ADVERTISEMENT

ಪ್ರೇಯಸಿ ಎದುರೇ ಯುವಕ ನೇಣಿಗೆ ಶರಣು

​ಪ್ರಜಾವಾಣಿ ವಾರ್ತೆ
Published 4 ಮೇ 2012, 19:30 IST
Last Updated 4 ಮೇ 2012, 19:30 IST
ಪ್ರೇಯಸಿ ಎದುರೇ ಯುವಕ ನೇಣಿಗೆ ಶರಣು
ಪ್ರೇಯಸಿ ಎದುರೇ ಯುವಕ ನೇಣಿಗೆ ಶರಣು   

ಬೆಂಗಳೂರು: ಮಣಿಪುರ ಮೂಲದ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಪ್ರೇಯಸಿಯ ಎದುರೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸುದ್ದಗುಂಟೆಪಾಳ್ಯ ಸಮೀಪದ ವೆಂಕಟೇಶ್ವರ ಲೇಔಟ್‌ನಲ್ಲಿ ಗುರುವಾರ ರಾತ್ರಿ ನಡೆದಿದೆ.

ಚಂದಾಪುರದಲ್ಲಿರುವ ಬೆಂಗಳೂರು ತಾಂತ್ರಿಕ ಶಿಕ್ಷಣ ಸಂಸ್ಥೆಯಲ್ಲಿ ಬಿ.ಇ (ಮೆಕಾನಿಕಲ್ ವಿಭಾಗ) ಓದುತ್ತಿದ್ದ ಜಾಕಿಯೊ ಹೇಸ್ನಮ್ ಸಿಂಗ್ (23) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಅವರು ರಿಷಿಕಾಂತ್ ಮತ್ತು ಹಿಮದ್‌ಸಿಂಗ್ ಎಂಬ ಸ್ನೇಹಿತರ ಜತೆ ಎರಡು ವರ್ಷಗಳಿಂದ ವೆಂಕಟೇಶ್ವರ ಲೇಔಟ್‌ನ ಐದನೇ ಅಡ್ಡರಸ್ತೆಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.

ಆತನ ತಂದೆ ಚೌಬ ಹೇಸ್ನಮ್ ಸಿಂಗ್ ಅವರು ಮಣಿಪುರದಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿಯಾಗಿದ್ದಾರೆ. ಜಾಕಿಯೊ, ನಗರದ ಮಡಿವಾಳ ಬಳಿಯ ಮಾರುತಿನಗರದಲ್ಲಿ ನೆಲೆಸಿರುವ ಮಣಿಪುರ ಮೂಲದ ಯುವತಿಯನ್ನು ಪ್ರೀತಿಸುತ್ತಿದ್ದ. ಆ ಯುವತಿ ಜ್ಯೋತಿನಿವಾಸ್ ಕಾಲೇಜಿನ ವಿದ್ಯಾರ್ಥಿನಿ ಎಂದು ಪೊಲೀಸರು ಹೇಳಿದ್ದಾರೆ.

ಜಾಕಿಯೊ ಪ್ರೇಯಸಿಗೆ ಕಾಲೇಜಿನಲ್ಲಿ ಎರಡು ವಾರಗಳಿಂದ ಪರೀಕ್ಷೆ ನಡೆಯುತ್ತಿತ್ತು. ಈ ಹಿನ್ನೆಲೆಯಲ್ಲಿ ಪರೀಕ್ಷಾ ತಯಾರಿಯಲ್ಲಿ ತೊಡಗಿಕೊಂಡಿದ್ದ ಆಕೆ, ಆತನ ಮೊಬೈಲ್ ಕರೆಗಳನ್ನು ಸ್ವೀಕರಿಸಿರಲಿಲ್ಲ.

