ಬೆಂಗಳೂರು: ‘ಸಾಹಿತಿಗಳೆಲ್ಲರೂ ಪ್ರಸಿದ್ಧಿಗಾಗಿಯೇ ಸಾಹಿತ್ಯ ರಚನೆ ಮಾಡುವವರು. ಸಾಹಿತ್ಯ ರಚನೆಯ ಹಿಂದೆ ಪ್ರಸಿದ್ಧಿಯ ಆಸೆಯಿಲ್ಲ ಎಂದರೆ ಅದು ಅಪ್ರಾಮಾಣಿಕತೆಯಾಗುತ್ತದೆ’ ಎಂದು ಸಾಹಿತಿ ಬೋಳುವಾರು ಮಹಮ್ಮದ್ ಕುಂಞ ಅಭಿಪ್ರಾಯಪಟ್ಟರು. ಎನ್.ಆರ್.ಎ.ಎಂ.ಎಚ್ ಪ್ರಕಾಶನ ಸಂಸ್ಥೆಯು ನಗರದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ದಿವಂಗತ ಪಾಂಡೇಶ್ವರ ಸೂರ್ಯನಾರಾಯಣ ಚಡಗ ಸ್ಮಾರಕ ಪ್ರಶಸ್ತಿ’ ಸ್ವೀಕರಿಸಿ ಅವರು ಮಾತನಾಡಿದರು.
‘ಕೆಲವರು ನುಡಿಸೇವೆಗಾಗಿ ಸಾಹಿತ್ಯ ರಚಿಸುತ್ತೇನೆ ಎಂದು ಹೇಳಿಕೊಳ್ಳುತ್ತಾರೆ. ಕೆಲವರು ಪ್ರಶಸ್ತಿ ಹಾಗೂ ಪ್ರಸಿದ್ಧಿಗಾಗಿ ಸಾಹಿತ್ಯ ರಚಿಸುವುದಿಲ್ಲ ಎಂದು ಹೇಳಿಕೊಳ್ಳುತ್ತಾರೆ. ಆದರೆ, ಪ್ರತಿಯೊಬ್ಬ ಸಾಹಿತಿಗೂ ಪ್ರಸಿದ್ಧಿಯ ಆಸೆ ಇದ್ದೇ ಇರುತ್ತದೆ’ ಎಂದರು. ‘ಸಾಹಿತ್ಯ ಸಮಾಜದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ.
ಸಾಹಿತ್ಯದಿಂದ ಒಳ್ಳೆಯ ಪರಿಣಾಮವೂ ಆಗುತ್ತದೆ. ಕೆಲವೊಮ್ಮೆ ಕೆಟ್ಟ ಪರಿಣಾಮವೂ ಆಗುತ್ತದೆ. ಮನುಷ್ಯ ಸಂಪೂರ್ಣ ಒಳ್ಳೆಯವನಾಗಿ ಬದುಕಲು ಸಾಧ್ಯವಿಲ್ಲ. ಆದರೆ, ಕಡಿಮೆ ಕೆಟ್ಟವರಾಗಿ ಬದುಕಲು ನಾವೆಲ್ಲರೂ ಪ್ರಯತ್ನಿಸಬೇಕು’ ಎಂದು ಹೇಳಿದರು. ‘ಸ್ವಾತಂತ್ರ್ಯದ ಓಟ ಕಾದಂಬರಿಯನ್ನು ಮೂರೂವರೆ ವರ್ಷಗಳ ಕಾಲ ಬರೆದೆ.
ಬಹುಶಃ ಕಂಪ್ಯೂಟರ್ ಇಲ್ಲದಿದ್ದರೆ ನಾನು ಈ ಕಾದಂಬರಿ ಬರೆಯಲು ಸಾಧ್ಯವಾಗುತ್ತಿರಲಿಲ್ಲ. ಕಂಪ್ಯೂಟರ್ ಬಂದ ನಂತರ ಕಾದಂಬರಿ ಬರೆಯುವುದು ಸುಲಭವಾಗಿದೆ. ಕಾದಂಬರಿಯ ಒಂದಷ್ಟು ಭಾಗವನ್ನು ಕತ್ತರಿಸುವುದು, ಅದನ್ನು ಮತ್ತೆಲ್ಲೋ ಜೋಡಿಸುವುದು ಕಂಪ್ಯೂಟರ್‌ನಿಂದ ಸುಲಭವಾಗಿದೆ’ ಎಂದರು.
‘ಸ್ಥಳೀಯವಾಗಿ ಪ್ರಚಾರ ಸಿಕ್ಕಾಗ ಆಗುವ ಸಂತೋಷಕ್ಕೆ ಹೆಚ್ಚು ಬೆಲೆಯಿದೆ. ಅಂತಹ ಸಂತೋಷ ನನಗಿಂದು ಸಿಕ್ಕಿದೆ. ಕೋಟೇಶ್ವರದ ಜನ ಸೂರ್ಯನಾರಾಯಣ ಚಡಗ ಅವರ ಹೆಸರಿನ ಪ್ರಶಸ್ತಿ ನೀಡಿ ಸನ್ಮಾನಿಸುತ್ತಿರುವುದು ನನ್ನ ಜವಾಬ್ದಾರಿ ಹಾಗೂ ಸಂತೋಷವನ್ನು ಇಮ್ಮಡಿಗೊಳಿಸಿದೆ’ ಎಂದರು.
ಲೇಖಕ ಬೆಳಗೋಡು ರಮೇಶ್ ಭಟ್, ‘ಯಾವುದೇ ಪಂಥಕ್ಕೆ ಸಿಲುಕದೆ ಎಲ್ಲ ಕಾಲಕ್ಕೂ ಸಲ್ಲುವ ಸಾಹಿತ್ಯ ಸೃಷ್ಟಿಸಿದವರು ಬೋಳುವಾರು. ಅವರ ಸಾಹಿತ್ಯ ಎಲ್ಲ ಮಿತಿಗಳನ್ನು ಮೀರುವಂಥದು. ಇತರರ ನೋವಿಗೆ ಲೇಖನಿಯಾದವರು ಅವರು’ ಎಂದು ಹೇಳಿದರು. ಪ್ರಶಸ್ತಿಯು ₨ 10 ಸಾವಿರ ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.