ್ಲೇ ಸ್ವಂತ ಉದ್ಯಮವನ್ನು ನಡೆಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಆದರೆ ಸ್ವಲ್ಪ ಸಮಯದಲ್ಲೇ ಅವರ ನಡುವೆ ಹಣಕಾಸು ವಿಷಯವಾಗಿ ಭಿನ್ನಾಭಿಪ್ರಾಯ ಉಂಟಾಯಿತು. ಈ ಕಾರಣಕ್ಕಾಗಿ ನಾಗೇಂದ್ರರೆಡ್ಡಿ 2004ರ ಸೆ.29ರಂದು ರಾಧಾಕೃಷ್ಣನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದ. ನಂತರ ಆತನ ಶವವನ್ನು ಕತ್ತರಿಸಿ ಸೂಟ್‌ಕೇಸ್‌ನಲ್ಲಿ ತುಂಬಿ ಅದಕ್ಕೆ ಬೆಂಕಿ ಹಚ್ಚಿದ್ದ. ಈ ಸಂಬಂಧ ಸ್ಥಳೀಯ ಪೊಲೀಸರು ದೂರು ದಾಖಲಿಸಿಕೊಂಡು ಆರೋಪಿಯ ಪತ್ತೆ ಕಾರ್ಯ ಆರಂಭಿಸಿದರು. ಇದರಿಂದ ಆತಂಕಗೊಂಡ ಆತ ಭಾರತಕ್ಕೆ ಬಂದು ತಲೆಮರೆಸಿಕೊಂಡಿದ್ದ.

ಸಹೋದರಿಗಾಗಿ ಕೊಲೆ: ಆಂಧ್ರಪ್ರದೇಶದ ಕಂಪೆನಿಯೊಂದರಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದ ರಾಜೇಶ್ ಅರ್ಥಂ ಎಂಬಾತ ನಾಗೇಂದ್ರರೆಡ್ಡಿಯ ಸಹೋದರಿಯ ಬಗ್ಗೆ ಅವಾಚ್ಯವಾಗಿ ಮಾತನಾಡಿದ್ದ. ಇದರಿಂದ ಕೋಪಗೊಂಡ ಈತ, ರಾಜೇಶ್‌ನ ಕೊಲೆಗೆ ಸಂಚು ರೂಪಿಸಿದ. ಪೂರ್ವಯೋಜಿತ ಸಂಚಿನಂತೆ ಆತ ರಾಜೇಶ್‌ನನ್ನು 2005ರ ಜ.19ರಂದು ಬೆಂಗಳೂರಿನ ಬಳೇಪೇಟೆಯ ವಸತಿಗೃಹವೊಂದಕ್ಕೆ ಕರೆದುಕೊಂಡು ಬಂದು ಕಂಠಮಟ್ಟ ಮದ್ಯ ಕುಡಿಸಿ, ಕತ್ತು ಕತ್ತರಿಸಿ ಕೊಲೆ ಮಾಡಿದ್ದ.

ಪೊಲೀಸರಿಗೆ ಮೃತ ರಾಜೇಶ್‌ನ ಗುರುತು ಸಿಗದಂತೆ ಮಾಡುವ ಸಲುವಾಗಿ ನಾಗೇಂದ್ರರೆಡ್ಡಿ ಆತನ ತಲೆ ಮತ್ತು ಕೈಗಳನ್ನು ಕತ್ತರಿಸಿಕೊಂಡು ಹೋಗಿ ಮೈಸೂರು ರಸ್ತೆ ಸಮೀಪ ಎಸೆದಿದ್ದ. ಆದರೆ ಮುಂಡವನ್ನು ವಸತಿಗೃಹದಲ್ಲೇ ಬಿಟ್ಟಿದ್ದ. ಈ ಬಗ್ಗೆ ಉಪ್ಪಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೃತನ ಗುರುತು ಪತ್ತೆ ಮಾಡಿದ್ದರು. ಅಲ್ಲದೇ ನಾಗೇಂದ್ರರೆಡ್ಡಿಯನ್ನು ಬಂಧಿಸಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಿದ್ದರು.

