ಬೆಂಗಳೂರು: ‘ಪ್ರಕೃತಿ ಹಾಗೂ ಸಮುದಾಯದ ನಡುವೆ ಸಂಬಂಧವನ್ನು ಬೆಸೆಯುವ ನಿಟ್ಟಿನಲ್ಲಿ ಪ್ರಗತಿಯ ಪಥ ಸಾಗಬೇಕು’ ಎಂದು ಸಮಾಜ ಪರಿವರ್ತನ ಸಮುದಾಯ ಅಧ್ಯಕ್ಷ ಎಸ್.ಆರ್.ಹಿರೇಮಠ ತಿಳಿಸಿದರು.
ಕರ್ನಾಟಕ ಸ್ವಾಭಿಮಾನಿ ವೇದಿಕೆಯು ಅನಿಕೇತನ ಕನ್ನಡ ಬಳಗದ ಸಹಯೋಗದೊಂದಿಗೆ ನಗರದಲ್ಲಿ ಶನಿವಾರ ಆಯೋಜಿಸಿದ್ದ ‘ಸಮಾಜ ಪರಿವರ್ತನೆ ಮತ್ತು ನಮ್ಮ ಕರ್ತವ್ಯ’ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
‘ಪರಿವರ್ತನೆಯೆಂಬುದನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಕಾರ್ಯಪ್ರವೃತ್ತರಾದಾಗ ಮಾತ್ರ ಸಮಾಜದಲ್ಲಿ ಬದಲಾವಣೆ ಕಾಣಲು ಸಾಧ್ಯ’ ಎಂದು ಅಭಿಪ್ರಾಯಪಟ್ಟರು.
‘ಬಾಲ್ಯದಲ್ಲಿ ಶರಣ ಸಂಸ್ಕೃತಿಯ ವಿಚಾರಧಾರೆಯಿಂದ ಪ್ರಭಾವಿತನಾಗಿದ್ದೆ. ಆರಂಭದಿಂದಲೂ ಪ್ರತಿಭಟನೆ ಬಗ್ಗೆ ಸ್ಪಷ್ಟ ಕಲ್ಪನೆಯಿತ್ತು. ಕಲ್ಲು ತೂರಾಟ, ದೊಂಬಿಗಳಿಂದ ಸಾರ್ವಜನಿಕ ಆಸ್ತಿ ಪಾಸ್ತಿ ಹಾನಿಯಾಗುತ್ತದೆ ಹೊರತು ಬದಲಾವಣೆ ಕಾಣಲು ಸಾಧ್ಯವಿಲ್ಲ’ ಎಂದು ಹೇಳಿದರು.
‘ರಾಜಕೀಯ ಹಾಗೂ ಸಾಮಾಜಿಕ ಸಮಾನತೆ ಗಳಿಸಲು ಇನ್ನೂ ಸಾಧ್ಯವಾಗಿಲ್ಲ. ಡಿ.ಕೆ. ಶಿವಕುಮಾರ್, ಬಿ.ಎಸ್.ಯಡಿಯೂರಪ್ಪ, ಎಸ್.ಎಂ.ಕೃಷ್ಣ ಅವರಂತಹ ಭ್ರಷ್ಟರು ರಾಜಕೀಯದಲ್ಲಿ ಇರುವುದರಿಂದ ಪ್ರಜಾಪ್ರಭುತ್ವದ ಆಶಯಗಳಿಗೆ ಧಕ್ಕೆಯಾಗಿದೆ’ ಎಂದು ಟೀಕಿಸಿದರು.
ರೌಡಿ ಸಹಚರರು ರಾಜಕೀಯ ಮುಖಂಡರು!: ‘ಕೊತ್ವಾಲ್ ರಾಮಚಂದ್ರ ಅವರ ಹೋಟೆಲ್ನಲ್ಲಿ ಚಹಾ ಮಾರುತ್ತಿದ್ದ, ಅಂದಿನ ಭೂಗತ ಪಾತಕಿಗಳ ಸಹಚರರಾಗಿದ್ದವರು ಇಂದು ಸಚಿವರಾಗಿದ್ದಾರೆ. ಇದು ಪ್ರಜಾಪ್ರಭುತ್ವದ ಅಣಕ’ ಎಂದು ವ್ಯಂಗ್ಯವಾಡಿದರು.
‘ಜಾತಿ ವ್ಯವಸ್ಥೆಯನ್ನು ಬೇರು ಸಮೇತ ಕಿತ್ತೊಗೆಯಬೇಕು. ವಾಣಿಜ್ಯೀಕರಣಗೊಂಡ ಶಿಕ್ಷಣ ವ್ಯವಸ್ಥೆಯನ್ನು ಬದಲಾಯಿಸುವ ಮೂಲಕ ಅಭೂತಪೂರ್ವ ಪರಿವರ್ತನೆ ಸಾಧ್ಯವಿದೆ’ ಎಂದರು.
ಎಚ್.ಎಸ್. ದೊರೆಸ್ವಾಮಿ, ‘ತಪ್ಪು ಮಾಡುವ ಭ್ರಷ್ಟ ರಾಜಕಾರಣಿ, ಅಧಿಕಾರಿಗಳನ್ನು ಪ್ರಶ್ನಿಸಿ, ಬುದ್ಧಿ ಕಲಿಸದ ಹೊರತು ವ್ಯವಸ್ಥೆಯನ್ನು ಸರಿಪಡಿಸಲು ಸಾಧ್ಯವಿಲ್ಲ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.