ADVERTISEMENT

ಪ್ರತ್ಯೇಕ ಶ್ರೇಣಿ ಅಧಿಕಾರಿಗಳ ನೇಮಕಕ್ಕೆ ಒತ್ತಾಯ

ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಇಲಾಖೆ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2014, 19:30 IST
Last Updated 28 ಫೆಬ್ರುವರಿ 2014, 19:30 IST
ಕಾರಿಥಾಸ್‌ ಇಂಡಿಯಾ, ಕ್ರಾಸ್‌ ಬೆಂಗಳೂರು ಹಾಗೂ ಜನವಿಕಾಸ  ಕರ್ನಾಟಕ ಸಂಸ್ಥೆಗಳ ಸಹಯೋಗದಲ್ಲಿ ಶುಕ್ರವಾರ  ನಗರದಲ್ಲಿ ಆಯೋಜಿಸಿದ್ದ ‘ಕರ್ನಾಟಕ ಪಂಚಾಯತ್‌ ರಾಜ್‌ ಸಬಲೀಕರಣ’ ಚಿಂತನಾ ಸಮಾವೇಶದಲ್ಲಿ ಆರ್ಚ್‌ ಬಿಷಪ್‌ ಡಾ. ಬರ್ನಾಡ್‌ ಮೋರಸ್‌ ಅವರು ‘ಪಂಚಾಯಿತಿ ರಾಜ್‌’ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಕ್ರಾಸ್‌ ಸಂಸ್ಥೆಯ ಅಧ್ಯಕ್ಷ ಜೆರಾಲ್ಡ್‌ ಐಸಾಕ್‌ ಲೋಬೊ ಅವರಿಗೆ ನೀಡಿದರು. ಕಾರ್ಟಿಯಾಸ್‌ ಇಂಡಿಯಾ ನಿರ್ದೇಶಕ ಫೆಡ್ರಿಕ್ ಡಿಸೋಜಾ, ಮಾಜಿ ಸಚಿವ ಜೆ.ಅಲೆಕ್ಸಾಂಡರ್‌, ಬಳ್ಳಾರಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ವೆಂಕಟರಾವ್‌ ಘೋರ್ಪಡೆ ಭಾಗವಹಿಸಿದ್ದರು	– ಪ್ರಜಾವಾಣಿ ಚಿತ್ರ

ಬೆಂಗಳೂರು: ‘ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಇಲಾಖೆಗೆ ಪ್ರತ್ಯೇಕ ಶ್ರೇಣಿಯ ಅಧಿಕಾರಿ­ಗಳನ್ನು ನೇಮಕ ಮಾಡಬೇಕು. ಅವರಿಗೆ 2 ವರ್ಷಗಳ ಸೂಕ್ತ ತರಬೇತಿ ನೀಡಬೇಕು’ ಎಂದು ಬಳ್ಳಾರಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ವೆಂಕಟ­ರಾವ್‌ ಘೋರ್ಪಡೆ ಹೇಳಿದರು.

ಕಾರಿಥಾಸ್‌ ಇಂಡಿಯಾ, ಕ್ರಾಸ್‌ ಬೆಂಗಳೂರು ಹಾಗೂ ಜನವಿಕಾಸ  ಕರ್ನಾಟಕ ಸಂಸ್ಥೆಗಳ ಸಹಯೋಗದಲ್ಲಿ ಶುಕ್ರವಾರ  ನಗರದಲ್ಲಿ ಆಯೋಜಿಸಿದ್ದ ‘ಕರ್ನಾಟಕ ಪಂಚಾಯತ್‌ ರಾಜ್‌ ಸಬಲೀಕರಣ’ ಚಿಂತನಾ ಸಮಾವೇಶ­ದಲ್ಲಿ ಅವರು ಮಾತ­ನಾಡಿದರು.

‘ರಾಜ್ಯದಲ್ಲಿ 5,773 ಗ್ರಾಮ ಪಂಚಾಯಿತಿಗಳಿದ್ದರೂ, 97 ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯದರ್ಶಿಗಳೇ ಇಲ್ಲ. ಇರುವ ಕಾರ್ಯದರ್ಶಿಗಳು 2–3 ಗ್ರಾಮ ಪಂಚಾಯಿತಿಗಳ ಹೊಣೆ ಹೊತ್ತಿರುವುದರಿಂದ ಅವರಿಗೆ ಸೂಕ್ತ ಮಾಹಿತಿಯೇ ಇರುವುದಿಲ್ಲ’ ಎಂದರು.

