ADVERTISEMENT

ಪ್ರಯಾಣಿಕರಿಲ್ಲದೆ ‘ಬಸವೇಶ್ವರ ನಿಲ್ದಾಣ’ ಭಣ ಭಣ

ಸಂತೋಷ ಜಿಗಳಿಕೊಪ್ಪ
Published 15 ಏಪ್ರಿಲ್ 2018, 19:30 IST
Last Updated 15 ಏಪ್ರಿಲ್ 2018, 19:30 IST
ಬಸವೇಶ್ವರ ನಿಲ್ದಾಣ
ಬಸವೇಶ್ವರ ನಿಲ್ದಾಣ   

ಬೆಂಗಳೂರು: ಪೀಣ್ಯದಲ್ಲಿ ನಿರ್ಮಿಸಿರುವ ಕೆಎಸ್‌ಆರ್‌ಟಿಸಿಯ ಬಸವೇಶ್ವರ ನಿಲ್ದಾಣದಿಂದ 60 ಮಾರ್ಗಗಳ ಬಸ್‌ಗಳು ಸಂಚಾರ ಆರಂಭಿಸಿದ್ದು, ಪ್ರಯಾಣಿಕರು ಮಾತ್ರ ನಿಲ್ದಾಣದತ್ತ ಮುಖ ಮಾಡುತ್ತಿಲ್ಲ.

ನಗರದಲ್ಲಿಯ ವಾಹನಗಳ ದಟ್ಟಣೆ ತಗ್ಗಿಸುವ ಉದ್ದೇಶದಿಂದ ಮೆಜೆಸ್ಟಿಕ್‌ ನಿಲ್ದಾಣಕ್ಕೆ ಪರ್ಯಾಯವಾಗಿ 2014ರಲ್ಲಿ ಬಸವೇಶ್ವರ ನಿಲ್ದಾಣ ನಿರ್ಮಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ–4 ಹಾದುಹೋಗುವ ಪೀಣ್ಯ ಇಂಡಸ್ಟ್ರಿಯ ಮುಖ್ಯರಸ್ತೆಯಿಂದ 1 ಕಿ.ಮೀ ದೂರವಿರುವ ನಿಲ್ದಾಣಕ್ಕೆ ಬರಲು ಮೊದಲಿನಿಂದಲೂ ಪ್ರಯಾಣಿಕರು ಹಿಂದೇಟು ಹಾಕುತ್ತಿದ್ದಾರೆ. ಪ್ರಯಾಣಿಕರನ್ನು ಸೆಳೆಯುವುದಕ್ಕಾಗಿ ನಿಲ್ದಾಣದಿಂದಲೇ ರಾಜ್ಯದ ಎಲ್ಲ ನಗರಗಳಿಗೂ ಏ. 12ರಿಂದ ಬಸ್‌ಗಳನ್ನು ಬಿಡಲಾಗುತ್ತಿದೆ.

ನಿಲ್ದಾಣದ ವಾಸ್ತವ ಸ್ಥಿತಿ ತಿಳಿಯಲೆಂದು ಶನಿವಾರ ಹಾಗೂ ಭಾನುವಾರ ನಿಲ್ದಾಣಕ್ಕೆ ಭೇಟಿ ನೀಡಿದಾಗ, ಅಲ್ಲೊಬ್ಬ ಇಲ್ಲೊಬ್ಬ ಪ್ರಯಾಣಿಕರಷ್ಟೇ ನೋಡಲು ಸಿಕ್ಕರು. ನಿಲ್ದಾಣದಿಂದ ಹೊರಡುತ್ತಿದ್ದ ಬಸ್‌ಗಳ ಬಹುತೇಕ ಸೀಟುಗಳು ಖಾಲಿ ಇದ್ದದ್ದು ಕಂಡುಬಂತು.

ADVERTISEMENT

ನಮ್ಮ ಜತೆ ಮಾತಿಗಿಳಿದ ನಿಲ್ದಾಣದ ಅಧಿಕಾರಿಯೊಬ್ಬರು, ‘ಮೆಜೆಸ್ಟಿಕ್‌ನಿಂದ ಹೊರಡುವ ಬಸ್ಸಿಗಳಿಗಿಂತ, ಬಸವೇಶ್ವರ ನಿಲ್ದಾಣದಿಂದ ಹೊರಡುವ ಬಸ್‌ಗಳ ಟಿಕೆಟ್‌ ದರ ₹10ರಿಂದ ₹15 ಕಡಿಮೆ. ಶನಿವಾರ ಬೆಳಿಗ್ಗೆಯಿಂದ ರಾತ್ರಿಯವರೆಗೆ ನಿಲ್ದಾಣಕ್ಕೆ ಕೇವಲ 20 ಮಂದಿ ಬಂದಿದ್ದರು’ ಎಂದರು.

