ಬೆಂಗಳೂರು: ವ್ಹೀಲಿಂಗ್ (ಬೈಕ್ನ ಒಂದು ಚಕ್ರವನ್ನು ಮೇಲಕ್ಕೆ ಎತ್ತಿ ವಾಹನ ಚಾಲನೆ ಮಾಡುವುದು) ಪ್ರಕರಣಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕಠಿಣ ಕ್ರಮಕ್ಕೆ ಮುಂದಾಗಿರುವ ನಗರ ಪೊಲೀಸರು ವ್ಹೀಲಿಂಗ್ ಮಾಡುವ 18 ವರ್ಷಕ್ಕಿಂತ ಕಿರಿಯ ಬೈಕ್ ಸವಾರರ ಪೋಷಕರ ವಿರುದ್ಧವೂ ಪ್ರಕರಣ ದಾಖಲಿಸಲು ನಿರ್ಧರಿಸಿದ್ದಾರೆ.
‘ವ್ಹೀಲಿಂಗ್ ಅಥವಾ ಡ್ರ್ಯಾಗ್ ರೇಸ್ ಪ್ರಕರಣಗಳನ್ನು ನಿಯಂತ್ರಿಸಲು ಮತ್ತು ಇತರೆ ವಾಹನ ಸವಾರರ ಸುರಕ್ಷತೆ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ನಗರದ ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಬಿ.ದಯಾನಂದ ‘ಪ್ರಜಾವಾಣಿ’ಗೆ ತಿಳಿಸಿದರು.
‘ಸಾರ್ವಜನಿಕ ರಸ್ತೆಯಲ್ಲಿ ವ್ಹೀಲಿಂಗ್ ಅಥವಾ ಡ್ರ್ಯಾಗ್ ರೇಸ್ ಮಾಡುವುದನ್ನು ಭಾರತೀಯ ಮೋಟಾರು ವಾಹನ ಕಾಯ್ದೆಯಡಿ ನಿರ್ಬಂಧಿಸಲಾಗಿದೆ. ಅಲ್ಲದೇ, ಕಾಯ್ದೆಯ ಸೆಕ್ಷನ್ ನಾಲ್ಕು ಮತ್ತು ಐದರ ಅನ್ವಯ ವ್ಹೀಲಿಂಗ್ ಅಥವಾ ಡ್ರ್ಯಾಗ್ ರೇಸ್ ಮಾಡುವ 18 ವರ್ಷಕ್ಕಿಂತ ಕೆಳಗಿನ ವಯೋಮಾನದ ಬೈಕ್ ಸವಾರರ ಪೋಷಕರ ಮೇಲೂ ಪ್ರಕರಣ ದಾಖಲಿಸಬಹುದು. ಆ ಸೆಕ್ಷನ್ಗಳನ್ನು ಆಧರಿಸಿ ಇನ್ನು ಮುಂದೆ ಪೋಷಕರ ವಿರುದ್ಧವೂ ಪ್ರಕರಣ ದಾಖಲಿಸುತ್ತೇವೆ’ ಎಂದು ಹೇಳಿದ್ದಾರೆ.
ವ್ಹೀಲಿಂಗ್ ಅಥವಾ ಡ್ರ್ಯಾಗ್ ರೇಸ್ ಮಾಡುವವರ ಮೇಲೆ ಪ್ರಕರಣ ದಾಖಲಿಸುವುದರ ಜತೆಗೆ ಅವರ ವಾಹನವನ್ನು ಜಪ್ತಿ ಮಾಡಿ ನ್ಯಾಯಾಲಯದ ವಶಕ್ಕೆ ಒಪ್ಪಿಸುತ್ತೇವೆ. ಅಲ್ಲದೇ, ಅವರ ಚಾಲನಾ ಪರವಾನಗಿಯನ್ನು (ಡಿ.ಎಲ್) ಮುಟ್ಟುಗೋಲು ಹಾಕಿಕೊಳ್ಳುವಂತೆ ಸಾರಿಗೆ ಇಲಾಖೆಗೆ ವರದಿ ಕಳುಹಿಸುತ್ತೇವೆ ಎಂದು ಮಾಹಿತಿ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.