‘ಗ್ರಾಮ ಪಂಚಾಯಿತಿಗೆ ನೇಮಕ ಮಾಡುವ ಅಧಿಕಾರಿಗಳಿಗೆ 2 ವರ್ಷಗಳ ಸೂಕ್ತ ತರಬೇತಿ ನೀಡಬೇಕು. ನಂತರವಷ್ಟೇ ಕಾರ್ಯದರ್ಶಿಯಾಗಿ ನೇಮಕ ಮಾಡಬೇಕು. ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಮೀಸಲಾತಿ ಪ್ರಮಾಣವನ್ನು 10 ವರ್ಷಗಳವರೆಗೆ ಹೆಚ್ಚಿಸಬೇಕು. ಅವರ ಅಧಿಕಾರ ಅವಧಿಯನ್ನು  29 ತಿಂಗಳಿನಿಂದ 60 ತಿಂಗಳವರೆಗೆ ಏರಿಸಬೇಕು’ ಎಂದು ಅವರು ಹೇಳಿದರು.

‘ಸರ್ಕಾರವು ತನ್ನ  ಬಜೆಟ್‌ನಲ್ಲಿ ಗ್ರಾಮ ಪಂಚಾಯಿತಿಗಳಿಗೆ ಶೇ 3 ರಷ್ಟಾ­ದರೂ ಅನುದಾನವನ್ನು ತೆಗೆದಿರಿ­ಸಬೇಕು. ಈ ಮೂಲಕ ಸ್ಥಳೀಯ ಸಂಸ್ಥೆಗಳ ಬಲಪಡಿಸುವಿಕೆಗೆ ಕ್ರಮ ಕೈಗೊಳ್ಳಬೇಕು’ ಎಂದರು.

ಉಡುಪಿ ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ಹಾಗೂ ಕ್ರಾಸ್‌ ಸಂಸ್ಥೆಯ ಅಧ್ಯಕ್ಷ ಜೆರಾಲ್ಡ್‌ ಐಸಾಕ್‌ ಲೋಬೊ ಮಾತನಾಡಿ, ‘ಸಾಮಾಜಿಕ ಬದಲಾವಣೆಗೆ ಕೆಲವು ಕಾನೂನುಗಳಲ್ಲಿ ತಿದ್ದುಪಡಿ ತರುವ ಅಗತ್ಯವಿದ್ದು, ಗ್ರಾಮೀಣ ಜನರ ಜೀವನ ಮಟ್ಟ ಸುಧಾರಿಸಲು ಸ್ಥಳೀಯ ಸಂಸ್ಥೆಗಳನ್ನು ಬಲಪಡಿಸಬೇಕಾಗಿದೆ’ ಎಂದು ಹೇಳಿದರು.

‘ಪಂಚಾಯತ್‌ ರಾಜ್ ವ್ಯವಸ್ಥೆಯಲ್ಲಿ ಸೂಕ್ತ ಬದಲಾವಣೆ ತಂದು, ನಗರ ಮತ್ತು ಪಟ್ಟಣ ಪ್ರದೇಶದ ಜನರಿಗಿರುವ ಸೌಲಭ್ಯಗಳು, ಸೌಕರ್ಯಗಳು ಗ್ರಾಮೀಣ ಮಟ್ಟದ ಜನರಿಗೂ ದೊರೆಯು­ವಂತಾಗಬೇಕು’ ಎಂದು ಆಶಯ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವ ಜೆ.ಅಲೆಕ್ಸಾಂಡರ್‌, ಕಾರಿಥಾಸ್‌ ಇಂಡಿಯಾ ದಕ್ಷಿಣ ವಲಯದ ವ್ಯವಸ್ಥಾಪಕ ಜಿಮ್ಮಿ ಮ್ಯಾಥ್ಯು ಮತ್ತಿತರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.