ನಿತ್ಯವೂ 680 ಬಸ್‌ಗಳು ನಿಲ್ದಾಣಕ್ಕೆ ಬಂದು ಹೋಗುತ್ತಿವೆ. ನಿಲ್ದಾಣಕ್ಕೆ ಬಾರದ ಬಸ್ಸಿನ ಚಾಲಕರು ಹಾಗೂ ನಿರ್ವಾಹಕರಿಗೆ ನೋಟಿಸ್‌ ನೀಡುತ್ತಿದ್ದೇವೆ. ಅಂಥ ಬಸ್‌ಗಳ ಪತ್ತೆಗೆಂದು ಪ್ರತ್ಯೇಕ ತಂಡಗಳು ಯಶವಂತಪುರ, ಮೆಜೆಸ್ಟಿಕ್‌ನಲ್ಲಿ ತಪಾಸಣೆ ಮಾಡುತ್ತಿವೆ ಎಂದರು.

ಮೂರು ಅಂತಸ್ತಿನ ನಿಲ್ದಾಣದ ನೆಲ ಮಹಡಿಯ ಪ್ಲಾಟ್‌ಫಾರಂನಿಂದ ಉತ್ತರ ಕರ್ನಾಟಕದ ಬೆಳಗಾವಿ, ಹುಬ್ಬಳ್ಳಿ ಕಲಬುರ್ಗಿ, ಬಳ್ಳಾರಿ ಹಾಗೂ ಇತರೆ ನಗರಗಳಿಗೆ ಬಸ್‌ಗಳು ಹೊರಡುತ್ತವೆ. ಎರಡನೇ ಮಹಡಿಯಲ್ಲಿ ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಮಂಗಳೂರು, ಧರ್ಮಸ್ಥಳ, ತಿರುಪತಿ ಹಾಗೂ ಇತರೆ ಮಾರ್ಗದ ಬಸ್‌ಗಳು ನಿಲ್ಲುತ್ತವೆ. ಮೂರನೇ ಮಹಡಿಯಲ್ಲಿ ವಸತಿಗೃಹ, ಹೋಟೆಲ್‌ ಹಾಗೂ ಅಂಗಡಿಗಳು ಇವೆ. ಗಂಗಮ್ಮನಗುಡಿ ಹೊರ ಠಾಣೆ ಇದೆ. ಸುಸಜ್ಜಿತ ಆಸನ ವ್ಯವಸ್ಥೆ, ಲಿಫ್ಟ್‌, ಕುಡಿಯುವ ನೀರು, ಶೌಚಾಲಯ, ಭದ್ರತೆ, ವೈಫೈ... ಹೀಗೆ ಸಕಲ ಸೌಲಭ್ಯವನ್ನು ನಿಲ್ದಾಣ ಹೊಂದಿದೆ. ಈ ಸೌಲಭ್ಯ ಬಳಸಲು ಪ್ರಯಾಣಿಕರಿಲ್ಲದಿರುವುದು ಚಿಂತೆಗೀಡು ಮಾಡಿದೆ ಎಂದು ಅಧಿಕಾರಿ ಬೇಸರ ವ್ಯಕ್ತಪಡಿಸಿದರು.

