ADVERTISEMENT

ಪ್ರವಾಸಿ ತಾಣವಾಗಲಿದೆ ಬೇಗೂರು ಕೆರೆ

ಎನ್.ನವೀನ್ ಕುಮಾರ್
Published 31 ಮಾರ್ಚ್ 2018, 19:30 IST
Last Updated 31 ಮಾರ್ಚ್ 2018, 19:30 IST
ಬೇಗೂರು ಕೆರೆ
ಬೇಗೂರು ಕೆರೆ   

ಬೆಂಗಳೂರು: ಐತಿಹಾಸಿಕ ಮಹತ್ವ ಹೊಂದಿರುವ ಬೇಗೂರು ಕೆರೆಯನ್ನುಪ್ರವಾಸಿತಾಣವನ್ನಾಗಿ ಅಭಿವೃದ್ಧಿ ಪಡಿಸಲು ಬಿಬಿಎಂಪಿ ಮುಂದಾಗಿದೆ.

ದಶಕಗಳ ಹಿಂದೆ ಬೇಗೂರು ಸುತ್ತಲಿನ ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುತ್ತಿದ್ದ ಕೆರೆಯು ಈಗ ಕಲುಷಿತಗೊಂಡಿದೆ. ಕೊಳಚೆ ನೀರು ಕೆರೆ ಸೇರುತ್ತಿದೆ. ಸುತ್ತಲೂ ಕಟ್ಟಡದ ಅವಶೇಷಗಳನ್ನು ಸುರಿಯಲಾಗಿದೆ. ಹೂಳು ತುಂಬಿದ್ದು, ಕಳೆ ಬೆಳೆದಿದೆ. ಹೀಗಾಗಿ, ಬಿಬಿಎಂಪಿ ಪುನಶ್ಚೇತನ ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದು, ಗೃಹ ಸಚಿವ ರಾಮಲಿಂಗಾರೆಡ್ಡಿ ಮಾರ್ಚ್‌ 17ರಂದು ಚಾಲನೆ ನೀಡಿದ್ದರು.

‘ಅಭಿವೃದ್ಧಿ ಕಾಮಗಾರಿಯ ಗುತ್ತಿಗೆಯನ್ನು ಅರುಣ್‌ ಕುಮಾರ್‌ ಆ್ಯಂಡ್‌ ಕಂಪನಿಗೆ ವಹಿಸಲಾಗಿದೆ. ಎರಡು ಹಂತಗಳಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾ‌ಗು
ತ್ತದೆ. ಮೊದಲ ಹಂತದಲ್ಲಿ ₹9.5 ಕೋಟಿ ಹಾಗೂ ಎರಡನೇ ಹಂತದಲ್ಲಿ ₹5.5 ಕೋಟಿ ವೆಚ್ಚ ಮಾಡಲಾಗುತ್ತದೆ. ಎರಡು ವರ್ಷಗಳಲ್ಲಿ ಕಾಮಗಾರಿ ಪೂರ್ಣ
ಗೊಳಿಸುವಂತೆ ಸೂಚಿಸಲಾಗಿದೆ. ಕೆರೆಯ ನೀರನ್ನು ಈಗಾಗಲೇ ಹೊರಗೆ ಹಾಕಲಾಗುತ್ತಿದೆ’ ಎಂದು ಬಿಬಿಎಂಪಿ ಕಾರ್ಯನಿರ್ವಾಹಕ ಎಂಜಿನಿಯರ್‌ (ಕೆರೆಗಳ ವಿಭಾಗ) ಜಗನ್ನಾಥ ರಾವ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಕೆರೆಗೆ ಎರಡು ಕಡೆಗಳಿಂದ ಒಳಹರಿವು ಹಾಗೂ ಒಂದು ಕಡೆಯಿಂದ ಹೊರ ಹರಿವು ಇದೆ. ನೈಸ್‌ ರಸ್ತೆ ಹಾಗೂ ಬೇಗೂರು ಸುತ್ತಮುತ್ತಲಿನ ಪ್ರದೇಶಗಳಿಂದ ಬರುವ ಕೊಳಚೆ ನೀರನ್ನು ಬೇರೆಡೆಗೆ ತಿರುಗಿಸಬೇಕು. ಇದಕ್ಕಾಗಿ ದೊಡ್ಡ ಚರಂಡಿಯನ್ನು ನಿರ್ಮಿಸಲಾಗುತ್ತದೆ. ಕೆರೆಯ ಹೂಳು ತೆರವುಗೊಳಿಸಲಾಗುತ್ತದೆ. ವಾಯುವಿಹಾರಿಗಳ ಅನುಕೂಲಕ್ಕಾಗಿ ಸುತ್ತಲೂ ನಡಿಗೆ ಪಥ ನಿರ್ಮಿಸಲಾಗುತ್ತದೆ. ತೆರವುಗೊಳಿಸುವ ಹೂಳಿನಲ್ಲಿ ಯೋಗ್ಯವಾದ ಮಣ್ಣನ್ನುನಡಿಗೆ ಪಥ ನಿರ್ಮಾಣಕ್ಕೆ ಬಳಸಿಕೊಳ್ಳಲು ಉದ್ದೇಶಿಸಲಾಗಿದೆ’ ಎಂದರು.

ಪಕ್ಷಿಗಳಿಗಾಗಿ ಕೆರೆಯ ಮಧ್ಯಭಾಗದಲ್ಲಿ ಎರಡು ನಡುಗಡ್ಡೆಗಳು ತಲೆ ಎತ್ತಲಿವೆ. ಇಲ್ಲಿ ನೇರಳೆ, ಮಾವು ಸೇರಿದಂತೆ ವಿವಿಧ ಹಣ್ಣಿನ ಗಿಡಗಳನ್ನು ನೆಡಲಾಗುತ್ತದೆ. ಮಳೆ ನೀರನ್ನು ಸ್ವಾಭಾವಿಕವಾಗಿ ಶುದ್ಧೀಕರಿಸಲು ಜೌಗು ಪ್ರದೇಶ ಸ್ಥಾಪಿಸಲಾಗುತ್ತದೆ. ರಾಸಾಯನಿಕಗಳನ್ನು ಹೀರಿಕೊಳ್ಳುವಂಥ ಸಸಿಗಳನ್ನು ಇಲ್ಲಿ ಬೆಳೆಸಲಾಗುತ್ತದೆ. ಕೆರೆಯ ಸುತ್ತಲೂ ತಂತಿ ಬೇಲಿ ಅಳವಡಿಸಲಾಗುತ್ತದೆ ಎಂದು ವಿವರಿಸಿದರು.

ಇತಿಹಾಸ ಪ್ರಸಿದ್ಧವಾದ ಬೇಗೂರಿನಕೆರೆ ಮಲಿನಗೊಂಡಿದೆ. ಪ್ರೇಕ್ಷಣೀಯ ಸ್ಥಳವನ್ನಾಗಿ ಅಭಿವೃದ್ಧಿಪಡಿಸಲು ಸಾಧ್ಯವಿದ್ದರೂ ಪಾಲಿಕೆ ಈವರೆಗೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಈಗ, ಪುನಶ್ಚೇತನ ಕಾಮಗಾರಿ ಕೈಗೆತ್ತಿಕೊಂಡಿರುವುದು ಸಂತಸ ತಂದಿದೆ. ಆದರೆ, ಕೆಲಸವನ್ನು ತ್ವರಿಗತಿಯಲ್ಲಿಪೂರ್ಣಗೊಳಿಸಬೇಕು ಎಂದು ವಿಶ್ವಪ್ರಿಯ ಬಡಾವಣೆಯ ನಿವಾಸಿ ಬಿ.ಕೆ.ರಾಜೇಶ್‌ ಒತ್ತಾಯಿಸಿದರು.

ದೋಣಿ ವಿಹಾರಕ್ಕೆ ಅವಕಾಶ

ಬೆಂಗಳೂರು–ಹೊಸೂರು ರಸ್ತೆಯಲ್ಲಿ ಪ್ರೇಕ್ಷಣೀಯ ಸ್ಥಳಗಳು ಕಡಿಮೆ. ಈ ಭಾಗದಲ್ಲಿ ಸಂಚರಿಸುವ ಪ್ರವಾಸಿಗರನ್ನು ಸೆಳೆಯುವ ಉದ್ದೇಶದಿಂದ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ (ಕೆಎಸ್‌ಟಿಡಿಸಿ) ಮೂಲಕ ಬೇಗೂರು ಕೆರೆಯಲ್ಲಿ ದೋಣಿ ವಿಹಾರಕ್ಕೆ ಅವಕಾಶ ಕಲ್ಪಿಸಲು ಉದ್ದೇಶಿಸಲಾಗಿದೆ ಎಂದು ಜಗನ್ನಾಥ ರಾವ್‌ ತಿಳಿಸಿದರು. ಚೋಳರ ಕಾಲದ ಪ್ರಮುಖ ಸ್ಥಳವಾಗಿರುವ ಬೇಗೂರಿನಲ್ಲಿ ನಾಗೇಶ್ವರ ದೇವಸ್ಥಾನ ಪ್ರಸಿದ್ಧಿ ಪಡೆದಿದೆ. ಇದರ ಪಕ್ಕದಲ್ಲೇ ಕೆರೆ ಇದೆ. ಈ ದೇವಾಲಯಕ್ಕೆ ಪ್ರತಿದಿನ ಸಾವಿರಾರು ಭಕ್ತರು ಬರುತ್ತಾರೆ. ಕೆರೆಯಲ್ಲಿ ದೋಣಿ ವಿಹಾರಕ್ಕೆ ವ್ಯವಸ್ಥೆ ಮಾಡಿದರೆ, ಮನರಂಜನಾ ತಾಣವಾಗಿಯೂ ಖ್ಯಾತಿ ಪಡೆಯುತ್ತದೆ. ಹೀಗಾಗಿ, ಪ್ರವಾಸಿಗರು ದೋಣಿಯಲ್ಲಿ ಹತ್ತಲು ಹಾಗೂ ಇಳಿಯಲು ‘ಬೋಟ್‌ ಜಟ್ಟಿ’ಯನ್ನು ನಿರ್ಮಿಸಲಾಗುತ್ತದೆ ಎಂದರು.

ಚಿಕ್ಕಬೇಗೂರು ಕೆರೆಯಲ್ಲಿ ಎಸ್‌ಟಿಪಿ

ಬೇಗೂರು ಕೆರೆ ಕೋಡಿ ಬಿದ್ದಾಗ ಆ ನೀರು ಚಿಕ್ಕಬೇಗೂರು ಕೆರೆ ಸೇರುತ್ತದೆ. ಆದರೆ, ಈ ಕೆರೆ ಸಂಪೂರ್ಣವಾಗಿ ಕಲುಷಿತಗೊಂಡಿದೆ. ಇದಕ್ಕೆ ಕಾಯಕಲ್ಪ ನೀಡಲುಉದ್ದೇಶಿಸಲಾಗಿದೆ. ಇಲ್ಲಿ 50 ಲಕ್ಷ ಲೀಟರ್‌ ಸಾಮರ್ಥ್ಯದ ಕೊಳಚೆ ನೀರು ಶುದ್ಧೀಕರಣಘಟಕವನ್ನು (ಎಸ್‌ಟಿಪಿ) ಜಲಮಂಡಳಿಯು ನಿರ್ಮಿಸುತ್ತಿದೆ. ಅದು ಪೂರ್ಣಗೊಂಡ ಬಳಿಕ, ಪುನಶ್ಚೇತನ ಕಾಮಗಾರಿ ಕೈಗೊಳ್ಳಲಾಗುತ್ತದೆ ಎಂದು ಜಗನ್ನಾಥ ರಾವ್‌ ಹೇಳಿದರು.

ಬೇಗೂರಿನ ದೇವಸ್ಥಾನಗಳು

* ನಾಗೇಶ್ವರ ದೇವಸ್ಥಾನ

* ಗಂಗಾಪರಮೇಶ್ವರಿ ದೇವಾಲಯ

* ಆಂಜನೇಯಸ್ವಾಮಿ ದೇವಸ್ಥಾನ

* ಚೌಡೇಶ್ವರಿ ದೇವಾಲಯ

* ವೀರಭದ್ರೇಶ್ವರ ದೇವಾಲಯ

* ಸುಬ್ರಹ್ಮಣ್ಯ ದೇವಸ್ಥಾನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.