ADVERTISEMENT

ಪ್ರಯಾಣಿಕರ ಸೋಗಿನಲ್ಲಿ ಕ್ಯಾಬ್‌ ಕದ್ದೊಯ್ದಿದ್ದರು!

​ಪ್ರಜಾವಾಣಿ ವಾರ್ತೆ
Published 27 ಮೇ 2018, 19:47 IST
Last Updated 27 ಮೇ 2018, 19:47 IST

ಬೆಂಗಳೂರು: ಪ್ರಯಾಣಿಕರ ಸೋಗಿನಲ್ಲಿ ತಲಘಟ್ಟಪುರದಿಂದ ಶನಿವಾರ ರಾತ್ರಿ ಓಲಾ ಕ್ಯಾಬ್‌ ಕದ್ದೊಯ್ದಿದ್ದ ದುಷ್ಕರ್ಮಿಗಳು, ಆ ಕ್ಯಾಬ್‌ನ್ನು ಭಾನುವಾರ ತುರುವೇಕೆರೆ ಸಮೀಪ ನಿಲ್ಲಿಸಿ ಹೋಗಿದ್ದಾರೆ.

ಕ್ಯಾಬ್ ಚಾಲಕ ಪುರುಷೋತ್ತಮ್ ತಲಘಟ್ಟಪುರ ಠಾಣೆಗೆ ದೂರು ನೀಡಿದ್ದಾರೆ. ಪರಾರಿಯಾಗಿರುವ ಆರೋಪಿಗಳ ಪತ್ತೆಗೆ ಪೊಲೀಸರ ವಿಶೇಷ ತಂಡ ರಚಿಸಲಾಗಿದೆ.

ತಲಘಟ್ಟಪುರದ 100 ಅಡಿ ರಸ್ತೆಯಲ್ಲಿ ನಿಂತಿದ್ದ ಆರೋಪಿಗಳು, ಮೊಬೈಲ್‌ ಆ್ಯಪ್‌ ಮೂಲಕ ಕ್ಯಾಬ್ ಕಾಯ್ದಿರಿಸಿದ್ದರು. ರಾತ್ರಿ 10 ಗಂಟೆ ಸುಮಾರಿಗೆ ಪುರುಷೋತ್ತಮ, ಕ್ಯಾಬ್‌ ಸಮೇತ ಸ್ಥಳಕ್ಕೆ ಹೋಗಿದ್ದರು. ಅವರಿಗೆ ಮಾರಕಾಸ್ತ್ರ ತೋರಿಸಿ ಬೆದರಿಸಿದ್ದ ಆರೋಪಿಗಳು, ಅವರನ್ನು ತಳ್ಳಿ ಕಾರಿನ ಸಮೇತ ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದರು.

ADVERTISEMENT

ತುರುವೇಕೆರೆ ರಸ್ತೆಯಲ್ಲಿ ಭಾನುವಾರ ಬೆಳಿಗ್ಗೆ ಕಾರು ನಿಲ್ಲಿಸಲಾಗಿತ್ತು. ಅದನ್ನು ಕಂಡಿದ್ದ ಸ್ಥಳೀಯರೊಬ್ಬರು ಮಾಹಿತಿ ನೀಡಿದ್ದರು ಎಂದರು.

ವಿದ್ಯಾರ್ಥಿ ಮೊಬೈಲ್ ಬಳಕೆ: ಕ್ಯಾಬ್‌ ಕಾಯ್ದಿರಿಸಲು ಆರೋಪಿಗಳು, ವಿದ್ಯಾರ್ಥಿಯೊಬ್ಬರ ಮೊಬೈಲ್ ಬಳಕೆ ಮಾಡಿದ್ದರು ಎಂದು ಪೊಲೀಸರು ಹೇಳಿದರು.

ಬಸ್‌ಗಾಗಿ ಕಾಯುತ್ತ ನಿಂತಿದ್ದ ವಿದ್ಯಾರ್ಥಿ ಬಳಿ ಹೋಗಿದ್ದ ಆರೋಪಿಗಳು, ‘ತುರ್ತಾಗಿ ಆಸ್ಪತ್ರೆಗೆ ಹೋಗಬೇಕಿದೆ. ನಮ್ಮ ಮೊಬೈಲ್‌ನಲ್ಲಿ ಇಂಟರ್‌ನೆಟ್‌ ಇಲ್ಲ. ನಿಮ್ಮ ಮೊಬೈಲ್‌ನಲ್ಲಿ ಓಲಾ ಕ್ಯಾಬ್‌ ಕಾಯ್ದಿರಿಸಿ ಸಹಾಯ ಮಾಡಿ’ ಎಂದಿದ್ದರು. ಅದನ್ನು ನಂಬಿದ್ದ ವಿದ್ಯಾರ್ಥಿ, ಕ್ಯಾಬ್‌ ಬುಕ್ಕಿಂಗ್ ಮಾಡಿಕೊಟ್ಟಿದ್ದರು. ಆ ವಿದ್ಯಾರ್ಥಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗಲೇ ಈ ಅಂಶ ಗೊತ್ತಾಯಿತು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.