ಶಿವಮೊಗ್ಗ ಮಾರ್ಗದ ಬಸ್ಸಿನ ನಿರ್ವಾಹಕ, ‘ಮೆಜೆಸ್ಟಿಕ್‌ನಿಂದ ಬಸ್ ಸಂಚರಿಸುತ್ತಿದ್ದ ವೇಳೆ ₹10,000 ಸಂಗ್ರಹವಾಗುತ್ತಿತ್ತು. ಈಗ ಪೀಣ್ಯದ ನಿಲ್ದಾಣದಿಂದ ಶಿವಮೊಗ್ಗಕ್ಕೆ ಹೋಗುತ್ತಿದ್ದೇವೆ. ₹3,000 ಸಂಗ್ರಹವಾಗುವುದು ಕಷ್ಟ.ಕೆಎಸ್‌ಆರ್‌ಟಿಸಿ ಬಸ್‌ಗಳೆಲ್ಲವೂ ಈ ನಿಲ್ದಾಣಕ್ಕೆ ಬಂದು ಹೋಗಬೇಕೆಂದು ನಿಯಮ ಮಾಡಲಾಗಿದೆ. ಇದು ಪ್ರಯಾಣಿಕರನ್ನು ಹತ್ತಿಸಿಕೊಳ್ಳುವ ಪಾಯಿಂಟ್‌ ಆಗಿಲ್ಲ’ ಎಂದರು.

ಹೊರ ರಾಜ್ಯ ಮಾರ್ಗದಿಂದ ಆದಾಯ: ಬಸವೇಶ್ವರ ನಿಲ್ದಾಣದ ಸುತ್ತಮುತ್ತ ಕೇರಳ ಹಾಗೂ ತಮಿಳುನಾಡಿನ ಜನ ಹೆಚ್ಚಿನ ಸಂಖ್ಯೆಯಲ್ಲಿ ವಾಸವಿದ್ದಾರೆ. ಅವರೆಲ್ಲರಿಗೂ ಈ ನಿಲ್ದಾಣ ಅನುಕೂಲವಾಗಿದೆ. ನಿಲ್ದಾಣದಿಂದ ಕೇರಳ ಹಾಗೂ ತಮಿಳುನಾಡು ಬಸ್‌ಗಳ ಆದಾಯ ಉತ್ತಮವಾಗಿದೆ.

‘ಕೇರಳ ಸಾರಿಗೆ ನಿಗಮದ ಬಸ್‌ಗಳನ್ನು ನಿಲ್ಲಿಸಲು ಅವಕಾಶವಿದೆ. ಕೆಎಸ್‌ಆರ್‌ಟಿಸಿಯ ಬಸ್ಸುಗಳೇ ತಮಿಳುನಾಡಿಗೆ ಸಂಚರಿಸುತ್ತವೆ. ಇಂಥ ಬಸ್‌ಗಳಲ್ಲಿ ಪ್ರಯಾಣಿಸುವ ಶೇ 25ರಷ್ಟು ಪ್ರಯಾಣಿಕರು ಇದೇ ನಿಲ್ದಾಣದಲ್ಲೇ ಹತ್ತಿಕೊಳ್ಳುತ್ತಿದ್ದಾರೆ’ ಎಂದು ಚಾಲಕ ಬಸವರಾಜ ಹೇಳಿದರು.

ಉಚಿತ ಸಾರಿಗೆಗೆ ಸಿಗದ ಸ್ಪಂದನೆ: ಜಾಲಹಳ್ಳಿ ಕ್ರಾಸ್‌ ಹಾಗೂ ಪೀಣ್ಯ ಇಂಡಸ್ಟ್ರಿಯಿಂದ ನಿಲ್ದಾಣಕ್ಕೆ ಬರುವ ಪ್ರಯಾಣಿಕರ ಅನುಕೂಲಕ್ಕಾಗಿ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಅದಕ್ಕೂ ಸ್ಪಂದನೆ ಸಿಗುತ್ತಿಲ್ಲ.

‘ಉಚಿತ ಸಾರಿಗೆ ಮಾರ್ಗದಲ್ಲಿ 20 ಟ್ರಿಫ್‌ ಬಸ್‌ ಓಡಿಸುತ್ತೇವೆ. ಯಾರೊಬ್ಬರೂ ಹತ್ತುತ್ತಿಲ್ಲ. ಏ. 12ರಿಂದಲೂ ಇದೇ ಸ್ಥಿತಿ ಇದೆ’ ಎಂದು ಚಾಲಕರೊಬ್ಬರು ಹೇಳಿದರು.

ಪ್ರಯಾಣಿಕರಿಗೆ ಕಷ್ಟ
ನಿಲ್ದಾಣಕ್ಕೆ ಬಂದಿಳಿಯುವ ಹಾಗೂ ಇಲ್ಲಿಂದ ಬಸ್‌ ಹತ್ತುವ ಪ್ರಯಾಣಿಕರಿಗೆ ಕಷ್ಟಗಳೇ ಹೆಚ್ಚು. ಹೀಗಾಗಿ ಬಹುಪಾಲು ಪ್ರಯಾಣಿಕರು ನಿಲ್ದಾಣಕ್ಕೆ ಬರುತ್ತಿಲ್ಲ.

