ADVERTISEMENT

ಪ್ರೇಮ ವೈಫಲ್ಯದಿಂದ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 23 ಮೇ 2012, 19:30 IST
Last Updated 23 ಮೇ 2012, 19:30 IST

ಬೆಂಗಳೂರು: ಮಹದೇವಪುರದ ಎಇಸಿಎಸ್ ಲೇಔಟ್‌ನಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದ ಸಾಫ್ಟ್‌ವೇರ್ ಎಂಜಿನಿಯರ್ ಎಸ್.ಶ್ರೀರಾಗ್ (26) ಅವರ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ಹಾಗೂ ಘಟನಾ ಸ್ಥಳ ಪರಿಶೀಲಿಸಿದ ವಿಧಿವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್) ತಜ್ಞರ ಅಭಿಪ್ರಾಯವನ್ನು ಆಧರಿಸಿ ಪೊಲೀಸರು ಈ ಪ್ರಕರಣ ಕೊಲೆಯಲ್ಲ, ಬದಲಿಗೆ ಆತ್ಮಹತ್ಯೆ ಎಂಬ ನಿರ್ಧಾರಕ್ಕೆ ಬಂದಿದ್ದಾರೆ.

`ಶ್ರೀರಾಗ್ ಸಾವಿನ ಪ್ರಕರಣ ಕೊಲೆಯಲ್ಲ. ಅವರು ಪ್ರೇಮ ವೈಫಲ್ಯದ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ~ ಎಂದು ಉನ್ನತ ಪೊಲೀಸ್ ಮೂಲಗಳು `ಪ್ರಜಾವಾಣಿ~ಗೆ ತಿಳಿಸಿವೆ.
ನಗರದ ಬೌರಿಂಗ್ ಆಸ್ಪತ್ರೆಯಲ್ಲಿ ಬುಧವಾರ ಶ್ರೀರಾಗ್ ಅವರ ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ಕುಟುಂಬ ಸದಸ್ಯರಿಗೆ ಒಪ್ಪಿಸಲಾಯಿತು. ಬಳಿಕ ಅವರು ಶವವನ್ನು ಕೇರಳಕ್ಕೆ ಕೊಂಡೊಯ್ದರು.
 

ಘಟನೆ ಸಂಬಂಧ ಕುಟುಂಬ ಸದಸ್ಯರು ಯಾವುದೇ ಆರೋಪಗಳನ್ನು ಮಾಡಿಲ್ಲ ಮತ್ತು ದೂರು ಸಹ ಕೊಟ್ಟಿಲ್ಲ ಎಂದು ಪೊಲೀಸರು ಹೇಳಿದ್ದಾರೆ.ಮರಣೋತ್ತರ ಪರೀಕ್ಷೆ ವೇಳೆ ಶ್ರೀರಾಗ್ ಹೊಟ್ಟೆಯಲ್ಲಿ ಸುಮಾರು 100 ನಿದ್ರೆ ಮಾತ್ರೆಗಳು ಪತ್ತೆಯಾಗಿವೆ. ಅವುಗಳಲ್ಲಿ ಕೆಲ ಮಾತ್ರೆಗಳು ಅರ್ಧಂಬರ್ಧ ಕರಗಿವೆ.

ಅವರು ನಿದ್ರೆ ಮಾತ್ರೆ ನುಂಗಿ ಬಳಿಕ ಮುಖವನ್ನು ಪ್ಲಾಸ್ಟಿಕ್ ಕವರ್‌ನಿಂದ ಮುಚ್ಚಿಕೊಂಡು, ಅದರ ಮೇಲೆ 20ಕ್ಕೂ ಹೆಚ್ಚು ಬಾರಿ ಸೆಲೊ ಟೇಪ್ ಸುತ್ತಿಕೊಂಡು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಆ ನಿದ್ರೆ ಮಾತ್ರೆಗಳು ಮತ್ತು ಶ್ರೀರಾಗ್ ಅವರ ಅಂಗಾಂಶಗಳನ್ನು ಎಫ್‌ಎಸ್‌ಎಲ್ ಪರೀಕ್ಷೆಗೆ ಕಳುಹಿಸಲಾಗುತ್ತದೆ. ಮೂರ‌್ನಾಲ್ಕು ದಿನಗಳಲ್ಲಿ ಮರಣೋತ್ತರ ಪರೀಕ್ಷೆಯ ವರದಿ ಸಹ ನೀಡಲಾಗುತ್ತದೆ~ ಎಂದು ಬೌರಿಂಗ್ ಆಸ್ಪತ್ರೆಯ ವಿಧಿವಿಜ್ಞಾನ ವಿಭಾಗದ ಮೂಲಗಳು ಹೇಳಿವೆ.

