ADVERTISEMENT

ಪ್ರತ್ಯೇಕ ಘಟನೆ: ಟೆಕ್ಕಿ ಸೇರಿ ಮೂವರ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2011, 19:45 IST
Last Updated 17 ಏಪ್ರಿಲ್ 2011, 19:45 IST

ಬೆಂಗಳೂರು: ವೃತ್ತಿಯಲ್ಲಿ ಯಶಸ್ಸು ಸಿಗಲಿಲ್ಲ ಎಂದು ಮನನೊಂದ ಸಾಫ್ಟ್‌ವೇರ್ ಎಂಜಿನಿಯರ್ ಪ್ರಭಾಕರ್ (31) ಎಂಬುವರು ಎಚ್‌ಎಸ್‌ಆರ್ ಲೇಔಟ್ ಸಮೀಪದ ಕೈಕೊಂಡನಹಳ್ಳಿ ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಶನಿವಾರ ಮಧ್ಯರಾತ್ರಿ ನಡೆದಿದೆ.

ಚೆನ್ನೈ ಮೂಲದ ಪ್ರಭಾಕರ್ ಎಚ್‌ಎಎಲ್ ಏರ್‌ಪೋರ್ಟ್ ರಸ್ತೆಯಲ್ಲಿರುವ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಕೈಕೊಂಡನಹಳ್ಳಿಯಲ್ಲಿ ಅವರು ನೆಲೆಸಿದ್ದರು.
ಮಧ್ಯರಾತ್ರಿ ಹನ್ನೆರಡು ಗಂಟೆ ಸುಮಾರಿಗೆ ಅವರು ಹರಿತವಾದ ಆಯುಧದಿಂದ ಕೈ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ನೋವು ತಾಳಲಾರದ ಅವರು ಮನೆಯ ಸಮೀಪವೇ ಇರುವ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಭಾಕರ್ ಅವರು ಕೈ ಕೊಯ್ದುಕೊಂಡು ಮನೆಯಿಂದ ಹೊರಗೆ ಹೋಗಿದ್ದನ್ನು ಸೆಕ್ಯುರಿಟಿ ಗಾರ್ಡ್ ಒಬ್ಬರು ನೋಡಿದ್ದಾರೆ. ಆಸ್ಪತ್ರೆಗೆ ಹೋಗುತ್ತಿರಬಹುದು ಎಂದು ಭಾವಿಸಿ ಸುಮ್ಮನಾಗಿದ್ದಾರೆ. ಸೆಕ್ಯುರಿಟಿಗಾರ್ಡ್‌ನಿಂದ ವಿಷಯ ತಿಳಿದುಕೊಂಡ ಪ್ರಭಾಕರ್ ಅವರ ಸ್ನೇಹಿತರು ಮೊಬೈಲ್ ಫೋನ್ ಮೂಲಕ ಅವರನ್ನು ಸಂಪರ್ಕಿಸಲು ಯತ್ನಿಸಿದರೂ ಸಾಧ್ಯವಾಗಿಲ್ಲ. ಆ ನಂತರ ಅವರು ನಮಗೆ ಮಾಹಿತಿ ನೀಡಿದರು. ಬೆಳಿಗ್ಗೆ ಅವರ ಶವ ಕೆರೆಯ ಸಮೀಪ ಪತ್ತೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪತ್ರ ಬರೆದಿಟ್ಟಿರುವ ಪ್ರಭಾಕರ್ ‘ನಾನು ವೃತ್ತಿಯಲ್ಲಿ ಯಶಸ್ಸು ಸಾಧಿಸಲಿಲ್ಲ’ ಎಂದು ತಿಳಿಸಿದ್ದಾರೆ. ಎಚ್‌ಎಸ್‌ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಯುವಕನ ಆತ್ಮಹತ್ಯೆ: ಬಿಹಾರ ಮೂಲದ ಹಿಮತ್ ಸಿಂಗ್ (23) ಎಂಬುವರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಎಂಎಸ್‌ಆರ್ ನಗರದಲ್ಲಿ ಶನಿವಾರ ರಾತ್ರಿ ನಡೆದಿದೆ. ಕಂಪ್ಯೂಟರ್ ನೆಟ್‌ವರ್ಕಿಂಗ್ ಕೋರ್ಸ್ ಪೂರೈಸಿದ್ದ ಹಿಮತ್ ಅವರು ಕೆಲಸ ಹುಡುಕುತ್ತಿದ್ದರು. ಖಾಸಗಿ ವಿದ್ಯಾರ್ಥಿ ನಿಲಯದಲ್ಲಿ ಅವರು

ಉಳಿದುಕೊಂಡಿದ್ದರು. ರಾತ್ರಿ ಅವರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಳಿಗ್ಗೆ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೆಲಸ ಸಿಗಲಿಲ್ಲ ಎಂದು ಅಥವಾ ಪ್ರೇಮ ವೈಫಲ್ಯದ ಹಿನ್ನೆಲೆಯಲ್ಲಿ ಅವರು ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಸಂಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಿಳೆ ಆತ್ಮಹತ್ಯೆ: ಮಹಿಳೆಯೊಬ್ಬರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಎಚ್‌ಎಸ್‌ಆರ್ ಲೇಔಟ್‌ನ ಪರಂಗಿಪಾಳ್ಯದಲ್ಲಿ ಶನಿವಾರ ರಾತ್ರಿ ನಡೆದಿದೆ. ಮುನಿಯಮ್ಮ (38) ಮೃತಪಟ್ಟವರು. ಕೂಲಿ ಕೆಲಸ ಮಾಡುತ್ತಿದ್ದ ಅವರು ಮೈಮೇಲೆ ಸೀಮೆ ಎಣ್ಣೆ ಸುರಿದುಕೊಂಡು ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆಗೆ ಕಾರಣ ಗೊತ್ತಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಎಚ್‌ಎಸ್‌ಆರ್ ಲೇಔಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.