ಮೆಜೆಸ್ಟಿಕ್‌ಗೆ ಬರುವ ಪ್ರಯಾಣಿಕರು, ಮನೆಗಳನ್ನು ತಲುಪಲು ಮೆಟ್ರೊ, ಬಿಎಂಟಿಸಿ ಬಸ್‌ ಹಾಗೂ ಆಟೊ ವ್ಯವಸ್ಥೆ ಇದೆ. ಪೀಣ್ಯದ ನಿಲ್ದಾಣದಲ್ಲಿ ಇಳಿಯುವ ಪ್ರಯಾಣಿಕರು, 1 ಕಿ.ಮೀ ದೂರದಲ್ಲಿರುವ ಪೀಣ್ಯ ಇಂಡಸ್ಟ್ರೀ ಅಥವಾ 1.5 ಕಿ.ಮೀ ದೂರದಲ್ಲಿರುವ ಜಾಲಹಳ್ಳಿ ಮೆಟ್ರೊ ನಿಲ್ದಾಣಕ್ಕೆ ಹೋಗಬೇಕು. ಇಲ್ಲದಿದ್ದರೆ, ಎನ್‌ಎಚ್‌–4ರಲ್ಲಿ ಬಸ್‌ ಹತ್ತಬೇಕು.

ಪೀಣ್ಯ, ಜಾಲಹಳ್ಳಿಯಲ್ಲಿ ವಾಸವಿರುವವರು ಬೇಗನೇ ಮನೆ ತಲುಪುತ್ತಾರೆ. ಅದೇ ಜಯನಗರ, ಮೆಜೆಸ್ಟಿಕ್, ರಾಜಾಜಿನಗರ, ವಿಜಯನಗರ, ರಾಜರಾಜೇಶ್ವರಿ ನಗರ, ಕೋರಮಂಗಲ, ಮಡಿವಾಳ, ಮೈಸೂರು ರಸ್ತೆ ಸೇರಿದಂತೆ ದೂರದಲ್ಲಿರುವ ಸ್ಥಳಗಳಿಗೆ ಹೋಗುವ ಪ್ರಯಾಣಿಕರು ತೊಂದರೆ ಅನುಭವಿಸುತ್ತಾರೆ.

‘ನಿಲ್ದಾಣಕ್ಕೆ ಬರುವುದಕ್ಕಿಂತ ಜಾಲಹಳ್ಳಿ ಕ್ರಾಸ್‌ನಲ್ಲೇ ಇಳಿದು ಬೇರೆ ವಾಹನದಲ್ಲಿ ಮೆಜೆಸ್ಟಿಕ್‌ಗೆ ಹೋಗುವುದೇ ಒಳ್ಳೆಯದು. ಇಷ್ಟು ದೂರ ಬಂದು ಹೋಗುವುದು ಎಲ್ಲರಿಗೂ ಕಷ್ಟ. ಕಾರಿನಲ್ಲಿ ಬಂದು ಹೋಗುವ ಅಧಿಕಾರಿಗಳು, ಜನಪ್ರತಿನಿಧಿಗಳ ತಪ್ಪಿನಿಂದ ಇಲ್ಲಿ ನಿಲ್ದಾಣವಾಗಿದೆ. ಇದರ ಬದಲು ಎನ್‌.ಎಚ್‌–4 ರಸ್ತೆಗೆ ಹೊಂದಿಕೊಂಡ ಜಾಗದಲ್ಲೇ ನಿಲ್ದಾಣ ನಿರ್ಮಿಸಿದ್ದರೆ ಉತ್ತಮ ಸ್ಪಂದನೆ ಸಿಗುತ್ತಿತ್ತು’ ಎಂದು ಪ್ರಯಾಣಿಕ ಟಿ. ವಿಜಯನ್‌ ಹೇಳಿದರು. 