ಸಂಕೀರ್ಣ ಪ್ರಕರಣ: `ಇದು ಅತ್ಯಂತ ಸಂಕೀರ್ಣ ಆತ್ಮಹತ್ಯೆ ಪ್ರಕರಣ ಎನಿಸಿದೆ. ಘಟನಾ ಸ್ಥಳದಲ್ಲಿ ಶವವನ್ನು ಕಂಡ ತಕ್ಷಣ ಇದು ಮೇಲ್ನೋಟಕ್ಕೆ ಕೊಲೆ ಪ್ರಕರಣವೆಂಬ ಶಂಕೆ ಮೂಡಿತ್ತು. ಆದರೆ, ಪ್ರಾಥಮಿಕ ತನಿಖೆ ಕೈಗೊಂಡ ಬಳಿಕ ಇದು ಆತ್ಮಹತ್ಯೆಯಲ್ಲ ಎಂಬ ಸಂಗತಿ ಅರಿವಿಗೆ ಬಂತು. ಪ್ರಾಯಶಃ ಇದು ದೇಶದಲ್ಲೇ ವಿಧಿವಿಜ್ಞಾನ ಪ್ರಯೋಗಕ್ಕೆ ಅಪರೂಪವಾದ ಪ್ರಕರಣವಾಗಿದೆ~ ಎಂದು ಎಫ್‌ಎಸ್‌ಎಲ್ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ಶ್ರೀರಾಗ್, ಬಾರ್ಬಿಚ್ಯುರೇಟ್ (ನಿದ್ರೆ ಮಾತ್ರೆಯಲ್ಲಿ ಬಳಸುವ ರಾಸಾಯನಿಕ ವಸ್ತು) ಅಂಶವಿರುವ ಮಾತ್ರೆಗಳನ್ನು ನುಂಗಿದ್ದರು.  ಆ ಮಾತ್ರೆಗಳು ದೇಹದ ಮೇಲೆ ಪ್ರಭಾವ ಬೀರುವುದಕ್ಕೂ ಮುನ್ನವೇ ಅವರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

`ಘಟನಾ ಸ್ಥಳದ ಚಿತ್ರಣ ತನಿಖೆಯ ದಿಕ್ಕು ತಪ್ಪಿಸಿತ್ತು. ಈ ಹಿನ್ನೆಲೆಯಲ್ಲೇ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ, ಸ್ಥಳದಲ್ಲಿ ಸಿಕ್ಕಿದ ಸಾಂದರ್ಭಿಕ ಸಾಕ್ಷ್ಯಗಳು ತನಿಖೆಯ ದಿಕ್ಕನ್ನು ಬದಲಿಸಿದವು. ಶ್ರೀರಾಗ್ ಕಾರಿನ ಮೇಲೆ ಬೇರೆ ಯಾವುದೇ ವ್ಯಕ್ತಿಗಳ ಬೆರಳಚ್ಚು ಇರಲಿಲ್ಲ ಮತ್ತು ಪೊಲೀಸ್ ಶ್ವಾನಗಳು ಸಹ ಕಾರಿನ ಸುತ್ತಲೇ ಸುಳಿದಾಡಿದ್ದು ತನಿಖೆಗೆ ನೆರವಾಯಿತು. ಈ ಅಂಶಗಳು ಶ್ರೀರಾಗ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ನಿರ್ಧಾರಕ್ಕೆ ಬರಲು ಕಾರಣವಾದವು~ ಎಂದು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT