ADVERTISEMENT

ಪ್ರೇಯಸಿ ಎದುರು ಪ್ಯಾಂಟ್ ಬಿಚ್ಚಿದ ರೌಡಿ!

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2018, 20:11 IST
Last Updated 4 ಏಪ್ರಿಲ್ 2018, 20:11 IST

ಬೆಂಗಳೂರು: ಪ್ರೇಯಸಿ ಎದುರು ಪ್ಯಾಂಟ್ ಬಿಚ್ಚಿ ಅನುಚಿತವಾಗಿ ವರ್ತಿಸಿದ್ದಲ್ಲದೆ, ಅವರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ ಆರೋಪದಡಿ ರೌಡಿಶೀಟರ್ ಜಾನ್ ಎಂಬಾತನನ್ನು ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ.

ಸುಬ್ಬಯ್ಯನಪಾಳ್ಯ ನಿವಾಸಿ ಜಾನ್, ಏಳು ವರ್ಷಗಳಿಂದ ತನ್ನ ಮನೆ ಸಮೀಪದ ಯುವತಿಯನ್ನು ಪ್ರೀತಿಸುತ್ತಿದ್ದ. ಪರಸ್ಪರರ ನಡುವೆ ಇತ್ತೀಚೆಗೆ ಮನಸ್ತಾಪ ಉಂಟಾಗಿತ್ತು. ಏಪ್ರಿಲ್‌ 1ರ ಬೆಳಿಗ್ಗೆ 9.30ರ ಸುಮಾರಿಗೆ ಪಾನಮತ್ತನಾಗಿ ಅವರ ಮನೆ ಹತ್ತಿರ ಹೋಗಿದ್ದ ಆರೋಪಿ, ತನ್ನೊಟ್ಟಿಗೆ ಬರುವಂತೆ ಜಗಳ ಶುರು ಮಾಡಿದ್ದ. ಇದರಿಂದ ವಾಗ್ವಾದ ನಡೆದು ಪ್ರೇಯಸಿ ಹಾಗೂ ಅವರ ತಾಯಿಗೆ ಚಾಕುವಿನಿಂದ ಹಲ್ಲೆ ನಡೆಸಿದ್ದ ಎಂದು ಪೊಲೀಸರು ಹೇಳಿದ್ದಾರೆ.

‘ನಾವಿಬ್ಬರೂ ಪ್ರೀತಿ ಮಾಡುತ್ತಿದ್ದುದು ನಿಜ. ನಾನು ಸ್ನೇಹಿತರ ಜತೆ ಎಲ್ಲಿಗಾದರೂ ಹೋದರೆ, ಹೇಳದೆ ಕೇಳದೆ ಹೋಗಿದ್ದೀಯಾ ಎಂದು ಜಾನ್ ಗಲಾಟೆ ಮಾಡುತ್ತಿದ್ದ. ಈ ವರ್ತನೆಯಿಂದ ಬೇಸರಗೊಂಡು ಕೆಲ ದಿನಗಳಿಂದ ಆತನಿಂದ ದೂರ ಉಳಿದಿದ್ದೆ. ಮನೆ ಹತ್ತಿರ ಬಂದ ಜಾನ್, ‘ನೀನು ನನ್ನನ್ನು ಪ್ರೀತಿಸಬೇಕು. ಇಲ್ಲವಾದರೆ, ಒಂದು ಗತಿ ಕಾಣಿಸುತ್ತೇನೆ’ ಎಂದು ಕೂಗಾಡುತ್ತಿದ್ದ. ಆಗ ನನ್ನ ತಾಯಿ, ‘ಅವಳಿಗೆ ಇಷ್ಟವಿಲ್ಲ ಎಂದ ಮೇಲೆ ನೀನ್ಯಾಕೆ ಬಲವಂತ ಮಾಡುತ್ತೀಯಾ‘ ಎಂದು ಪ್ರಶ್ನಿಸಿದರು.

ADVERTISEMENT

ಅಷ್ಟಕ್ಕೇ ಚಾಕುವಿನಿಂದ ಅವರ ಕೈಗೆ ಹಲ್ಲೆ ನಡೆಸಿದ’ ಎಂದು ಸಂತ್ರಸ್ತೆ ದೂರಿನಲ್ಲಿ ಹೇಳಿದ್ದರು. ‘ಪ್ಯಾಂಟ್ ಜಿಪ್ ಬಿಚ್ಚಿಕೊಂಡು ಎಲ್ಲರೆದರೂ ನನ್ನ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದ. ‘ಹೀಗಾಗಿ, ಜಾನ್‌ ವಿರುದ್ಧ ಕ್ರಮ ಜರುಗಿಸಿ ಎಂದು ಸಂತ್ರಸ್ತೆ ಮನವಿ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.