ಅನಾರೋಗ್ಯದ ನೆಪದಲ್ಲಿ 2006ರ ಆಗಸ್ಟ್‌ನಲ್ಲಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾದ ಆತ ಕಾವಲಿಗೆ ನೇಮಿಸಲ್ಪಟ್ಟಿದ್ದ ಪೊಲೀಸ್ ಕಾನ್‌ಸ್ಟೆಬಲ್ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದ. ಪೊಲೀಸರು ಮತ್ತೊಮ್ಮೆ ಆತನನ್ನು ಬಂಧಿಸಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಿದ್ದರು. ಆದರೂ ಆತ ಜೈಲಿನಿಂದಲೇ ತನ್ನ ಸಹಚರರ ಮೂಲಕ ಅಪರಾಧ ಚಟುವಟಿಕೆಗಳನ್ನು ನಡೆಸುತ್ತಿದ್ದ. ಇದರಿಂದಾಗಿ ಪೊಲೀಸರು ಆತನನ್ನು ಬೆಳಗಾವಿಯ ಹಿಂಡಲಗಾ ಜೈಲಿಗೆ ಸ್ಥಳಾಂತರಿಸಿದ್ದರು.

ಪೊಲೀಸ್ ಸೋಗಿನಲ್ಲೇ ಪರಾರಿ: ಹಿಂಡಲಗಾ ಜೈಲಿನಲ್ಲಿ ಕೈ ಕೊಯ್ದುಕೊಂಡ ಆತನನ್ನು ಪೊಲೀಸರು ಬೆಳಗಾವಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿಂದ ತಪ್ಪಿಸಿಕೊಳ್ಳಲು ಸಂಚು ರೂಪಿಸಿದ ಆತ ಸ್ನೇಹಿತ ಉತ್ತಮ್ ಎಂಬಾತನನ್ನು 2009ರ ಮೇ 7ರಂದು ಆಸ್ಪತ್ರೆಗೆ ಕರೆಸಿಕೊಂಡ.

ನಂತರ ಅವರಿಬ್ಬರೂ ಸೇರಿಕೊಂಡು ಕಾವಲಿಗೆ ನೇಮಿಸಲ್ಪಟ್ಟಿದ್ದ ಕಾನ್‌ಸ್ಟೆಬಲ್ ಚಂದ್ರಕಾಂತ ಎಂಬುವರಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದರು. ಬಳಿಕ ನಾಗೇಂದ್ರರೆಡ್ಡಿ, ಚಂದ್ರಕಾಂತ ಅವರ ಸಮವಸ್ತ್ರಗಳನ್ನು ಧರಿಸಿ ಪೊಲೀಸರ ಸೋಗಿನಲ್ಲೇ ಆಸ್ಪತ್ರೆಯಿಂದ ಪರಾರಿಯಾಗಿದ್ದ. ರಾಧಾಕೃಷ್ಣ ಚೆಪೂರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗೇಂದ್ರರೆಡ್ಡಿಯ ಬಂಧನಕ್ಕಾಗಿ ಇಂಟರ್‌ಪೋಲ್ ಪೊಲೀಸರು ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಿದ್ದರು. ಒಡಿಶಾದ ಕೆಲ ನಕ್ಸಲ್ ಮುಖಂಡರೊಂದಿಗೂ ಆತ ಸಂಪರ್ಕ ಇಟ್ಟುಕೊಂಡಿದ್ದ. ರೌಡಿ ಸೈಲೆಂಟ್ ಸುನೀಲ ಸೇರಿದಂತೆ ನಗರದ ಹಲವು ರೌಡಿಗಳ ಜತೆಯೂ ನಾಗೇಂದ್ರ ನಂಟು ಇಟ್ಟುಕೊಂಡಿದ್ದ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.