ಧರ್ಮಸ್ಥಳ ಮಾರ್ಗದ ಬಸ್‌ ಚಾಲಕ, ‘ಪೀಣ್ಯ ನಿಲ್ದಾಣದಿಂದ ಬಸ್‌ ಮುಂದೆ ಹೋಗುವುದಿಲ್ಲವೆಂದು ಪ್ರಯಾಣಿಕರನ್ನು ಹತ್ತಿಸಿಕೊಂಡಿದ್ದೆವು. ನಿಲ್ದಾಣ ಬರುತ್ತಿದ್ದಂತೆ ಜಗಳ ತೆಗೆದ ಪ್ರಯಾಣಿಕರು, ಮೆಜೆಸ್ಟಿಕ್‌ವರೆಗೆ ಬಿಟ್ಟುಬನ್ನಿ ಎಂದು ಪಟ್ಟುಹಿಡಿದರು. ಹಿರಿಯ ಅಧಿಕಾರಿಗಳು ನೋಟಿಸ್‌ ಕೊಟ್ಟರೂ ಪರವಾಗಿಲ್ಲ ಎಂದು ಮೆಜೆಸ್ಟಿಕ್‌ಗೆ ಕರೆದೊಯ್ದೆವು’ ಎಂದು ಹೇಳಿದರು.

‘ಪ್ರಯಾಣಿಕರು ಇದ್ದರೆ ಮಾತ್ರ ನಿಲ್ದಾಣ. ಅವರಿಗೆ ಅನುಕೂಲವಿರುವ ಸ್ಥಳದಲ್ಲಿ ನಿಲ್ದಾಣ ನಿರ್ಮಿಸಬೇಕಿತ್ತು. ಇಷ್ಟು ದೂರ ನಿಲ್ದಾಣಕ್ಕೆ ಯಾರೂ ಬರುವುದಿಲ್ಲ. ನಾವೇ ಪ್ರಯಾಣಿಕರಾದರೂ ಅದನ್ನೇ ಮಾಡುತ್ತೇವೆ’ ಎಂದರು.

ಮಳಿಗೆ ಮಾಲೀಕರಿಗೆ ನಷ್ಟ
ನಿಲ್ದಾಣದಲ್ಲಿರುವ ಮಳಿಗೆಗಳ ಮಾಲೀಕರು, ಪ್ರಯಾಣಿಕರಿಲ್ಲದಿದ್ದರಿಂದ ನಷ್ಟ ಅನುಭವಿಸುತ್ತಿದ್ದಾರೆ. ಮಳಿಗೆಯೊಂದರ ಕೆಲಸಗಾರ ರಾಜ್‌ಕುಮಾರ್, ‘ಬೆಳಿಗ್ಗೆ 5 ಗಂಟೆಯಿಂದ ರಾತ್ರಿ 12 ಗಂಟೆಯವರೆಗೆ ಅಂಗಡಿ ತೆರೆದಿರುತ್ತೇವೆ. ವ್ಯಾಪಾರವೇ ಇಲ್ಲ’ ಎಂದರು.

‘ಚಾಲಕರು ಹಾಗೂ ನಿರ್ವಾಹಕರೇ ಸದ್ಯ ನಮ್ಮ ಗ್ರಾಹಕರು. ಹೊಸದಾಗಿ ಬಸ್‌ ಬಿಟ್ಟಿರುವುದರಿಂದ ಜನ ಬರಬಹುದು ಅಂದುಕೊಂಡಿದ್ದೆವು. ಅದು ಹುಸಿಯಾಗುತ್ತಿದೆ’ ಎಂದರು.

ವ್ಯಾಪಾರಿ ಸಂತೋಷ್‌, ‘ನಿಲ್ದಾಣವು ಮುಖ್ಯರಸ್ತೆಯಿಂದ(ಎನ್ಎಚ್4) 1 ಕಿ.ಮೀ ದೂರವಿದೆ. ಹೀಗಾಗಿ ಜನ ಬರುತ್ತಿಲ್ಲ. ಜಾಲಹಳ್ಳಿ ಕ್ರಾಸ್ ಹಾಗೂ ಪೀಣ್ಯ ಇಂಡಸ್ಟ್ರೀಯಿಂದ ಒಳಗೆ ಬಂದು, ಪುನಃ ಅದೇ ರಸ್ತೆಯಲ್ಲಿ ವಾಪಸ್ ಹೋಗುವುದಕ್ಕೆ ಜನರು ಇಷ್ಟಪಡುತ್ತಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.