ಇದರಿಂದ ಕೋಪಗೊಂಡಿದ್ದ ಆತ, ಪ್ರೇಯಸಿ ತನ್ನನ್ನು ನಿರ್ಲಕ್ಷಿಸುತ್ತಿದ್ದಾಳೆ ಎಂದು ಬೇಸರಗೊಂಡಿದ್ದ. ಗುರುವಾರ ಸಂಜೆ ಪರಸ್ಪರ ಭೇಟಿಯಾದ ಅವರು ಬ್ರಿಗೇಡ್ ರಸ್ತೆಯಲ್ಲಿ ರಾತ್ರಿವರೆಗೂ ಶಾಪಿಂಗ್ ಮಾಡಿದ್ದರು. ನಂತರ ಆತ ಪ್ರೇಯಸಿಯನ್ನು ಜತೆಯಲ್ಲೇ ತನ್ನ ಮನೆಗೆ ಕರೆದುಕೊಂಡು ಹೋಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವೇಳೆ ಆತ, `ನನ್ನ ಮೊಬೈಲ್ ಕರೆಗಳನ್ನು ಏಕೆ ಸ್ವೀಕರಿಸುತ್ತಿರಲಿಲ್ಲ~ ಎಂದು ಪ್ರೇಯಸಿಗೆ ಪ್ರಶ್ನಿಸಿದ. ಈ ವಿಷಯವಾಗಿ ಪರಸ್ಪರರ ನಡುವೆ ವಾಗ್ವಾದ ನಡೆದು ಜಗಳವಾಯಿತು. ಇದರಿಂದ ಮನನೊಂದ ಆತ, ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪ್ರೇಯಸಿಗೆ ಬೆದರಿಸಿ ಆಕೆಯ ಎದುರೇ ಹಗ್ಗದಿಂದ ಫ್ಯಾನ್‌ಗೆ ನೇಣು ಹಾಕಿಕೊಂಡಿದ್ದಾನೆ.

ಪ್ರಿಯಕರ ತನ್ನನ್ನು ಹೆದರಿಸಲು ಈ ರೀತಿ ಮಾಡುತ್ತಿದ್ದಾನೆ ಎಂದು ಭಾವಿಸಿದ ಯುವತಿ ಆತನನ್ನು ತಡೆಯಲು ಯತ್ನಿಸಿಲ್ಲ. ಜಾಕಿಯೊ ಮೂರ‌್ನಾಲ್ಕು ನಿಮಿಷ ಕಳೆದರೂ ನೇಣಿನ ಕುಣಿಕೆಯಿಂದ ಕೆಳಗಿಳಿಯಲಿಲ್ಲ. ಇದರಿಂದ ಆತಂಕಗೊಂಡ ಆಕೆ, ಮನೆಯ ಮತ್ತೊಂದು ಕೊಠಡಿಯಲ್ಲಿದ್ದ ರಿಷಿಕಾಂತ್ ಮತ್ತು ಹಿಮದ್‌ಸಿಂಗ್ ಅವರಿಗೆ ಕೂಡಲೇ ವಿಷಯ ತಿಳಿಸಿದ್ದಾಳೆ.

ನಂತರ ಅವರು ಜಾಕಿಯೊನನ್ನು ನೇಣಿನ ಕುಣಿಕೆಯಿಂದ ಕೆಳಗಿಳಿಸಿ ಆಸ್ಪತ್ರೆಗೆ ಕರೆದೊಯ್ದರು. ಆತನನ್ನು ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ಹೇಳಿದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಘಟನೆ ಸಂಬಂಧ ಮೈಕೊಲೇಔಟ್ ಪೊಲೀಸರು ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಕಾಲ ಮಿಂಚಿತ್ತು: `ಜಾಕಿಯೊ ಭಾವುಕ ವ್ಯಕ್ತಿಯಾಗಿದ್ದ. ಮೊಬೈಲ್ ಕರೆಗಳನ್ನು ಸ್ವೀಕರಿಸದ ಕಾರಣಕ್ಕೆ ಆತ ನನ್ನೊಂದಿಗೆ ರಾತ್ರಿ ಜಗಳವಾಡಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ. ಈ ಸಂಗತಿಯನ್ನು ನಾನು ಗಂಭೀರವಾಗಿ ಪರಿಗಣಿಸಲಿಲ್ಲ.

ಆತ ನೇಣಿನ ಕುಣಿಕೆಯಿಂದ ಕೆಳಗಿಳಿಯದಿದ್ದರಿಂದ ಆತಂಕಗೊಂಡ ನಾನು ಹತ್ತಿರ ಹೋಗಿ ನೋಡಿದಾಗ ಜಾಕಿಯೊ ಪ್ರಜ್ಞೆ ತಪ್ಪಿರುವುದು ಗೊತ್ತಾಯಿತು. ಸ್ನೇಹಿತರಾದ ರಿಷಿಕಾಂತ್ ಮತ್ತು ಹಿಮದ್‌ಸಿಂಗ್ ನೆರವಿನಿಂದ ಪ್ರಿಯಕರನನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ದೆ. ಆದರೆ, ಆ ವೇಳೆಗೆ ಕಾಲ ಮಿಂಚಿ ಹೋಗಿತ್ತು. ಕೊನೆಗೂ ಆತನನ್ನು ಉಳಿಸಿಕೊಳ್ಳಲು ಆಗಲಿಲ್ಲ~ ಎಂದು ಜಾಕಿಯೊ ಪ್ರೇಯಸಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.